Advertisement

ಲಾಕ್‌ಡೌನ್ ಮೆಲೋಡಿ: ಲೈವ್‌@ ಸೋಶಿಯಲ್‌ ಮೀಡಿಯಾ

05:24 PM May 05, 2020 | mahesh |

ಏನ್‌ ಲಾಕ್‌ಡೌನ್‌ ರೀ… ಬರೀ ಬೋರು ಅನ್ನೋರು, ಒಂದು ಸಲ ಸಾಮಾಜಿಕ ಜಾಲತಾಣವನ್ನು ಹೊಕ್ಕು ನೋಡಿ. ನೀವು ಸಂಗೀತಪ್ರಿಯರಾಗಿದ್ದರಂತೂ, ಬೋರ್‌ ಅನ್ನೋ ಮಾತೇ ನಿಮ್ಮ ಬಾಯಲ್ಲಿ ಬರೋಲ್ಲ. ಏಕೆಂದರೆ, ಬೆಳಗಿನಿಂದ ಸಂಜೆಯತನಕ, ಸಂಗೀತ ಅನ್ನೋನಂದಾದೀಪ ಫೇಸ್‌ಬುಕ್‌, ಇನ್‌ಸ್ಟ್ರಾಗ್ರಾಮ್‌ನಲ್ಲಿ ಉರಿಯುತ್ತಲೇ ಇದೆ. ಪಂ. ಜಾಕೀರ್‌ ಹುಸೇನ್‌, ಪಂ. ರವೀಂದ್ರ ಯಾವಗಲ್, ರವೀಂದ್ರ ಕಾಟೋಟಿ, ಪ್ರವೀಣ್‌ ಡಿ. ರಾವ್‌ ಹೀಗೆ, ಹಿರಿಯ ಕಲಾವಿದರ ದಂಡು, ಈ ನಂದಾದೀಪಕ್ಕೆ ಎಣ್ಣೆ ಪೂರೈಸುತ್ತಲೇ ಇದೆ.

Advertisement

ಲಾಕ್‌ಡೌನ್‌ ಶುರುವಾದಾಗಿನಿಂದ, ಯಾರು ನೆಮ್ಮದಿಯಾಗಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಯುವ ಕಲಾವಿದರ ಸಂಕುಲ ಬ್ಯುಸಿಯಾಗಿದೆ. ಇತರರನ್ನೂ ಬ್ಯುಸಿಯಾಗಿಟ್ಟಿದೆ. ಸಂಜೆ ಅನ್ನೋದು, ಕಲಾವಿದರ ಪಾಲಿನ ಅಮೃತ ಘಳಿಗೆ. ಲಾಕ್‌ಡೌನ್‌ ಆದಮೇಲೆ, ಇವರೆಲ್ಲಾ ಮನೆಯಲ್ಲಿ ಏನು ಮಾಡುತ್ತಿದ್ದಾರೆ ಗೊತ್ತೆ? ಜಾಲತಾಣದ ಜಗುಲಿಯಲ್ಲಿ ಕೂತು, ರಾತ್ರಿ 10 ಗಂಟೆ ತನಕ ಕಾರ್ಯಕ್ರಮ ಕೊಡುತ್ತಿದ್ದಾರೆ!

ಇದರಿಂದ, ಯುವ ಕಲಿಕಾರ್ತಿಗಳಿಗೆ ನಾನಾ ರೀತಿಯ ಪಾಠವಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ಸಿನಿಮಾ ಸಂಗೀತ… ಹೀಗೆ, ದೇವರ ಮುಂದೆ ಉರಿಯುವ ದೀಪದಂತೆ, ಫೇಸ್‌ಬುಕ್‌ನಲ್ಲಿ ಸಂಗೀತ ಶುರುವಾಗುತ್ತದೆ. ಲೈವ್‌ ಕಾರ್ಯಕ್ರಮದ ಮೂಲಕ, ರಾಜ್ಯದ ಗಡಿ ದಾಟಿ, ದೇಶ- ವಿದೇಶಗಳ ಲಕ್ಷಾಂತರ ಜನರನ್ನು ಸಂಗೀತ ಮತ್ತು ಹಾಡುಗಳು ತಲುಪುತ್ತಿವೆ. ಒಂದು ಕಡೆ ಎಲ್ಲ ಕಲಾವಿದರೂ ಸಂಗೀತ ಕಾರ್ಯಕ್ರಮದಲ್ಲಿ ಮುಳುಗಿದ್ದರೆ, ಇನ್ನೊಂದು ಕಡೆ ಸಂಗೀತ ಪ್ರೇಮಿಗಳು, ಅದನ್ನು ಕೇಳುವುದರಲ್ಲಿ
ತನ್ಮಯರಾಗಿದ್ದಾರೆ. ಕರ್ನಾಟಕದ ಮಟ್ಟಿಗೆ, ಬಿಜಾಪುರೆ ಹಾರ್ಮೋನಿಯಂ ಫೌಂಡೇಷನ್‌, ಈ ಕೆಲಸದಲ್ಲಿ ಮುಂಚೂಣಿಯಲ್ಲಿದೆ. ಮಾ.31ರಿಂದ ಏ.15ರ ತನಕ, ಪ್ರತಿದಿನ ಸಂಜೆ 1 ಗಂಟೆ ಅವಧಿಯ ಹಾರ್ಮೋನಿಯಂ ಸೋಲೋ ಕಛೇರಿಗಳನ್ನು ನೀಡಿದೆ. ಇದರಲ್ಲಿ 16 ಕಲಾವಿದರು ಪಾಲ್ಗೊಂಡಿದ್ದಾರೆ.

ಏ.19ರಿಂದ ಶುರುವಾಗಿರುವ ಸೀಸನ್‌ 2ನಲ್ಲಿ, 30ಕ್ಕೂ ಹೆಚ್ಚು ಯುವ, ಹಿರಿಯ ಕಲಾವಿದರು ಭಾಗವಹಿಸಿದ್ದಾರೆ. ಈ ಸೀಸನ್‌ನಲ್ಲಿ, ಹಾರ್ಮೋನಿಯಂ ಜೊತೆ ಹಾಡುಗಾರಿಕೆಯೂ ಸೇರಿರುವುದು ವಿಶೇಷ. ಈತನಕ, ಸುಮಾರು ಒಂದೂವರೆಯಿಂದ ಎರಡು ಲಕ್ಷ ಜನ, ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. ಕೋವಿಡ್ ನಿರ್ಮೂಲನಕ್ಕೆ, ನಮಗೆ ನಾವೇ ಅಷ್ಟ ದಿಗ್ಬಂಧನ ಹಾಕಿಕೊಳ್ಳೋದು ಒಂದೇ ದಾರಿ. ನಾವು ಕಲಾವಿದರು, ಯಾವ ರೀತಿ ಸಹಾಯ ಮಾಡಬಹುದು ಅಂತ ಯೋಚನೆ ಮಾಡಿದಾಗ, ಈ ಐಡಿಯಾ ಹೊಳೆಯಿತು. ಸಮಾನ ಮನಸ್ಕ ಕಲಾವಿದರು, ಒಗ್ಗೂಡಿ ಶುರುಮಾಡಿದೆವು. ಈಗ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎನ್ನುತ್ತಾರೆ, ಪಂಡಿತ್‌ ರವೀಂದ್ರ ಕಾಟೋಟಿ.

ಬಾಲು ಗಾಯನ
ಎಸ್‌.ಪಿ. ಬಾಲಸುಬ್ರಮಣ್ಯಂ, ಎರಡು ದಿನಕ್ಕೆ ಒಂದು ಬಾರಿ ಲೈವ್‌ನಲ್ಲಿ ಬಂದು, ಕೇಳುಗರ ಆಯ್ಕೆಯ ಹಾಡು ಹೇಳುತ್ತಿದ್ದಾರೆ. ಇದೂ ಕೋವಿಡ್ ಪರಿಹಾರ ನಿಧಿಗಾಗಿ. ವಿದೇಶದಲ್ಲಿ ಕೂತೇ ಪಂಡಿತ್‌ ಜಾಕೀರ್‌ ಹುಸೇನ್‌, ಯುವ ತಬಲಾ ವಾದಕರಿಗೆ ಪಾಠ ಮಾಡುತ್ತಿದ್ದರೆ, ನಮ್ಮ ಪಂಡಿತ್‌ ರವೀಂದ್ರ ಯಾವಗಲ್, ಹೊಸಹೊಸ ತಾಳದ ಗಣಿತವನ್ನು, ಲೈವ್‌ನಲ್ಲೇ ಹೇಳಿಕೊಡುತ್ತಿದ್ದಾರೆ. ಪಂಡಿತ್‌ ಪ್ರಕಾಶ್‌ ಸೊಂಟಕ್ಕಿ, ಹವಾಯಿ ಗಿಟಾರನ್ನು ಹಿಡಿದು, ಆಗಾಗ ಲೈವ್‌ಗೆ ಬರುತ್ತಾರೆ. ಪಂಡಿತ್‌ ದತ್ತಾತ್ರೇಯ ವೇಲಂಕರ್‌, ಲೈವ್‌ನಲ್ಲಿ ಹಾಡುತ್ತಿರುತ್ತಾರೆ. ಅರುಣ್‌ ಸುಕುಮಾರ್‌ ಡ್ರಮ್‌ನ ಜೊತೆ ನಿಂತರೆ, ಸೋಮಶೇಖರ ಜೋಯಿಸರು ಕೊನ್ನಕೋಲ್‌ನಲ್ಲೇ ಭಿನ್ನತಾಳಗಳ ಪ್ರಯೋಗ ಮಾಡುತ್ತಿದ್ದಾರೆ.

Advertisement

ಯುವ ಮನಸ್ಸುಗಳ ಹಿಗ್ಗು ಬೋರ್ಕರ್‌ ಅವರ ಆರ್ಟಿಸ್ಟಿಟ್‌ ಯುನೈಟೆಡ್‌ ಅನ್ನೋ ಇನ್ನೊಂದು ತಂಡ, ಫೇಸ್‌ಬುಕ್‌ನಲ್ಲಿ ಬೆಳಗ್ಗೆ- ಸಂಜೆ ಲೈವ್‌ ಕಾರ್ಯಕ್ರಮಗಳನ್ನು ನೀಡುತ್ತಲೇ ಇದೆ. ಹೆಚ್ಚು ಕಮ್ಮಿ 300ಕ್ಕೂ ಅಧಿಕ ದೇಶ, ವಿದೇಶದ ಕಲಾವಿದರು ಇದರಲ್ಲಿ ಪಾಲ್ಗೊಂಡಿದ್ದಾರೆ. ಇವರಲ್ಲಿ ಶೇ.70ರಷ್ಟು ಯುವ ಕಲಾವಿದರು ಇದ್ದಾರೆ ಅನ್ನೋದು ಹೆಮ್ಮೆ. ದಿನವೊಂದರಲ್ಲಿ, ಕನಿಷ್ಠ 4-5 ಲಕ್ಷ ಜನ, ಈ ವೇದಿಕೆಯ ಮೂಲಕ ಸಂಗೀತ ಆಸ್ವಾದಿಸುತ್ತಿದ್ದಾರೆ. ಹೀಗೆ, ಕಣ್ಣು, ಕಿವಿಯನ್ನು ಸರಿಯಾಗಿ ಬಳಸಿಕೊಂಡರೆ, ಲಾಕ್‌ಡೌನ್‌ನಿಂದ ಮಧುರ ಕ್ಷಣಗಳು ಸಿಗೋದು ಗ್ಯಾರಂಟಿ.

ಸಮ್‌ ರಾವ್‌- ಯೋಜನೆ
ಬೀದರ್‌ ಗಾಯಕನ ಗಂಟಲಲ್ಲಿ, ಕಾಸರಗೋಡಿನ ಕವಿತೆ ಇಳಿದು ಹಾಡಾಗುತ್ತಿದೆ
ಎಲೆಮರೆಯ ಕಾಯಂತಿರುವ ನಾಡಿನ ಗಾಯಕರು, ಕವಿಗಳು, ಸಂಗೀತ ಸಂಯೋಜಕರಿಗೆ ಸಂ-ಯೋಚನೆ ಅನ್ನೋ ಹೆಸರಲ್ಲಿ ಜಗುಲಿಯನ್ನು ಸಿದ್ಧಮಾಡಿದ್ದು, ಸಂಗೀತ ನಿರ್ದೇಶಕ ಪ್ರವೀಣ್‌ ಡಿ. ರಾವ್‌. ಈತನಕ, ಹೆಚ್ಚು ಕಮ್ಮಿ 200 ಕವಿತೆಗಳನ್ನು, 100 ಸಂಯೋಜಕರು ಹಾಡಾಗಿಸಿದ್ದಕ್ಕೆ, 200 ಗಾಯಕರು ದನಿ ಪೋಣಿಸಿದ್ದಾರೆ. ಹೀಗೆ, ಹೊಸಕವಿಗಳು, ಹೊಸ ಸಂಯೋಜಕರು ಹಾಗೂ ಹೊಸ ಗಾಯಕರ ಮೇಲೆ, ಲಾಕ್‌ಡೌನ್‌ ನೆಪದಲ್ಲಿ ಟಾರ್ಚ್‌ ಬಿಟ್ಟಿದ್ದಾರೆ ರಾವ್‌. ಇದೂ ರಾಷ್ಟ್ರ, ರಾಜ್ಯದ ಎಲ್ಲೆಯನ್ನು ಮೀರಿ ಮುಂದುವರಿಯುತ್ತಿದೆ. ಅಮೆರಿಕದ ಕವಿಯ ಕವಿತೆಗೆ ಬೆಂಗಳೂರಿನವರು ರಾಗ ಸಂಯೋಜಿಸಿದರೆ, ಮೈಸೂರಿನ ಕವಿಯ ಪದ್ಯಕ್ಕೆ ಇಂಗ್ಲೆಂಡ್‌ನಿಂದ ರಾಗ ಸಂಯೋಜನೆ ಯಾಗುತ್ತದೆ. ಹಾಗೆಯೇ, ಬೀದರ್‌ ಗಾಯಕನ ಗಂಟಲಲ್ಲಿ, ಕಾಸರಗೋಡಿನ ಕವಿಯ ಕವಿತೆ ಇಳಿದು ಹಾಡಾಗುತ್ತಿದೆ. ಕವಿಗಳಾಗಿ ಮರೆತು ಹೋದವರು, ಸಂಗೀತ ಕಲಿತು ಸುಮ್ಮನಿರೋರ ಮನದಲ್ಲಿ, ಸಂ-ಯೋಚನೆ ಆತ್ಮವಿಶ್ವಾಸದ ದೀಪ ಹಚ್ಚಿದೆ. ಹೆಸರಾಂತ ಕವಿಗಳು ಬರೆಯುವುದು ಮಾತ್ರ ಕವಿತೆ, ಹೆಸರು ಮಾಡಿದವರು ಹಾಡಿದರೆ ಮಾತ್ರ ಗಾಯನ ಅನ್ನೋದೆಲ್ಲ ಭ್ರಮೆ ಅಂತ, ಈ ಜಗುಲಿಯಲ್ಲಿ ಕುಂತವರಿಗೆ ತಿಳಿಯುತ್ತಿದೆ. ಸಂಗೀತ ಸಂಯೋಜನೆ ಮಾಡೋದು, ಕವಿತೆ ಬರೆಯೋದು ಎಲ್ಲವೂ ಹೋಮ್‌ ವರ್ಕ್‌ ಲೆವೆಲ್‌ನಲ್ಲೇ ನಿಂತು ಹೋಗಿಬಿಡುತ್ತದೆ. ಇವೆಲ್ಲವನ್ನೂ ಸೇರಿಸಿ, ಹೊಸ ಕವಿಯ ಪದ್ಯಕ್ಕೆ ರಾಗ ಸಂಯೋಜಿಸಿ, ಹೊಸಗಾಯಕರಿಂದ ಹಾಡಿಸಿದರೆ ಹೇಗಿರುತ್ತದೆ ಅಂತ ಯೋಚಿಸಿ ಒಂದು ಸೋಶಿಯಲ್‌ ನೆಟ್‌ವರ್ಕ್‌ ಮಾಡಿದೆವು. ಈಗ ಅದು ಬಹಳ ವೇಗವಾಗಿ ಓಡುತ್ತಿದೆ. ಇಲ್ಲಿ, ನಾನು ಹಾಡಿದೆ, ನೀವು ಅದಕ್ಕಿಂತ ಚೆನ್ನಾಗಿ ಹಾಡಿದಿರಿ ಅನ್ನೋ ವಿಮರ್ಶೆ ನಡೆಯುತ್ತಿದೆ. ಅಂದರೆ, ನಮ್ಮನ್ನು ನಾವು ನೋಡಿ, ಹಾಡಿ, ತಿದ್ದಿಕೊಳ್ಳುತ್ತಾ ಸಾಗುತ್ತಿದ್ದೇವೆ ಅಂತಾರೆ, ಇದರ ರೂವಾರಿ ಪ್ರವೀಣ್‌ ಡಿ. ರಾವ್‌.

ಇದರ ಜೊತೆಗೆ, ಸಂ- ಚಿಂತನೆ ಎಂಬ ಯೋಜನೆಯಲ್ಲಿ, ವೈದಿ ಅವರ ಗೀತೆಗಳು ಮರುಹುಟ್ಟು ಪಡೆದಿವೆ. ರಾಜು ಅನಂತಸ್ವಾಮಿ ಅವರ, ಜಗವು ಕೇಳದ ಎಷ್ಟೋ ಸಂಗೀತ ಸಂಯೋಜನೆಗೆ ಎಂ.ಡಿ. ಪಲ್ಲವಿ, ಮಂಗಳಾ ರವಿ, ಸುಪ್ರಿಯಾ, ನಾಗಚಂದ್ರಿಕಾ ಭಟ್‌ರಂಥ 13 ಮಂದಿ ಹಾಡುವ ಮೂಲಕ, ಕಳೆದುಹೋದ ರಾಜು ಅನಂತ ಸ್ವಾಮಿಯನ್ನು ಈ ಸಂಯೋಜನೆಯಿಂದ ಕೈಹಿಡಿದು ಮತ್ತೆ ಕರೆತಂದಂ ತಾಗಿದೆ.

ಇವತ್ತಿನ ಯುವಕರಿಗೆ ಸಂಗೀತದ ಕಡೆ ಒಲವಿದೆ. ಲಾಕ್‌ಡೌನ್‌ ಸಮಯ ದಲ್ಲಿ ಈ ಡಿಜಿಟಲ್‌ ಸಂಗೀತ ಕೇಳ್ಕೆಗೆ ಕಿವಿಗೊಟ್ಟರೆ, ಹೊಸ ಹೊಸ ವಿಚಾರ ತಿಳಿಯುತ್ತದೆ. ರಿಯಾಜ್‌ ಅನ್ನು ಇನ್ನೂ ಬಲವಾಗಿ ಮಾಡಬಹುದು.
ಪಂ. ಡಾ. ಉದಯ್‌ ರಾಜ್‌ಕರ್ಪೂರ್‌

ಕಟ್ಟೆ ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next