Advertisement

ಲಾಕ್‌ಡೌನ್‌: ಮೆಕ್ಕೆ ಜೋಳ ಬೆಳೆಗಾರ ತತ್ತರ

05:19 PM Apr 28, 2020 | Suhan S |

ಹಾವೇರಿ: ಕೋವಿಡ್ 19 ನಿಯಂತ್ರಣಕ್ಕೆ ವಿಧಿಸಿದ ಲಾಕ್‌ಡೌನ್‌ನಿಂದ ಜಿಲ್ಲೆಯ ಮೆಕ್ಕೆಜೋಳ ಬೆಳೆಗಾರರು ತತ್ತರಿಸಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ.

Advertisement

ಮಳೆಗಾಲದಲ್ಲಿ ಅತಿವೃಷ್ಟಿ, ನೆರೆಯಿಂದ ಕೆಂಗೆಟ್ಟಿದ್ದ ರೈತರು ಬಳಿಕ ಒಂದಿಷ್ಟು ಮೆಕ್ಕೆಜೋಳ ಬೆಳೆದಿದ್ದರು. ಜಿಲ್ಲೆಯಲ್ಲಿ ಅರ್ಧದಷ್ಟು ರೈತರು ಮೆಕ್ಕೆಜೋಳವನ್ನೇ ಬೆಳೆಯುತ್ತಿದ್ದಾರೆ. ಬೆಳೆ ಬಂದಿದ್ದು ಒಂದಿಷ್ಟು ಹಣವಾದರೂ ಕೈಗೆ ಸಿಕ್ಕೀತು ಎಂದುಕೊಳ್ಳುವಷ್ಟರಲ್ಲಿ ಲಾಕ್‌ಡೌನ್‌ ಘೋಷಣೆಯಾಗಿ ಈಗ ಮೆಕ್ಕೆಜೋಳ ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಂಡಿದೆ. ಕ್ವಿಂಟಾಲ್‌ಗೆ 2000 ರೂ.ಗಳಿಗೆ ಮಾರಾಟವಾಗುತ್ತಿದ್ದ ಮೆಕ್ಕೆಜೋಳದ ಬೆಲೆ ಈಗ 600-800 ರೂ.ಗಳಿಗೆ ಇಳಿದಿದ್ದು ಅದನ್ನು ಒಯ್ಯುವವರೂ ಇಲ್ಲದಂತಾಗಿದೆ. ಬಹಳಷ್ಟು ರೈತರು ಮನೆಯಲ್ಲಿ ಮೆಕ್ಕೆಜೋಳ ಇಟ್ಟುಕೊಂಡು ಸರ್ಕಾರ ಖರೀದಿ ಕೇಂದ್ರ ಆರಂಭಿಸಬಹುದು ಎಂದು ಕಾಯುತ್ತಿದ್ದಾರೆ.

ಇನ್ನು ತುರ್ತು ಹಣ ಅಗತ್ಯವಿದ್ದ ಕೆಲವರು ಬಂದ ದರಕ್ಕೆ ವ್ಯಾಪಾರಸ್ಥರಿಗೆ ಮಾರಾಟ ಮಾಡಿದ್ದಾರೆ. ವ್ಯಾಪಾರಸ್ಥರಿಂದ ಮೆಕ್ಕೆಜೋಳ ಎಲ್ಲಿಯೂ ಮಾರಾಟವಾಗದೆ ಇರುವುದರಿಂದ ಪೂರ್ಣ ಪ್ರಮಾಣದ ಹಣವೂ ರೈತರಿಗೆ ಸಿಕ್ಕಿಲ್ಲ. ಬೆಳೆಯೂ ಕೈಯಲ್ಲಿಲ್ಲದ ಪರಿಸ್ಥಿತಿ ಇದೆ.

ಕಳೆದ ಮೂರ್‍ನಾಲ್ಕು ವರ್ಷದಿಂದ ಮೆಕ್ಕೆಜೋಳಕ್ಕೆ ಒಳ್ಳೆಯ ಬೆಲೆ ಸಿಕ್ಕಿತ್ತು. ಹೀಗಾಗಿ ಸರ್ಕಾರ ಖರೀದಿ ಕೇಂದ್ರ ತೆರೆದರೂ ರೈತರು ಖರೀದಿ ಕೇಂದ್ರಕ್ಕೆ ಬಾರದೇ ಮಾರುಕಟ್ಟೆಯಲ್ಲೇ ಮಾರಾಟ ಮಾಡುತ್ತಿದ್ದರು. ಆದರೆ, ಈ ಬಾರಿ ಮೆಕ್ಕೆಜೋಳ ಬೆಲೆ ಕುಸಿಯುತ್ತಲೇ ಬಂತು. ಇನ್ನು ಲಾಕ್‌ಡೌನ್‌ ಬಂದಾಗಲಂತೂ ದರ ನೆಲಕಚ್ಚಿದೆ.

ಸರ್ಕಾರಕ್ಕೆ ಪತ್ರ: ಜಿಲ್ಲೆಯಲ್ಲಿ ರೈತರು ಹೆಚ್ಚು ಮೆಕ್ಕೆಜೋಳ ಬೆಳೆದಿದ್ದರಿಂದ ಹಾಗೂ ಪ್ರಸ್ತುತ ಬೆಲೆಯು ಕಡಿಮೆಯಾಗಿದ್ದರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಜಿಲ್ಲಾಧಿಕಾರಿ ಎರಡು ತಿಂಗಳ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಅದಕ್ಕೆ ಈವರೆಗೂ ಸ್ಪಂದನೆ ಸಿಕ್ಕಿಲ್ಲ. ಒಟ್ಟಾರೆ ಜಿಲ್ಲೆಯ ಮೆಕ್ಕೆಜೋಳ ಬೆಳೆಗಾರರ ಗೋಳು ಕೇಳುವವರೇ ಇಲ್ಲದಂತಾಗಿದೆ.

Advertisement

ಮೆಕ್ಕೆಜೋಳ ಬೆಂಬಲ ಬೆಲೆಯಡಿ ಖರೀದಿ ಕುರಿತಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಗೋವಿನಜೋಳ ಹೆಚ್ಚು ಬೆಳೆಯುವ ರಾಜ್ಯದ ಹಾವೇರಿ, ದಾವಣಗೆರೆ, ಗದಗ, ಧಾರವಾಡ, ಶಿವಮೊಗ್ಗ ಜಿಲ್ಲೆಗಳ ರೈತರಿಂದ ಬೆಂಬಲಬೆಲೆಯಡಿ ಖರೀದಿಗೆ ವಿಶೇಷ ಪ್ಯಾಕೇಜ್‌ಗೆ ಮನವಿ ಮಾಡಿಕೊಳ್ಳಲಾಗಿದೆ. -ಶಿವಕುಮಾರ ಉದಾಸಿ, ಸಂಸದ.

ಲಾಕ್‌ಡೌನ್‌ಗೂ ಮೊದಲೇ ಮೆಕ್ಕೆಜೋಳ ದರ ಕಳೆದುಕೊಂಡಿತ್ತು. ಈಗಂತೂ ಕೇಳುವವರೇ ಇಲ್ಲದಂತಾಗಿದೆ. ಸರ್ಕಾರ ಮೆಕ್ಕೆಜೋಳ ಬೆಳೆಗಾರರಿಗೆ ವಿಶೇಷ ಸಹಾಯ ಘೋಷಿಸಲಿ. -ಹನುಮಂತಪ್ಪ ಗಾಜೀಗೌಡ್ರ, ರೈತ.

ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಮೆಕ್ಕೆಜೋಳ ಬೆಳೆಯುತ್ತಿದ್ದು, ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದು ಬೆಳೆಗಾರರಿಗೆ ವಿಶೇಷ ರೀತಿಯಲ್ಲಿ ಸಹಾಯ ಮಾಡಲು ಸಿಎಂಗೆ ಮನವಿ ಮಾಡಲಾಗಿದೆ. -ಬಿ.ಸಿ. ಪಾಟೀಲ,ಕೃಷಿ ಸಚಿವರು.

Advertisement

Udayavani is now on Telegram. Click here to join our channel and stay updated with the latest news.

Next