Advertisement

ಲಾಕ್‌ಡೌನ್‌ ಸಡಿಲಿಕೆಯಾದರೂ ಆಳಸಮುದ್ರ ಮೀನುಗಾರಿಕೆ ಅನಿಶ್ಚಿತ!

10:50 PM May 10, 2020 | Sriram |

ವಿಶೇಷ ವರದಿ-ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೈಗಾರಿಕೆ ಸಹಿತ ಬಹುತೇಕ ವಹಿವಾಟು ಆರಂಭವಾಗಿದೆ. ಆದರೆ ಕರಾವಳಿಯ ಆರ್ಥಿಕ ಚಟುವಟಿಕೆಗೆ ಆಧಾರವಾಗುವ ಆಳಸಮುದ್ರ ಮೀನುಗಾರಿಕೆ ಆರಂಭದ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ.

Advertisement

ಮೇ 31ರವರೆಗೆ ಈ ಬಾರಿಯ ಮೀನುಗಾರಿಕಾ ಋತು ಇರಲಿದೆ. ಬಳಿಕ 61 ದಿನಗಳ ಅನಂತರವಷ್ಟೇ ಮೀನುಗಾರಿಕೆ. ಆದರೆ ಆಳಸಮುದ್ರ ಮೀನುಗಾರಿಕೆಗೆ ಜಿಲ್ಲಾಡಳಿತ ಇನ್ನೂ ಅನುಮತಿ ನೀಡದಿರುವ ಕಾರಣ, ಅನುಮತಿ ನೀಡಿದರೂ ಕಾರ್ಮಿಕರಿಲ್ಲದ ಕಾರಣ ಆಳಸಮುದ್ರ ಮೀನುಗಾರಿಕೆಯ ಸದ್ಯದ ಪರಿಸ್ಥಿತಿ ಅಯೋಮಯವಾಗಿದೆ.

ಕಾರ್ಮಿಕರಿಲ್ಲದೆ ಸಂಕಷ್ಟ
ಎ. 26ರಂದು 150 ಬಸ್‌ಗಳಲ್ಲಿ ಆಂಧ್ರಪ್ರದೇಶ, ತಮಿಳುನಾಡು ಸಹಿತಬೇರೆ ಬೇರೆ ರಾಜ್ಯದ ಕಾರ್ಮಿಕರು ತೆರಳಿದ್ದಾರೆ. ಅನಂತರವೂ ಹಲವು ಕಾರ್ಮಿಕರು ಊರಿಗೆ ಹೋಗಿದ್ದಾರೆ. ಒಟ್ಟು 5 ಸಾವಿರದಷ್ಟು ಕಾರ್ಮಿಕರು ತೆರಳಿದ ಕಾರಣ ಮೀನುಗಾರಿಕೆಗೆ ಕಾರ್ಮಿಕರ ಕೊರತೆ ಎದುರಾಗಿದೆ. ಸದ್ಯ ಮಂಗಳೂರು ಬಂದರಿನಲ್ಲಿ ಬಾಕಿಯಾಗಿರುವ ಒಡಿಶಾ, ಝಾರ್ಖಂಡ್‌, ತಮಿಳುನಾಡು ಭಾಗದ ಸುಮಾರು 500ರಷ್ಟು ಕಾರ್ಮಿಕರು ಕೂಡ ಊರಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.

“ಸೇವಾ ಸುವಿಧ’ ಮೂಲಕ ದಾಖಲೆಗಳನ್ನು ಅಪ್‌ಲೋಡ್‌ ಮಾಡುತ್ತಿದ್ದು, ಒಂದೆರಡು ದಿನದಲ್ಲಿ ಅವರೂ ಊರಿಗೆ ತೆರಳಲಿದ್ದಾರೆ. ಹೀಗಾಗಿ ಕಾರ್ಮಿಕರೇ ಇಲ್ಲದೆ ಮೀನುಗಾರಿಕೆಯ ಈ ಋತು ಪೂರ್ಣಗೊಳಿಸಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ!

8 10 ದಿನಗಳವರೆಗೆ ಕಡಲ ಮಧ್ಯೆ ಮೀನುಗಾರಿಕೆ ನಡೆಸುವ ಬೋಟ್‌ಗಳಿಗೆ ಕಾರ್ಮಿಕರ ಕೊರತೆಯಾದರೆ, ಒಂದೇ ದಿನದಲ್ಲಿ ಹೋಗಿ ಬರುವ ಯಾಂತ್ರೀಕೃತ ಬೊಟ್‌ಗಳಿಗೆ ಅನುಮತಿ ನೀಡುವಂತೆ ಮೀನುಗಾರರು ಜಿಲ್ಲಾಡಳಿತವನ್ನು ಕೋರಿದ್ದಾರೆ. ಇದರಲ್ಲಿ ಉಳ್ಳಾಲ, ಬೆಂಗರೆ ಭಾಗದವರು ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಇದಕ್ಕೆ ಅವಕಾಶ ದೊರೆತರೆ ಮಂಗಳೂರಿನ 150ರಷ್ಟು ಬೋಟ್‌ಗಳು ಮೀನುಗಾರಿಕೆ ನಡೆಸಲು ಸಾಧ್ಯವಾಗಬಹುದು. ಮೀನುಗಾರಿಕಾ ದಕ್ಕೆ ಅಂದಾಗ ಮೀನುಗಾರರು, ಗ್ರಾಹಕರು ಜಮಾಯಿಸುವುದು ಸಾಮಾನ್ಯ. ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ಮೀನು ಗಾರಿಕೆಗೆ ಅವಕಾಶವಿದೆ. ದಕ್ಕೆಯಲ್ಲಿ ಅಂತರ ಕಾಯ್ದು ಕೊಳ್ಳುವುದು ಯಾವ ರೀತಿಯಲ್ಲಿ ಎಂಬುದು ಮೀನುಗಾರರ ಪ್ರಶ್ನೆ.

Advertisement

 ಸದ್ಯಕ್ಕಿಲ್ಲ ಅವಕಾಶ
ದ.ಕ. ಜಿಲ್ಲೆ ಆರೆಂಜ್‌ ಝೋನ್‌ನಲ್ಲಿರುವ ಕಾರಣದಿಂದ ಸದ್ಯಕ್ಕೆ ಆಳಸಮುದ್ರ ಮೀನುಗಾರಿಕೆಗೆ ಜಿಲ್ಲಾಡಳಿತ ಅವಕಾಶ ನೀಡುವ ಸಾಧ್ಯತೆ ಕಡಿಮೆ. ಜತೆಗೆ ಈ ಬಗ್ಗೆ ಯಾವುದೇ ತೀರ್ಮಾನವೂ ಆಗಿಲ್ಲ.
 -ಹರೀಶ್‌ ಕುಮಾರ್‌, ಮೀನುಗಾರಿಕಾ ಉಪನಿರ್ದೇಶಕ, ದ.ಕ.

 ಕಾರ್ಮಿಕರಿಲ್ಲದೆ ಕಷ್ಟ
ಸುಮಾರು 5 ಸಾವಿರಕ್ಕೂ ಅಧಿಕ ಮೀನುಗಾರ ಕಾರ್ಮಿಕರು ಸದ್ಯ ಊರುಗಳಿಗೆ ತೆರಳಿದ್ದಾರೆ. ಮೀನುಗಾರಿಕಾ ಋತು ಪೂರ್ಣಗೊಳ್ಳಲು ಕೆಲವೇ ದಿನ ಬಾಕಿ. ಹೀಗಾಗಿ ಯಾಂತ್ರೀಕೃತ ಮೀನುಗಾರಿಕೆ ಕಷ್ಟ. ಆದರೂ ಸಿಂಗಲ್‌ ಡೇ ಬೋಟ್‌ಗಳ ಸಂಚಾರಕ್ಕೆ ಅವಕಾಶ ನೀಡಿದರೆ ಉತ್ತಮ.
-ನಿತಿನ್‌ ಕುಮಾರ್‌, ಮೀನುಗಾರರ ಮುಖಂಡ.

Advertisement

Udayavani is now on Telegram. Click here to join our channel and stay updated with the latest news.

Next