ಬೆಂಗಳೂರು: ಸರ್ಕಾರಕ್ಕೆ ಲಾಕ್ ಡೌನ್ ಮಾಡುವ ಇರಾದೆ ಏನೂ ಇಲ್ಲ. ಕಂಟ್ರೋಲ್ ತಪ್ಪುವ ಸ್ಥಿತಿ ಬಂದಾಗ ಲಾಕ್ ಡೌನ್ ಮಾಡುವುದು ಒಂದು ವಿಧಾನ. ಆದರೆ ಇದರಿಂದ ಹೊಟೇಲ್ -ಬಾರ್ ಸೇರಿ ಎಲ್ಲಾ ಉದ್ಯಮಕ್ಕೆ ಹೊಡೆತ ಬೀಳುತ್ತದೆ. ಲಾಕ್ ಡೌನ್ ಒಂದೇ ಪರಿಹಾರ ಅಲ್ಲ, ಅದನ್ನು ಮಾಡೋದು ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕೂಡಾ ಲಾಕ್ ಡೌನ್ ಬೇಡ ಎಂದು ಹೇಳಿದ್ದಾರೆ.ಆದಷ್ಟು ನೋಡಿಕೊಂಡು ನಿರ್ಣಯ ತೆಗೆದುಕೊಳ್ಳುತ್ತೇವೆ. ಕೇಂದ್ರದಿಂದಲೂ ಏನು ಸಲಹೆ ಸೂಚನೆ ಬರುತ್ತದೆ ನೋಡೋಣ ಎಂದರು.
ಇಡೀ ರಾಜ್ಯದಲ್ಲಿ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಕಟ್ಟುನಿಟ್ಟಿನ ನಿಯಮ ಜಾರಿ ಮಾಡುವಂತೆ ಸೂಚಿಸಿದ್ದೇವೆ. ತಜ್ಞರ ವರದಿ ನೋಡಿಕೊಂಡು ಟಫ್ ರೂಲ್ಸ್ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಗೃಹ ಸಚಿವರು ಹೇಳಿದರು.
ಇದನ್ನೂ ಓದಿ:ಯಾರಿಗಾಗಿ ನಿಯಮ..?: ಸಚಿವ ಕೆ.ಎಸ್.ಈಶ್ವರಪ್ಪರಿಂದ ಕೋವಿಡ್ ನಿಯಮ ಉಲ್ಲಂಘನೆ
ರೇಣುಕಾಚಾರ್ಯಗೂ ಅದೇ ನಿಯಮ: ಶಾಸಕ ರೇಣುಕಾಚಾರ್ಯ ಸಭೆಯನ್ನು ಗಮನಿಸಿದ್ದೇನೆ. ಅದರ ಮೇಲೆ ಎಫ್ಐಆರ್ ಆಗಿದೆ, ಉಳಿದ ವಿಚಾರಣೆ ನಡೆಯುತ್ತಿದೆ. ಕಾನೂನು ಎಲ್ಲರಿಗೂ ಕೂಡ ಒಂದೇ. ರೇಣುಕಾಚಾರ್ಯ ವಿರುದ್ದವೂ ಕೂಡ ಎಫ್ಐಆರ್ ಮಾಡುತ್ತಾರೆ. ಪೊಲೀಸ್ ಅಧಿಕಾರಿಗಳಿಂದ ನಾನು ವಿವರಣೆ ಕೇಳುತ್ತೇನೆ. ಯಾಕೆ ಹೋಗಿದ್ದು ಅಂತ ರೇಣುಕಾಚಾರ್ಯ ಗೆ ನಾನೂ ಪ್ರಶ್ನೆ ಮಾಡಿದ್ದೇನೆ. ಜಿಲ್ಲಾಡಳಿತಗಳಿಗೆ ನಾವು ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇವೆ ಎಂದರು.
ಸಿಎಂ, ಎಚ್ ಎಂ ರೇವಣ್ಣ, ಸಿಎಸ್ ಎಲ್ಲ ಅಧಿಕಾರಿಗಳಿಗೂ ಪಾಸಿಟಿವ್ ಬಂದು ಮಲಗುತ್ತಿದ್ದಾರೆ. ಅಂಥ ಪರಿಸ್ಥಿತಿ ಇದೆ. ನಾನೂ ಕೂಡ ಟೆಸ್ಟ್ ಮಾಡಿಸಿದೆ, ನೆಗೆಟಿವ್ ಬಂದಿದೆ. ಸಿಎಂ ಸಭೆ ಬಳಿಕ ಮತ್ತಷ್ಟು ಕಠಿಣ ನಿಯಮಗಳು ಬರಬಹುದು. ಎರಡನೇ ಅಲೆ ಕೂಡ ಮೊದಲು ಹೀಗೆ ಇತ್ತು. ಆದರೆ ಆಮೇಲೆ ಸ್ಮಶಾನದಲ್ಲಿ ಕ್ಯೂ ನಿಲ್ಲಬೇಕಾಗಿತ್ತು ಎಂದು ಆರಗ ಜ್ಞಾನೇಂದ್ರ ಹೇಳಿದರು.