Advertisement

ವಾಡಿಯಲ್ಲಿ ಲಾಕ್‌ಡೌನ್‌: ವ್ಯಾಪಾರಿಗಳ ಪರದಾಟ

10:42 AM Jul 15, 2020 | Suhan S |

ವಾಡಿ: ಜಿಲ್ಲಾಡಳಿತ ಘೋಷಿಸಿದ ಲಾಕ್‌ಡೌನ್‌ ಆದೇಶ ಸಿಮೆಂಟ್‌ ನಗರಿಯ ಜನರಲ್ಲಿ ಗೊಂದಲ ಉಂಟುಮಾಡಿದ್ದರಿಂದ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಪರದಾಡಿದ ಪ್ರಸಂಗ ನಡೆಯಿತು.

Advertisement

ಪತ್ರಿಕೆಗಳಲ್ಲಿ ಜು.14 ಸಂಜೆ 8 ರಿಂದ ಲಾಕ್‌ ಡೌನ್‌ ಜಾರಿಯಾಗಲಿದೆ ಎಂದು ಪ್ರಕಟವಾಗಿದ್ದರೆ, ಪೊಲೀಸರು ಮತ್ತು ಪುರಸಭೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆಯೇ ನಗರದ ಅಂಗಡಿಗಳನ್ನು ಬಂದ್‌ ಮಾಡಿಸಲು ಮುಂದಾದ ಪ್ರಸಂಗ ನಡೆಯಿತು. ಇದರಿಂದ ಹೋಟೆಲ್‌, ಖಾನಾವಳಿ, ತರಕಾರಿ, ಕಿರಾಣಿ, ಸಿಮೆಂಟ್‌ ಅಂಗಡಿಗಳು ಸೇರಿದಂತೆ ಇತರ ವ್ಯಾಪಾರಿಗಳು ಗೊಂದಲಕ್ಕೆ ಇಡಾದರು. ಲಾಕ್‌ಡೌನ್‌ ಆದೇಶ ಸರಿಯಾಗಿ ಅರ್ಥವಾಗದ ಕಾರಣ ಮಂಗಳವಾರ ಪಟ್ಟಣದಲ್ಲಿ ಸಹವಾಗಿ ವ್ಯಾಪಾರ, ವಹಿವಾಟು ಶುರುವಾಗಿತ್ತು. ಲಾಟಿ ಹಿಡಿದು ಬಂದ ಪೊಲೀಸರು ವ್ಯಾಪಾರಾ ಸ್ಥಗಿತಗೊಳಿಸುವಂತೆ ತಿಳಿಸಿದರು.

ಪೌರಕಾರ್ಮಿಕರು ಧ್ವನಿವರ್ಧಕದ ಮೂಲಕ ಅಂಗಡಿಗಳು ಬಂದ್‌ ಮಾಡುವಂತೆ ಪ್ರಚಾರ ನಡೆಸಿದರು. ಇದು ವ್ಯಾಪಾರಿಗಳು ಕೆರಳುವಂತೆ ಮಾಡಿತು. ಸೋಮವಾರವೇ ನಮಗೆ ಮಾಹಿತಿ ನೀಡಿದ್ದರೆ ಮಂಗಳವಾರ ಅಂಗಡಿ ತೆರೆಯುತ್ತಿರಲಿಲ್ಲ. ಆಹಾರ ಪದಾರ್ಥಗಳು ಸಿದ್ಧಪಡಿಸಿದ ಬಳಿಕ ಬಂದ್‌ ಎಂದರೆ ನಷ್ಟ ಭರಿಸುವವರು ಯಾರು ಎಂದು ಪ್ರಶ್ನಿಸಿದರು. ತರಕಾರಿ, ಹಣ್ಣು, ಹಾಲು, ಕಿರಾಣಿ, ಔಷಧ ಅಂಗಡಿ ಹಾಗೂ ಆಸ್ಪತ್ರೆಗಳಿಗೆ ಲಾಕ್‌ಡೌನ್‌ ನಿಯಮ ಅನ್ವಹಿಸುವುದಿಲ್ಲ. ಹೋಟೆಲ್‌, ಮಾಂಸ ವ್ಯಾಪಾರ ಸೇರಿದಂತೆ ಇತರ ಎಲ್ಲಾ ವ್ಯಾಪಾರಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ. ಖಾನಾವಳಿಗಳಿಂದ ಪಾರ್ಸಲ್‌ ವಿತರಣೆಗೆ ಅವಕಾಶವಿದೆ.

ಗುರುವಾರದ ವಾರದ ಸಂತೆ ಇರುವುದಿಲ್ಲ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರಿ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next