ಕೋಲ್ಕತಾ: ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳದ ದಕ್ಷಿಣ 24 ಪರಗಣಾಸ್ ಜಿಲ್ಲೆಯ ಸೋನಾಪುರ್ ಮುನ್ಸಿಪಲ್ ಪ್ರದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ರಾಜಧಾನಿ ಕೋಲ್ಕತಾದಿಂದ 20 ಕಿಲೋ ಮೀಟರ್ ದೂರದಲ್ಲಿ ಸೋನಾಪುರ್ ಪ್ರದೇಶವಿದೆ.
ಇದನ್ನೂ ಓದಿ:ಕೆ.ಜಿ.ಎಫ್ ಬೆಡಗಿ ರವೀನಾಗೆ ಪಾರ್ಟಿ ಅಂದ್ರೆ ಅಗೋದಿಲ್ವಂತೆ!
ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಕೇವಲ ತುರ್ತು ಸೇವೆಗಳಿಗಷ್ಟೇ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಸೋನಾಪುರ್ ಪ್ರದೇಶದಲ್ಲಿ 19 ಕಂಟೈನ್ ಮೆಂಟ್ ವಲಯಗಳನ್ನು ಗುರುತಿಸಲಾಗಿದೆ ಎಂದು ವರದಿ ತಿಳಿಸಿದೆ.
ದುರ್ಗಾ ಪೂಜೆ ಹಬ್ಬದ ಬಳಿಕ ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಬಗ್ಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಕಳವಳ ವ್ಯಕ್ತಪಡಿಸಿ, ಪಶ್ಚಿಮಬಂಗಾಳ ಸರ್ಕಾರಕ್ಕೆ ಪತ್ರ ಬರೆದು, ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚಿಸಿತ್ತು.
ಕೋಲ್ಕತಾ ಕಳೆದ 24ಗಂಟೆಗಳಲ್ಲಿ ಶೇ.25ರಷ್ಟು ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು, 248 ಪ್ರಕರಣ ಪತ್ತೆಯಾಗಿದ್ದು, ಆರು ಮಂದಿ ಸಾವನ್ನಪ್ಪಿದ್ದರು. ಕೋವಿಡ್ 19 ಪ್ರಕರಣಗಳು ಹೆಚ್ಚಳವಾಗದಂತೆ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.