ರಾಜ್ಯದಲ್ಲಿ ಕೋವಿಡ್ ನಿಟ್ಟಿನಲ್ಲಿ ಜಾರಿಯಲ್ಲಿದ್ದ ಲಾಕ್‌ಡೌನ್ ಮಾದರಿ ಕರ್ಫ್ಯೂ ಅವಧಿ ಪೂರ್ಣಗೊಳ್ಳುವ ಮುಂಚೆಯೇ ಮೇ 10 ರಿಂದ 24 ರ ವರೆಗೆ ಮತ್ತಷ್ಟು ಕಟ್ಟುನಿಟ್ಟಿನ ಬಿಗಿ ಕ್ರಮಗಳೊಂದಿಗೆ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಮುಖ್ಯಮಂತ್ರಿಯವರ ಪ್ರಕಾರ ಲಾಕ್‌ಡೌನ್, ಮುಖ್ಯ ಕಾರ್ಯದರ್ಶಿಯವರ ಪ್ರಕಾರ ನಿರ್ಬಂಧ. ಹೊಸ ಆದೇಶದ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ಸಹ ಸರಕಾರ ಜಾರಿಗೊಳಿಸಿ ಬಿಡುಗಡೆಗೊಳಿಸಿದೆ.
ಕರ್ಫ್ಯೂ ಸಂದರ್ಭದಲ್ಲಿನ ಕೆಲವು ಸಡಿಲಿಕೆ ರದ್ದುಪಡಿಸಿ ಬೆಳಗ್ಗೆ 6 ರಿಂದ 10ರ ವರೆಗೆ ಅಗತ್ಯ ವಸ್ತು ಖರೀದಿಗೆ ವಾಹನಗಳಲ್ಲಿ ಹೋಗದೆ ನಡೆದುಕೊಂಡು ಹೋಗಿ ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ಉಳಿದಂತೆ ಪಾರ್ಸೆಲ್ ಸೇವೆ ಇ ಕಾಮರ್ಸ್‌ಗೆ ಅವಕಾಶ ಕಲ್ಪಿಸಿಕೊಟ್ಟಿದೆ.ಬಹುತೇಕ ಈ ಮಾರ್ಗಸೂಚಿ ಹಿಂದಿನಂತೆಯೇ ಇದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಅದೇ ನಿರ್ಬಂಧಗಳನ್ನು ಮುಂದುವರೆಸಲಾಗಿದೆ. ಪ್ರಸಕ್ತ ಜಾರಿಯಲ್ಲಿರುವ ನಿರ್ಬಂಧಗಳ ಜಾರಿಯಲ್ಲಿ ವ್ಯವಸ್ಥೆ ವಿಫಲವಾಗಿದೆ ಎಂದು ವ್ಯಾಖ್ಯಾನಿಸುವುದಾದರೆ, ಹೊಸ ಮಾರ್ಗಸೂಚಿಯ ಅನುಷ್ಠಾನಕ್ಕೆ ಸರಕಾರ ಯಾವ ಕ್ರಮ, ದಂಡನೆ ಕೈಗೊಳ್ಳುತ್ತದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಸರಕಾರ ಕಠಿನವಾಗಿ ಅನುಷ್ಠಾನಕ್ಕೆ ಮುಂದಾದಲ್ಲಿ ಮಾತ್ರ ಇದರ ಉದ್ದೇಶ ಸಫಲವಾಗುತ್ತದೆ.
ರಾಜ್ಯ ಸರಕಾರ ಏನೇ ಕಠಿನ ಕ್ರಮ ಕೈಗೊಂಡರೂ ಅದು ಸಮರ್ಪ ಕವಾಗಿ ಅನುಷ್ಠಾನವಾಗಬೇಕು. ಅದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಕೊರೊನಾ ನಿಯಂತ್ರಣ ವಿಚಾರದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ನಿರ್ಬಂಧ ಹೇರಿಕೊಳ್ಳುವುದು ಉತ್ತಮ. ಅದು ಅಗತ್ಯವೂ ಕೂಡ.
ಏಕೆಂದರೆ ಕೊರೊನಾ ಎರಡನೇ ಅಲೆ ವ್ಯಾಪಿಸುತ್ತಿರುವ ರೀತಿ ಹಾಗೂ ಸೋಂಕು ಹರಡುತ್ತಿರುವ ವೇಗ ನೋಡಿದರೆ ನಿಜಕ್ಕೂ ಅಘಾತವಾಗುತ್ತದೆ. ಅಪಾಯಕಾರಿ ಸ್ಥಿತಿ ತಲುಪಿದೆ. ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹಾಸಿಗೆ, ಆಕ್ಸಿಜನ್, ಐಸಿಯು ಹಾಸಿಗೆ, ರೆಮಿಡಿಸಿವಿಯರ್ ಚುಚ್ಚುಮದ್ದು, ಲಸಿಕೆ ಎಲ್ಲವೂ ಕೊರತೆಯಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜನತೆ ತಮ್ಮ ಪ್ರಾಣ ತಮ್ಮ ಕುಟುಂಬದವರ ಪ್ರಾಣ ಉಳಿಸಿಕೊಳ್ಳುವ ಜತೆಗೆ ಸಮುದಾಯದ ಆರೋಗ್ಯ ಕಾಪಾಡುವ ಹೊಣೆಗಾರಿಕೆಯೂ ಇದೆ.
ಮೊದಲನೇ ಅಲೆಗೆ ಹೋಲಿಸಿದರೆ ಎರಡನೇ ಅಲೆಯ ಬಿಸಿ ಜೋರಾಗಿಯೇ ತಟ್ಟಿರುವುದರಿಂದ ಜನತೆ ಎಚ್ಚರಿಕೆ ವಹಿಸಿದ್ದಾರೆ. ಆದರೂ ಸಾಲದಾಗಿದೆ. ಇನ್ನೂ ಮುನ್ನಚ್ಚರಿಕೆ ವಹಿಸಬೇಕಾಗಿದೆ. ಸರಕಾರದ ಜತೆ ಸಂಘ-ಸಂಸ್ಥೆಗಳೂ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.
ಸರಕಾರವು ಲಾಕ್‌ಡೌನ್ ಅಥವಾ ಕರ್ಫ್ಯೂ ಬಿಗಿಯಾಗಿ ಪಾಲನೆ ಮಾಡುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ತರಬೇಕಾಗಿದೆ. ಇಷ್ಟು ಅವಧಿಯಲ್ಲಿ ಏನೆಲ್ಲ ಸಾಧ್ಯವೋ ಅಷ್ಟನ್ನೂ ಮಾಡಬೇಕಾಗಿದೆ.
ಒಟ್ಟಾರೆ, ಸರಕಾರ ಜಾರಿಗೊಳಿಸಿರುವ ಬಿಗಿ ಕ್ರಮ ಪಾಲಿಸಿ ಕೊರೊನಾ ಹಿಮ್ಮೆಟ್ಟಿಸಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಭೌತಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ವಿರುದ್ಧ ಜಯಗಳಿಸಬೇಕಾಗಿದೆ.