ಹಾಸನ: ರಾಜ್ಯದಲ್ಲಿ ಲಾಕ್ ಡೌನ್ ಅನ್ನು ಸ್ವಲ್ಪ ಸಡಿಲ ಮಾಡಲಾಗಿದೆ. ಮೇ 3ರ ನಂತರ ಮತ್ತಷ್ಟು ಸಡಿಲ ಮಾಡಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳಿಗೆ ಆಯಾ ಜಿಲ್ಲೆಗಳ ಮಾಹಿತಿ ತಿಳಿದಿರುತ್ತದೆ, ಯಾವುದು ಬಿಗಿ ಅಥವಾ ಸಡಿಲಿಕೆ ಮಾಡುವುದು ಅವರಿಗೆ ಗೊತ್ತಿರುತ್ತದೆ. ಆಯಾಯ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ತೀರ್ಮಾನ ಮಾಡಲಾಗುವುದು ಎಂದರು.
ರೈತರ ಕೃಷಿಗೆ ಸಂಬಂಧಿಸಿದ ಯಾವುದೇ ವಸ್ತುಗಳ ಸಾಗಣೆಗೆ ನಿರ್ಬಂಧ ಇಲ್ಲ. ಎಪಿಎಂಸಿಗೆ ಯಾವುದೇ ವಸ್ತುಗಳಿಗೆ ಪೊಲೀಸರು ತಡೆ ಒಡ್ಡಬಾರದು. ಒಂದು ಕಡೆಯಿಂದ ಮತ್ತೊಂದು ಕಡೆಗೆ ತರಲು ಕೇಂದ್ರ ಸರ್ಕಾರವೇ ಫ್ರೀ ಮಾಡಿದೆ. ಆಲೂ ಸೇರಿದಂತೆ ಬಿತ್ತನೆ ಬೀಜ ವಿತರಣೆ ಮಾಡುವ ಸಂಬಂಧ ಡಿಸಿ ನಾಳೆ ಸಭೆ ಕರೆಯಲಿದ್ದಾರೆ ಎಂದರು.
ಹಾಸನ ಎಪಿಎಂಸಿಯಲ್ಲಿ ಕೋಲ್ಡ್ ಸ್ಟೋರೇಜ್ ಮಾಡುವ ಬಗ್ಗೆ ಪರಿಶೀಲನೆ ನಡೆಸಿದರು. ಮುಖ್ಯಮಂತ್ರಿಗಳು ಹೈಪವರ್ ಕಮಿಟಿ ಮಾಡಿದ್ದಾರೆ, ರೈತರಿಗೆ ಮುಕ್ತ ಮಾರುಕಟ್ಟೆ ಒದಗಿಸುವ ವ್ಯವಸ್ಥೆ ಮಾಡಿದ್ದೇವೆ ಎಂದರು.
ಹಾಸನ ರೈತರು ರಾಜ್ಯದ ಎಲ್ಲಿ ಬೇಕಾದ್ರೂ ಬೆಳೆದ ವಸ್ತು ಮಾರಾಟ ಮಾಡಬಹುದು. ಬೆಳೆ ನಷ್ಟವಾಗಿದ್ದರೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಿಎಂ ಸೂಚಿಸಿದ್ದಾರೆ. ಎಲ್ಲಾ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿದ್ದಾರೆ, ರೈತರಿಗೆ ತೊಂದರೆ ಆದರೆ ಸರ್ಕಾರವೇ ಖರೀದಿ ಮಾಡುವ ತೀರ್ಮಾನ ಆಗಿದೆ ಎಂದರು.