ಮಂಗಳೂರು: ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಪರಿಣಾಮ ಬೀರಿದ್ದು, ದ.ಕ. ಜಿಲ್ಲೆಯ ಪಿಲಿಕುಳ ಮೃಗಾಲಯದ ದೈನಂದಿನ ಕಾರ್ಯಚಟುವಟಿಕೆಗಳ ನಿರ್ವಹಣೆಗೂ ಹಣಕಾಸಿನ ತೊಂದರೆ ಭೀತಿ ಎದುರಾಗಿದೆ.
ಪರಿಸ್ಥಿತಿ ಇದೇರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಮೃಗಾಲಯದಲ್ಲಿರುವ ಪ್ರಾಣಿಗಳಿಗೆ ಆಹಾರ ಒದಗಿಸಲು ಕೂಡ ದಾನಿಗಳ ಮುಂದೆ ಆರ್ಥಿಕ ಸಹಾಯಕ್ಕಾಗಿ ಮೊರೆಯಿಡಬೇಕಾದ ಅನಿವಾರ್ಯ ಬರಬಹುದು!
ಪಿಲಿಕುಳ ಮೃಗಾಲಯದಲ್ಲಿರುವ ಪ್ರಾಣಿ-ಪಕ್ಷಿಗಳಗಳ ಆಹಾರಕ್ಕೆಂದು ಒಂದು ತಿಂಗಳಿಗೆ ಸುಮಾರು 12 ಲಕ್ಷ ರೂ. ಬೇಕಾಗುತ್ತದೆ. ಆದಾಯ ಹೊಂದಿಸಲು ವರ್ಷದ ಮಿತಿಗೆ ಕೆಲವೊಂದು ಸಂಸ್ಥೆಗಳ ಸಿಎಸ್‌ಆರ್ ನಿಧಿ ಮತ್ತು ದಾನಿಗಳ ನೆರವು ಪಡೆಯಲಾಗುತ್ತಿದೆ. ಕಳೆದ ವರ್ಷ ಎಂಆರ್‌ಪಿಎಲ್ ತನ್ನ ಸಿಎಸ್‌ಆರ್ ನಿಧಿಯ 3.5 ಕೋ. ರೂ. ಅನ್ನು ಪಿಲಿಕುಳಕ್ಕೆ ನೀಡಿದ್ದು, ಈಗಾಗಲೇ ಶೇ. 90ರಷ್ಟು ಹಣ ಆಹಾರ, ನಿರ್ವಹಣೆ ಖರ್ಚಿಗೆ ತಗಲಿದೆ. ಮಾರ್ಚ್‌ನಿಂದ ಮೇ ತಿಂಗಳವರೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸೀಸನ್ ಆಗಿದ್ದು, ಕರಾವಳಿ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದೇ ರೀತಿ ಪಿಲಿಕುಳಕ್ಕೂ ದೇಶ-ವಿದೇಶಗಳಿಂದ ಪ್ರವಾಸಿಗರ ದಂಡೇ ಬರುತ್ತದೆ. ಕೋವಿಡ್-19 ಹಿನ್ನೆಲಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧವಿದ್ದು, ಇದರಿಂದ ಆರ್ಥಿಕ ಹೊಡೆತ ಬಿದ್ದಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಮಾರ್ಚ್‌ನಿಂದ ಪಿಲಿಕುಳ ಮೃಗಾಲಯ ಮತ್ತು ನಿಸರ್ಗಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಪಿಲಿಕುಳಕ್ಕೆ ಸೀಸನ್ ದಿನಗಳಲ್ಲಿ ದಿನಕ್ಕೆ ಸುಮಾರು 2,000 ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದಾಗಿ ವರ್ಷಕ್ಕೆ ಸುಮಾರು 2 ಕೋಟಿ ರೂ. ಹೆಚ್ಚಿನ ಶುಲ್ಕ ಸಂಗ್ರಹವಾಗುತ್ತದೆ. ಈ ವರ್ಷ ಕೋವಿಡ್-19 ಆತಂಕದೊಡನೆಯೇ ಪ್ರವಾಸೋದ್ಯಮ ಸೀಸನ್ ಕೊನೆಗೊಳ್ಳಲಿದೆ.
ಪ್ರವೇಶ ನಿರ್ಬಂಧದಿಂದ ಆರ್ಥಿಕ ಸಂಕಷ್ಟ
ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಕಳೆದ ಒಂದು ತಿಂಗಳಿನಿಂದ ಪಿಲಿಕುಳ ನಿಸರ್ಗಧಾಮ, ಮೃಗಾಲಯಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದ ಪಿಲಿಕುಳದ ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಪಿಲಿಕುಳದಲ್ಲಿ ಸುಮಾರು 1200ರಷ್ಟು ಪ್ರಾಣಿ-ಪಕ್ಷಿಗಳು ಇವೆ. ಕಳೆದ ವರ್ಷ ಎಂಆರ್‌ಪಿಎಲ್ ತನ್ನ ಸಿಎಸ್‌ಆರ್ ನಿಧಿಯ 3.5 ಕೋಟಿ ರೂ. ಅನ್ನು ಪಿಲಿಕುಳಕ್ಕೆ ನೀಡಿದ್ದು, ಆ ಹಣ ಮುಗಿಯುವ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ದಾನಿಗಳು ಸಹಾಯ ಮಾಡಬೇಕಿದೆ.
– ಎಚ್. ಜಯಪ್ರಕಾಶ್ ಭಂಡಾರಿ
ನಿರ್ದೇಶಕರು, ಪಿಲಿಕುಳ ಜೈವಿಕ ಉದ್ಯಾನವನ