Advertisement

ದೇಶದಾದ್ಯಂತ ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಣೆ!

09:05 PM May 30, 2020 | sudhir |

ಬೆಂಗಳೂರು ; ದೇಶದಾದ್ಯಂತ ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲು ಕೇಂದ್ರ ಗೃಹ ಸಚಿವಾಲಯದಿಂದ ಆದೇಶ ಹೊರಡಿಸಲಾಗಿದೆ.

Advertisement

ಮೂರು ಹಂತಗಳ ಯೋಜನೆ
ಲಾಕ್‌ಡೌನ್‌ ತೆರವು ಸಂಬಂಧ ಕೇಂದ್ರ ಗೃಹ ಸಚಿವಾಲಯವು ಮೂರು ಹಂತಗಳ ಯೋಜನೆ ಘೋಷಣೆ ಮಾಡಿದೆ. ಇದರಲ್ಲಿ ಯಾವಾಗ, ಯಾವುದಕ್ಕೆ ಅನುಮತಿ ನೀಡಲಾಗುತ್ತಿದೆ ಎಂಬ ಬಗ್ಗೆ ವಿವರವಾಗಿ ಹೇಳಲಾಗಿದೆ. ಆದರೆ ಕಂಟೈನ್‌ಮೆಂಟ್‌ ವಲಯಗಳನ್ನು ಹೊರಗಿಡಲಾಗಿದೆ. ಜತೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವು ಮಾರ್ಗಸೂಚಿಗಳನ್ನು ನೀಡಲಿದೆ ಎಂದೂ ತಿಳಿಸಿದೆ.

ಹಂತ 1: ಜೂ.8ರಿಂದ ಆರಂಭ ದೇಗುಲ, ಮಾಲ್‌ ಪುನರಾರಂಭ
1. ಎಲ್ಲ ರೀತಿಯ ಧಾರ್ಮಿಕ, ಪೂಜಾ ಸ್ಥಳ
2. ಹೋಟೆಲ್‌, ರೆಸ್ಟೋರೆಂಟ್‌, ಇತರ ಆತಿಥ್ಯ ಸೇವೆ
3. ಶಾಪಿಂಗ್‌ ಮಾಲ್‌

ಹಂತ 2: ಜುಲೈಯಿಂದ ಶಾಲೆ ಕಾಲೇಜು
1. ಶಾಲೆ, ಕಾಲೇಜುಗಳು, ಶೈಕ್ಷಣಿಕ, ತರಬೇತಿ ಸಂಸ್ಥೆಗಳು. ಈ ಹಂತದಲ್ಲಿ ರಾಜ್ಯಗಳಿಗೆ ಪರಮಾಧಿಕಾರ. ಆಯಾ ರಾಜ್ಯಗಳು ಚರ್ಚೆ ನಡೆಸಿ ಅವಕಾಶ ನೀಡಬಹುದು.

ಹಂತ 3: ಮೆಟ್ರೋ, ಸಿನೆಮಾ
ಪರಿಸ್ಥಿತಿ ನೋಡಿಕೊಂಡು ಈ ಕೆಳಗಿನ ಚಟುವಟಿಕೆಗಳಿಗೆ ಅನುಮತಿ ನೀಡಬಹುದಾಗಿದೆ. ಆದರೆ ಇದಕ್ಕೆ ಸಮಯದ ಮಿತಿ ಹಾಕಿಲ್ಲ.
1. ಅಂತಾರಾಷ್ಟ್ರೀಯ ವಿಮಾನಯಾನ -ಕೇಂದ್ರ ಗೃಹ ಇಲಾಖೆ ಒಪ್ಪಿಗೆ ಮೇರೆಗೆ.
2. ಮೆಟ್ರೋ ರೈಲು
3. ಸಿನೆಮಾ ಮಂದಿರ, ಜಿಮ್‌ಗಳು, ಸ್ವಿಮ್ಮಿಂಗ್‌ ಪೂಲ್‌, ಮನೋರಂಜನೆ ಪಾರ್ಕ್‌, ಥಿಯೇಟರ್‌ಗಳು, ಆಡಿಟೋರಿಯಂಗಳು, ಅಸೆಂಬ್ಲಿ ಹಾಲ್‌
4. ಸಾಮಾಜಿಕ, ಆರ್ಥಿಕ, ಕ್ರೀಡಾ, ಮನೋರಂಜನ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಇತರ ಅತೀ ಹೆಚ್ಚು ಜನ ಸೇರುವ ಕಾರ್ಯಕ್ರಮಗಳು

Advertisement

ರಾತ್ರಿ ಕರ್ಫ್ಯೂ
ಲಾಕ್‌ಡೌನ್‌ ತೆರವಾಗಿದ್ದರೂ ರಾತ್ರಿ ಕರ್ಫ್ಯೂ ಮುಂದುವರಿಯುತ್ತದೆ. ಆದರೆ ಸೋಮವಾರದಿಂದ ಈ ಸಮಯ ಬದಲಾಗುತ್ತದೆ. ರಾತ್ರಿ 9ರಿಂದ ಬೆಳಗ್ಗೆ 5ರ ವರೆಗೆ ಮಾತ್ರ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಜನ ಓಡಾಡುವಂತಿಲ್ಲ. ಆದರೆ ಅತ್ಯಗತ್ಯ ಸೇವೆಗಳಿಗೆ ವಿನಾಯಿತಿ ಇದೆ.

ಕಂಟೈನ್‌ಮೆಂಟ್‌ ವಲಯ ಲಾಕ್‌ಡೌನ್‌
ಕೋವಿಡ್-19 ಸೋಂಕು ಇರುವ ಕಂಟೈನ್‌ಮೆಂಟ್‌ ವಲಯಗಳಲ್ಲಿ ಮಾತ್ರ ಲಾಕ್‌ಡೌನ್‌ 5.0 ಜೂ.30ರ ವರೆಗೆ ಮುಂದುವರಿಯಲಿದೆ. ಈ ಕಂಟೈನ್‌ಮೆಂಟ್‌ ವಲಯಗಳನ್ನು ಆಯಾ ಜಿಲ್ಲಾಡಳಿತಗಳು ನಿರ್ಧರಿಸಲಿವೆ. ಬಫ‌ರ್‌ ಝೋನ್‌ಗಳನ್ನು ಆಯಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳು ನಿರ್ಧರಿಸುತ್ತವೆ. ಇದಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆಯ ನಿಯಮಾವಳಿ ಪಾಲಿಸಬೇಕು.
1. ಅಗತ್ಯ ಸೇವೆಗಳಿಗಷ್ಟೇ ಅನುಮತಿ
2. ಜನರ ಓಡಾಟಕ್ಕೆ ಅವಕಾಶವಿಲ್ಲ, ವಲಯದಿಂದ ಹೊರ ಹೋಗುವಂತಿಲ್ಲ
3. ವೈದ್ಯಕೀಯ ಕಾರಣಗಳಿಗಾಗಿ ಮಾತ್ರ ಓಡಾಟ
4. ಸೋಂಕುಪೀಡಿತರ ಸಂಪರ್ಕಿತರನ್ನು ಪತ್ತೆ ಹಚ್ಚಬೇಕು.
5. ಮನೆ ಮನೆಗೆ ತೆರಳಿ ಪರೀಕ್ಷೆ ನಡೆಸಬೇಕು

ರಾಜ್ಯಗಳಿಗೆ ಅಧಿಕಾರ
ಈ ಬಾರಿ ರಾಜ್ಯಗಳಿಗೆ ಮತ್ತಷ್ಟು ಅಧಿಕಾರ ನೀಡಲಾಗಿದೆ. ಪರಿಸ್ಥಿತಿ ವಿಶ್ಲೇಷಿಸಿ ಲಾಕ್‌ಡೌನ್‌ ವಿಸ್ತರಿಸುವ ಅಥವಾ ಸಡಿಲಗೊಳಿಸುವ ನಿರ್ಧಾರವನ್ನು ಆಯಾ ರಾಜ್ಯ ಸರಕಾರಗಳೇ ತೆಗೆದುಕೊಳ್ಳಬಹುದಾಗಿದೆ. ಜತೆಗೆ ಕಂಟೈನ್‌ಮೆಂಟ್‌ ಮತ್ತು ಬಫ‌ರ್‌ ವಲಯ ನಿರ್ಧರಿಸುವ ಹೊಣೆಯೂ ರಾಜ್ಯ ಸರಕಾರಗಳದ್ದೇ ಆಗಿದೆ.

ಅಂತಾರಾಜ್ಯ ಓಡಾಟಕ್ಕಿಲ್ಲ ನಿರ್ಬಂಧ
ಜೂ.1ರಿಂದ ದೇಶದ ಯಾವುದೇ ರಾಜ್ಯಕ್ಕೆ ಅನುಮತಿ, ಪಾಸ್‌ ಇಲ್ಲದೆ ಸಂಚರಿಸಬಹುದು. ಇದಕ್ಕಿದ್ದ ಎಲ್ಲ ನಿರ್ಬಂಧಗಳನ್ನು ಕೇಂದ್ರ ಸರಕಾರ ತೆಗೆದು ಹಾಕಿದೆ. ಹಾಗೆಯೇ ರಾಜ್ಯದೊಳಗೂ ಮುಕ್ತವಾಗಿ ಸಂಚರಿಸಬಹುದು.

ಆದರೆ ಇಲ್ಲೂ ರಾಜ್ಯ ಸರಕಾರಗಳಿಗೆ ಕೆಲವು ಅಧಿಕಾರ ನೀಡಲಾಗಿದೆ. ಆರೋಗ್ಯ ದೃಷ್ಟಿಯಿಂದ ಜನರ ಓಡಾಟಕ್ಕೆ ನಿರ್ಬಂಧ ವಿಧಿಸುವುದೇ ಆದಲ್ಲಿ, ಒಂದಷ್ಟು ಮುಂಚೆಯೇ ಈ ಬಗ್ಗೆ ಪ್ರಚುರ ಪಡಿಸಿ ನಿರ್ಬಂಧ ಹೇರಬಹುದು.

ಶ್ರಮಿಕ್‌ ರೈಲುಗಳು, ದೇಶೀಯ ವಿಮಾನಯಾನ ಮುಂದುವರಿಯುತ್ತದೆ. ಹಾಗೆಯೇ ಸರಕು ಸಾಗಣೆಗೆ ಯಾವುದೇ ರಾಜ್ಯಗಳು ಅಡ್ಡಿ ಮಾಡುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next