Advertisement
ಬೆಳಗಾವಿ ತಾಲೂಕಿನ ಸುಳೇಭಾವಿ,ಮಾರೀಹಾಳ, ಮೋದಗಾ, ಬೈಲಹೊಂಗಲ ತಾಲೂಕಿನ ದೇಶನೂರ ಸೇರಿದಂತೆ ಕೆಲವು ಹಳ್ಳಿಗಳಲ್ಲಿ ತಲೆತಲಾಂತರದಿಂದ ನೇಕಾರಿಕೆ ಉದ್ಯೋಗ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷದ ಲಾಕ್‌ಡೌನ್‌ದಿಂದಾಗಿ ಈ ಭಾಗದ ನೇಕಾರರ ಬದುಕಿನ ಮೇಲೆ ಬರೆ ಎಳೆದಂತಾಗಿದ್ದು, ಲಕ್ಷಾಂತರ ಪ್ರಮಾಣದಲ್ಲಿ ಸೀರೆಗಳು ಸಂಗ್ರಹವಾಗಿವೆ.
Related Articles
Advertisement
ಕೆಲವು ದೊಡ್ಡ ದೊಡ್ಡ ವ್ಯಾಪಾರಸ್ಥರು ಕಡಿಮೆ ದರದಲ್ಲಿ ಸೀರೆ ಖರೀದಿಸಲು ಮುಂದಾಗಿದ್ದಾರೆ. ಈ ಸೀರೆಗಳ ಬೇಡಿಕೆ ಮುಂದಿನ ದಿನಗಳಲ್ಲಿ ಬಂದರೆ ಅನುಕೂಲವಾಗಲಿದೆ ಎಂಬ ಆಶಾಭಾವನೆ ಇವರಲ್ಲಿದೆ. ಈಗಾಗಲೇ ಬೆಳಗಾವಿಯ ಶಹಾಪುರ, ಖಾಸಬಾಗ, ವಡಗಾಂವ ಸೇರಿದಂತೆ ದೊಡ್ಡ ವ್ಯಾಪಾರಸ್ಥರ ಬಳಿ ಸುಮಾರು 10 ಲಕ್ಷಕ್ಕೂ ಹೆಚ್ಚು ಸೀರೆಗಳು ಸ್ಟಾಕ್ ಇವೆ ಎನ್ನಲಾಗುತ್ತಿದೆ.
ಸಹಜ ಸ್ಥಿತಿಗೆ ಇನ್ನೂ ಬಂದಿಲ್ಲ: ಬಂಡವಾಳ ಹಾಕಿ ಮಗ್ಗಗಳನ್ನು ಆರಂಭಿಸಿದ ಮಗ್ಗಗಳ ಮಾಲೀಕರ ಕೈಯಲ್ಲಿ ಹಣವೇ ಓಡಾಡುತ್ತಿಲ್ಲ. ಮಾರುಕಟ್ಟೆಯಲ್ಲಿ ಸೀರೆಗಳನ್ನು ಖರೀದಿಸಿ ಬೇರೆ ಬೇರೆ ರಾಜ್ಯಗಳಲ್ಲಿ ಬೇಡಿಕೆ ಇಲ್ಲದ್ದಕ್ಕೆ ಕಗ್ಗಂಟಾಗಿದೆ. ಮಹಾರಾಷ್ಟ್ರ, ಬೆಂಗಳೂರು, ತಮಿಳುನಾಡು,
ಆಂಧ್ರ ಪ್ರದೇಶ, ಕೊಲ್ಕತ್ತಾ ಸೇರಿದಂತೆ ಅನೇಕ ಮಹಾನಗರಗಳಿಗೆ ಸೀರೆಗಳು ಹೋಗುತ್ತವೆ. ಆದರೆ ಮದುವೆ, ಸಭೆ-ಸಮಾರಂಭಕ್ಕೆ ಇಲ್ಲದ ಅನುಮತಿ, ಜನರಲ್ಲಿರುವ ಕೊರೊನಾ ಭಯದಿಂದಾಗಿ ಬೇಡಿಕೆ ಸಂಪೂರ್ಣವಾಗಿ ಕುಸಿದಿದೆ.
ಉತ್ಪಾದಿತ ಸೀರೆಗಳಿಗೆ ಮಾರುಕಟ್ಟೆಯೇ ಇಲದಿದ್ದರೆ ಉದ್ಯೋಗ ಮಾಡಿ ಏನು ಮಾಡುವುದು ಎಂಬ ಚಿಂತೆಯಲ್ಲಿ ನೇಕಾರರು ಇದ್ದಾರೆ. ಇನ್ನೊಂದೆಡೆ ಸೀರೆ ನೇಯ್ದ ನೇಕಾರರಿಗೆ ಎಲ್ಲಿಂದ ಕೂಲಿ ಕೊಡುವುದು ಎಂಬ ಚಿಂತೆಯಲ್ಲಿ ಮಾಲೀಕರಿದ್ದಾರೆ. ಹೀಗಾಗಿ ಕೂಲಿ ನೇಕಾರರು ತರಕಾರಿ ಮಾರಾಟ, ಕಟ್ಟಡ ಕಾರ್ಮಿಕರಾಗಿ, ನರೇಗಾ ಕೆಲಸಕ್ಕೆ ಹೋಗುತ್ತಿದ್ದಾರೆ.
ಕೆಲಸ ಇಲ್ಲದೇ ಬದುಕು ಕಷ್ಟಕರ: ಸಹಜ ಸ್ಥಿತಿಗೆ ಮರಳುವವರೆಗೆ ಈ ಸಮಸ್ಯೆ ನಿರಂತರವಾಗಿ ಇರಲಿದೆ. ಅನೇಕ ವರ್ಷಗಳಿಂದ ಈ ಉದ್ಯೋಗ ನಡೆಸಿಕೊಂಡು ಬರಲಾಗುತ್ತಿದೆ. ನಿತ್ಯ ಇದೇ ಉದ್ಯೋಗ ನಂಬಿಕೊಂಡು ಬದಕು ಸಾಗಿಸುತ್ತಿರುವ ನೇಕಾರರ ಬದುಕು ಮೂರಾಬಟ್ಟೆಯಾಗಿದೆ. ವಾರದಲ್ಲಿ 2-3 ದಿನಗಳ ಕಾಲ ದುಡಿದು ಇನ್ನುಳಿದ ದಿನ ಖಾಲಿ ಇರುವಂಥ ಸ್ಥಿತಿ ಇದೆ.
ರಾಜ್ಯ ಸರ್ಕಾರ ನೇಕಾರರಿಂದ ಸೀರೆ ಖರೀದಿಸಿ ಕೋವಿಡ್ ವಾರಿಯರ್ಸ್ ಮಹಿಳೆಯರಿಗೆ ನೀಡುವ ಬಗ್ಗೆ ಯೋಚನೆ ನಡೆಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅದು ಇನ್ನೂ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಿಲ್ಲ. ಸರ್ಕಾರ ಸೀರೆ ಖರೀದಿಸಿದರೆ ಎಷ್ಟೋ ಜನರ ಬದುಕು ಉಜ್ವಲವಾಗಲಿದೆ.
ಮೆಟ್ರೋಪಾಲಿಟನ್ ನಗರಗಳಲ್ಲಿಯೇ ಬೆಳಗಾವಿಯ ಸೀರೆಗಳಿಗೆ ಬೇಡಿಕೆ ಇದೆ. ಈ ಎಲ್ಲ ನಗರಗಳ ಹೋಲ್‌ಸೇಲ್ ಖರೀದಿದಾರರು ಸದ್ಯಕ್ಕೆ ಸೀರೆಗಳು ಬೇಡ ಎಂದಿದ್ದಕ್ಕೆ ಲಕ್ಷಾಂತರ ಸೀರೆಗಳು ಸ್ಟಾಕ್ ಆಗಿವೆ. ಸದ್ಯ ಸಣ್ಣ ಪ್ರಮಾಣದಲ್ಲಿ ವ್ಯಾಪಾರ ನಡೆದಿದೆ. ದಸರಾ, ದೀಪಾವಳಿ ನಂತರ ಬೇಡಿಕೆ ಸಿಗಬಹುದು ಎಂಬ ಆಶಾಭಾವನೆ ಇದೆ. -ಪವನ್ ತಾಪಡಿಯಾ, ಮಾಲೀಕರು, ರಾಧಾ ಸಾರೀಸ್, ಶಹಾಪುರ
ಮದುವೆ, ದೊಡ್ಡ ದೊಡ್ಡ ಹಬ್ಬಗಳು, ಜಾತ್ರೆ-ಸಮಾರಂಭಗಳ ಮೇಲೆಯೇ ನೇಕಾರಿಕೆ ಉದ್ಯೋಗ ಅವಲಂಬಿತವಾಗಿದೆ. ಉದ್ಯೋಗ ನಿಲ್ಲಿಸಿದರೆ ನೇಕಾರರ ಬದುಕಿನ ಮೇಲೆ ಹೊಡೆತ ಬೀಳುತ್ತದೆ. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ಸೀರೆ ಉತ್ಪಾದನೆ ನಡೆಯುತ್ತಿದ್ದು, ಸಹಜ ಸ್ಥಿತಿಗೆ ಬಂದರೆ ಎಲ್ಲರ ಬದುಕು ಹಸನಾಗಲಿದೆ. –ದತ್ತಾ ಬಂಡೀಗಣಿ, ಪಾಲಿಸ್ಟರ್ ಸೀರೆ ಉತ್ಪಾದಕರು
ಕಳೆದ ಐದಾರು ತಿಂಗಳಿಂದ ಕೆಲಸ ಇಲ್ಲದೇ ಬದುಕು ನಡೆಸುವುದುಕಷ್ಟಕರವಾಗಿದೆ. ಲಾಕ್‌ಡೌನ್ ನಮ್ಮ ಬದುಕನ್ನೇ ಕಸಿದುಕೊಂಡಿದೆ. ಪ್ರತಿ ವಾರ ದುಡಿಮೆಗೆ ಸಿಗುತ್ತಿದ್ದ ಪಗಾರ ಅರ್ಧದಷ್ಟು ಕಡಿಮೆಯಾಗಿದೆ. ಅನೇಕ ನೇಕಾರರು ಗೌಂಡಿ, ನರೇಗಾ ಕೆಲಸಕ್ಕೆ ಹೋಗುವಂತಾಗಿದೆ.–ಬಸವಣ್ಣಿ ಚೌಗುಲೆ, ನೇಕಾರ
ಮಹಾರಾಷ್ಟ್ರ, ಕೋಲ್ಕತ್ತಾ ಸೇರಿದಂತೆ ಅನೇಕ ಕಡೆ ಗಳಲ್ಲಿ ಸೀರೆ ಮಾರಾಟವಾಗುತ್ತವೆ. ಲಾಕ್‌ಡೌನ್‌ದಿಂದಾಗಿ ಉದ್ಯೋಗ ಭಾರೀ ಪ್ರಮಾಣ ದಲ್ಲಿ ಕುಸಿದಿದೆ. ನೇಕಾರರಿಂದ ಖರೀದಿಸಿ ಮಾರಾಟ ಮಾಡುವುದಾದರೂ ಎಲ್ಲಿ ಎನ್ನುವುದೇ ಪ್ರಶ್ನೆಯಾಗಿ ಉಳಿದಿದೆ. ಒಂದೆರಡು ತಿಂಗಳಲ್ಲಿ ಸೀರೆ ಖರೀದಿಗೆ ವೇಗ ಸಿಗುವ ಸಾಧ್ಯತೆ ಇದೆ. –ರಾಘವೇಂದ್ರ ತಿಳಗಂಜಿ, ಸೀರೆ ಖರೀದಿದಾರರು
-ಭೈರೋಬಾ ಕಾಂಬಳೆ