ಬೆಂಗಳೂರು : ಕೋವಿಡ್ ಮಹಾಮಾರಿಯ ಅಟ್ಟಹಾಸದಿಂದ ರಾಜ್ಯದಲ್ಲಿ ಮಂಗಳವಾರ ರಾತ್ರಿ 9 ಗಂಟೆಯಿಂದ ಮೇ 12ರ ಬೆಳಗ್ಗೆ 6 ಗಂಟೆವರೆಗೆ ಲಾಕ್ ಡೌನ್ ಘೋಷಿಸಲಾಗಿದೆ. ಆದ್ರೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸರ್ಕಾರ ಅನುವು ಮಾಡಿಕೊಟ್ಟಿದೆ.
ಇನ್ನು ಲಾಕ್ ಡೌನ್ ಇದ್ದರೂ ಕೂಡ ಕಾರ್ಯನಿರ್ವಹಿಸುವ ಜನರ ಅನುಕೂಲಕ್ಕಾಗಿ 150 BMTC ಬಸ್ ಗಳನ್ನು ಬಿಡುವುದಾಗಿ ನಿರ್ಧರಿಸಲಾಗಿದೆ. ಬೆಳಗ್ಗೆ 6 ರಿಂದ ರಾತ್ರಿ 7 ಗಂಟೆ ತನಕ ಈ ಬಸ್ ಗಳು ಕಾರ್ಯ ನಿರ್ವಹಿಸಲಿವೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಯಾಚರಣೆ ಮಾಡುವ 6 ಬಸ್ ಗಳು ದಿನದ 24 ಗಂಟೆಯೂ ಓಡಾದಲಿವೆ. ಸಾಮಾನ್ಯ ಬಸ್ ಗಳು ಶಿವಾಜಿನಗರ, ಕೆಂಪೇಗೌಡ ಬಸ್ ನಿಲ್ದಾಣ, ಮಲ್ಲೇಶ್ವರ, ಹಂಪಿನಗರ, ಬನಶಂಕರಿ, ಕೆ.ಆರ್. ಮಾರುಕಟ್ಟೆ, ಕೆಂಗೇರಿ, ಹೆಬ್ಬಾಳ, ಬೊಮ್ಮನಹಳ್ಳಿ, ಯಶವಂತಪುರ, ಶ್ರೀನಗರ, ಶಾಂತಿನಗರದ ನಿಲ್ದಾಣಗಳಿಂದ ನಗರದ ವಿವಿಧೆಡೆಗೆ ಸಂಚರಿಸಲಿವೆ ಎಂದು ಬಿಎಂಟಿಸಿ ತಿಳಿಸಿದೆ.
ಇನ್ನು ಕೆಎಸ್ ಆರ್ ಟಿಸಿ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಆದ್ರೆ ವಿಮಾನ ನಿಲ್ದಾಣದಿಂದ ಫ್ಲೈ ಬಸ್ ಗಳ ಸಂಚಾರ ಮಾತ್ರ ಇರಲಿದೆ. ಆಟೋಗಳು, ಟ್ಯಾಕ್ಸಿಗಳ ಸಂಚಾರಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಉತ್ಪಾದನಾ ಚಟುವಟಿಕೆಗಳು ಕಾರ್ಯನಿರ್ವಹಿಸಲಿವೆ.