Advertisement

36 ಸಾವಿರ ಪ್ರಾಣಗಳಿಗೆ ಎರವಾದ ಲಾಕ್‌ಡೌನ್‌ ವಿಳಂಬ

09:42 AM May 22, 2020 | mahesh |

ನ್ಯೂಯಾರ್ಕ್‌ : ಅಮೆರಿಕದಲ್ಲಿ ಲಾಕ್‌ಡೌನ್‌ ಒಂದು ವಾರ ಮೊದಲೇ ಘೋಷಣೆಯಾಗುತ್ತಿದ್ದರೆ 36,000 ಪ್ರಾಣಗಳನ್ನು ರಕ್ಷಿಸಬಹುದಿತ್ತು. ಲಾಕ್‌ಡೌನ್‌ ಪರಿಣಾಮಗಳ ಬಗ್ಗೆ ಕೊಲಂಬಿಯ ವಿವಿ ಅಧ್ಯಯನ ನಡೆಸಿದಾಗ ಈ ಅಂಶ ವ್ಯಕ್ತವಾಗಿದೆ. ವೈರಸ್‌ ಪ್ರಕರಣಗಳು ಅಲ್ಲೊಂದು ಇಲ್ಲೊಂದು ವರದಿಯಾಗುತ್ತಿರುವಂತೆಯೇ ಜನರು ಮನೆಯಲ್ಲಿರ ತೊಡಗಿದ್ದರು. ತೀರಾ ಅಗತ್ಯ ಕೆಲಸಗಳಿಗಾಗಿ ಮಾತ್ರ ಓಡಾಟವಿತ್ತು. ಮಾ.1ರಂದೇ ಸಾಮಾಜಿಕ ಸಂಪರ್ಕಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದರೆ ಶೇ. 83 ಸಾವುಗಳನ್ನು ತಪ್ಪಿಸಬಹುದಿತ್ತು ಎಂದು ಅಂದಾಜಿಸಿದ್ದಾರೆ.

Advertisement

ಲಾಕ್‌ಡೌನ್‌ ಘೋಷಿಸಲು ಮೀನಾಮೇಷ ಎಣಿಸಿದ್ದು ಭಾರೀ ಪ್ರಮಾಣದ ಸಾವುಗಳಿಗೆ ಕಾರಣವಾಯಿತು. ಆಡಳಿತದಲ್ಲಿರುವವರು ತುಸು ವಿವೇಚನೆ ತೋರಿಸುತ್ತಿದ್ದರೆ ವೈರಸ್‌ ಹಾವಳಿಯನ್ನು ಗಣನೀಯವಾಗಿ ನಿಯಂತ್ರಿಸಬಹುದಿತ್ತು. ಕನಿಷ್ಠ ಒಂದು ವಾರ ಮುಂಚಿತವಾಗಿ ಕಾರ್ಯಪ್ರವೃತ್ತರಾಗಿದ್ದರೂ ವೈರಸ್‌ ಪ್ರಸರಣಕ್ಕೆ ಲಗಾಮು ಹಾಕಬಹುದಿತ್ತು. ನ್ಯೂಯಾರ್ಕ್‌, ನ್ಯೂ ಓರ್ಲೆನ್ಸ್‌ ಮತ್ತಿತರ ಪ್ರಮುಖ ನಗರಗಳಲ್ಲಿ ವೈರಸ್‌ ತಾಂಡವ ತೀವ್ರಗೊಂಡದ್ದೇ ಎಪ್ರಿಲ್‌ನಲ್ಲಿ. ಅಷ್ಟರ ತನಕ ಆಳುವವರ ಕೈಯಲ್ಲಿ ಸಾಕಷ್ಟು ಕಾಲಾವಕಾಶ ಇತ್ತು ಎಂದು ವಿಶ್ಲೇಷಕರು ಬೆಟ್ಟು ಮಾಡಿದ್ದಾರೆ. ಒಂದು ಸಣ್ಣ ಆಲೋಚನೆ ಇಡೀ ಪರಿಸ್ಥಿತಿಯನ್ನು ಬದಲಾಯಿಸಬಹುದಿತ್ತು ಎನ್ನುತ್ತಾರೆ ಕೊಲಂಬಿಯದ ವೈರಾಣು ತಜ್ಞ ಜೆಫ್ರಿ ಶಮನ್‌.

ಮಾ.1ರಂದೇ ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದರೆ ಅಮೆರಿಕದಲ್ಲಿ ಸಾವಿನ ಪ್ರಮಾಣವನ್ನು ಬಹಳಷ್ಟು ಕಡಿಮೆಗೊಳಿಸಬಹುದಿತ್ತು. ಕನಿಷ್ಠ ಸಾಮಾಜಿಕ ಸಂಪರ್ಕವನ್ನಾದರೂ ಕಡಿಮೆಗೊಳಿಸಬೇಕಿತ್ತು ಎನ್ನುವುದು ವಿಶ್ಲೇಷಕರ ಅಭಿಮತ. ಆದರೆ ಟ್ರಂಪ್‌ ಮಾ. 16ರಂದಷ್ಟೇ ಪ್ರಯಾಣವನ್ನು ಕಡಿಮೆಗೊಳಿಸಿ ಎಂದು ಹೇಳಿದರು. ನ್ಯೂಯಾರ್ಕ್‌ನಲ್ಲಿ ಮಾ. 15ರಂದು ಶಾಲೆಗಳನ್ನು ಮುಚ್ಚಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next