ಚಿಕ್ಕಮಗಳೂರು: ಜಿಲ್ಲಾಡಳಿತ ವಿಧಿ ಸಿರುವ ಲಾಕ್‌ಡೌನ್‌ನಿಂದ ರೈತರು ಮತ್ತು ಜನಸಾಮಾನ್ಯರ ಮೇಲೆ ದುಷ್ಪರಿಣಾಮ ಉಂಟಾಗಿದ್ದು, ರೈತರು ಮತ್ತು ಜನಸಾಮಾನ್ಯರನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಬಂಧಗಳನ್ನು ಸಡಿಲಿಕೆ ಮಾಡಬೇಕು. ಇಲ್ಲದಿದ್ದರೆ ಲಾಕ್ ಡೌನ್ ನಿರ್ಬಂಧಗಳನ್ನು ಉಲ್ಲಂಘಿಸಿಸ ಬೇಕಾಗುತ್ತದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್. ದೇವರಾಜ್ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಠಿಣ ಲಾಕ್‌ಡೌನ್‌ನಿಂದ ಕೃಷಿಕರು ಮತ್ತು ದುಡಿದು ತಿನ್ನುವ ಕೈಗಳಿಗೆ ತೊಂದರೆಯಾಗಿದೆ. 8 ದಿನ ಕಠಿಣ ಲಾಕ್‌ಡೌನ್ ರೂಪಿಸಿದರು. ಜನರು ಆರೋಗ್ಯದ ದೃಷ್ಟಿಯಿಂದ ಕಷ್ಟವಾದರೂ ಸಹಿಸಿಕೊಂಡರು. ಜೂ.1ರ ವರೆಗೆ ಕಠಿಣ ಲಾಕ್ ಡೌನ್ ವಿಸ್ತರಿಸಿದ್ದು, ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಹಿಟ್ಲರ್ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐ ಮುಖಂಡ ರೇಣುಕಾರಾಧ್ಯ ಮಾತನಾಡಿ, ಕಠಿಣ ಲಾಕ್ ಡೌನ್ ನಿರ್ಬಂಧಗಳಲ್ಲಿ ಕೆಲವೊಂದು ಮಾರ್ಪಾಡು ಮಾಡಲು ಜಿಲ್ಲಾಡಳಿತ ಮುಂದಾಗಬೇಕೆಂದು ಒತ್ತಾಯಿಸಿದರು. ಬಿಎಸ್ಪಿ ಮುಖಂಡ ರಾಧಾಕೃಷ್ಣ ಮಾತನಾಡಿ, ಕೋವಿಡ್ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್ ಅನಿವಾರ್ಯ. ಅದರ ಜೊತೆಗೆ ಜನಸಾಮಾನ್ಯರ ಬಗ್ಗೆಯೂ ಜಿಲ್ಲಾಡಳಿತ ಗಮನ ಹರಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಕಠಿಣ ಲಾಕ್‌ಡೌನ್ ನೂರಕ್ಕೆ ನೂರರಷ್ಟು ಅವೈಜ್ಞಾನಿಕವಾಗಿದೆ. ಜಿಲ್ಲಾಧಿಕಾರಿಗಳು ಬೆಂಗಳೂರನ್ನು ಮಾದರಿ ಆಗಿಟ್ಟುಕೊಂಡು ಹೋಮ್ ಡೆಲಿವರಿ ಮಾದರಿಯನ್ನು ಜಾರಿಗೆ ತಂದಿದ್ದಾರೆ. ಇದು ಅವೈಜ್ಞಾನಿಕವಾಗಿದೆ. ಈ ಹಿನ್ನೆಲೆಯಲ್ಲಿ ಕಠಿಣ ನಿಯಮಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ತರಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿ. ರಘು, ಮರ್ಲೆ ಅಣ್ಣಯ್ಯ, ಹರೀಶ್ ಇದ್ದರು.