ನವದೆಹಲಿ:ದೇಶದಲ್ಲಿ ಕೋವಿಡ್ 19 ವೈರಸ್ ಹರಡುತ್ತಿರುವ ನಡುವೆಯೇ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಿ ನೌಕರರು ಇನ್ಮುಂದೆ ವರ್ಷದಲ್ಲಿ 15 ದಿನ ಮನೆಯಿಂದಲೇ ಕಚೇರಿ ಕೆಲಸ ಮಾಡುವ(ವರ್ಕ್ ಫ್ರಂ ಹೋಮ್) ಸೌಲಭ್ಯದ ಕುರಿತು ಕರಡು ರೂಪಿಸುತ್ತಿರುವುದಾಗಿ ವರದಿ ತಿಳಿಸಿದೆ.
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ದೂರುಗಳ ಇಲಾಖೆ ಈ ಬಗ್ಗೆ ಕರಡು ಪ್ರಸ್ತಾಪವನ್ನಿಟ್ಟಿತ್ತು. ಇದರಿಂದ ದೇಶದಲ್ಲಿ ಇರುವ 48.34 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ವರ್ಷದಲ್ಲಿ 15 ದಿನ ವರ್ಕ್ ಫ್ರಂ ಹೋಮ್ ಸೌಲಭ್ಯ ದೊರೆಯಲಿದೆ ಎಂದು ವಿವರಿಸಿದೆ.
ಈ ನಿರ್ಧಾರವನ್ನು ಭವಿಷ್ಯದ ದೃಷ್ಟಿಕೋನದ ಹಿನ್ನೆಲೆಯಲ್ಲಿ ಕೈಗೊಳ್ಳಲಾಗುತ್ತಿದ್ದು, ಇದರಿಂದಾಗಿ ನೌಕರರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಚೇರಿ ಅಥವಾ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ. ಹೀಗಾಗಿ ಎಲ್ಲಾ ಸರ್ಕಾರಿ ಇಲಾಖೆಗಳು ಈ ಪ್ರಸ್ತಾಪದ ಬಗ್ಗೆ ಮೇ 21ರೊಳಗೆ ತಮ್ಮ ಅಭಿಪ್ರಾಯಗಳನ್ನು ಕಳುಹಿಸುವಂತೆ ಸೂಚಿಸಿದೆ ಎಂದು ಬ್ಯುಸಿನೆಸ್ ಟುಡೇ ವರದಿ ಮಾಡಿದೆ.
ಇದು ಭವಿಷ್ಯದ ದೃಷ್ಟಿಕೋನದ ಕರಡು. ಆದರೆ ಈಗಾಗಲೇ ಕೇಂದ್ರ ಸಚಿವಾಲಯದ ಸಿಬ್ಬಂದಿಗಳು ಈಗಾಗಲೇ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದೆ.
ಇದರಲ್ಲಿ ಸರ್ಕಾರ ಮುಖ್ಯವಾಗಿ ಎದುರಿಸುವ ದೊಡ್ಡ ಸಮಸ್ಯೆ ಯಾವುದೆಂದರೆ ಮುಖ್ಯ ಕಡತಗಳ ಸುರಕ್ಷತೆ ಮತ್ತು ಭದ್ರತೆ. ನೌಕರರು ಕೆಲಸವನ್ನು ಮಾಡುವ ವೇಳೆ ಅದರ ಗೌಪ್ಯತೆ ಕಾಪಾಡುವುದು ಮುಖ್ಯ ಎಂದು ಹೇಳಿದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆ(ಡಿಒಪಿಟಿ) ತಮ್ಮ ನೌಕರರಿಗಾಗಿ ನೂತನ ಎಸ್ ಒಪಿಯನ್ನು ಅಂತಿಮಗೊಳಿಸಿರುವುದಾಗಿ ವರದಿ ತಿಳಿಸಿದೆ. ಲ್ಯಾಪ್ ಟಾಪ್ ಮತ್ತು ಡೆಸ್ಕ್ ಟಾಪ್ ಗಳನ್ನು ನೌಕರರಿಗೆ ಒದಗಿಸಬೇಕು. ಮನೆಯಲ್ಲಿ ಕೆಲಸ ಮಾಡುವ ನೌಕರರಿಗೆ ತಕ್ಕಂತೆ ಲ್ಯಾಪ್ ಟಾಪ್ ಗಳನ್ನು ಒದಗಿಸಲಾಗುವುದು.
ಮನೆಯಲ್ಲಿಯೇ ಕಚೇರಿ ಕೆಲಸ ಮಾಡುವವರಿಗೆ ಇಂಟರ್ನೆಟ್ ಬಳಕೆಯ ಹಣ ಮರುಪಾವತಿ ಮಾಡಲಾಗುವುದು ಎಂದು ಹೇಳಿದೆ.