Advertisement

ಬಾಡಿಗೆ ನೀಡದ ಅಂಗಡಿ ಮಳಿಗೆಗೆ ಬೀಗ

01:30 PM Aug 28, 2019 | Team Udayavani |

ರಾಮನಗರ: ತಾಲೂಕು ಪಂಚಾಯ್ತಿಗೆ ಸೇರಿದ ಮಾಜಿ ಪಿಎಂ ದೇವೇಗೌಡ ವಾಣಿಜ್ಯ ಸಂಕೀರ್ಣದಲ್ಲಿ ಬಾಡಿಗೆ ಕಟ್ಟದ, ಬಾಡಿಗೆ ಕರಾರು ಮಾಡಿಕೊಳ್ಳದ ಅಂಗಡಿ ಮಳಿಗೆಗಳ ಮಾಲೀಕರಿಗೆ ತಾಲೂಕು ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಅಧಿಕಾರಿಗಳ ತಂಡ ದಾಳಿ ನಡೆಸಿ ಕೆಲವು ಮಳಿಗೆಗಳಿಗೆ ಬೀಗ ಜಡಿದು, ಕೆಲವು ಅಂಗಡಿ ಮಾಲೀಕರಿಗೆ ಅಂತಿಮ ನೋಟಿಸ್‌ ಜಾರಿ ಮಾಡಿದರು.

Advertisement

ಏಳು ದಿನಗಳ ಒಳಗೆ ಸಕಾರಣ ನೀಡಿ, ಕಾನೂನು ಪ್ರಕಾರ ಬಾಡಿಗೆ ಒಪ್ಪಂದ ಮಾಡಿಕೊಳ್ಳುವುದು ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿದ್ದರೆ, ಅಂತಹ ಅಂಗಡಿಯನ್ನು ಪುನಃ ಹರಾಜು ಪ್ರಕ್ರಿಯೆಗೆ ಒಳಪಡಿಸುವುದಾಗಿ ಅಧ್ಯಕ್ಷರು ಹಾಗೂ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಮೂಲ ಸೌಕರ್ಯ ಕಲ್ಪಿಸಿದ್ದೆವು: ಈ ವೇಳೆ ತಾಪಂ ಅಧ್ಯಕ್ಷ ಗಾಣಕಲ್ ನಟರಾಜು ಮಾತನಾಡಿ, ನಗರದ ಖಾಸಗಿ ಬಸ್‌ ನಿಲ್ದಾಣದ ಬಳಿ 84 ಮಳಿಗೆಗಳಿರುವ ವಾಣಿಜ್ಯ ಸಂಕೀರ್ಣವನ್ನು ತಾಲೂಕು ಪಂಚಾಯ್ತಿ 9 ವರ್ಷಗಳ ಹಿಂದೆ ನಿರ್ಮಿಸಿದೆ. ಹರಾಜು ಪ್ರಕ್ರಿಯೆಲ್ಲಿ ಅಂಗಡಿಗಳನ್ನು ಪಡೆದುಕೊಂಡ ಮಾಲೀಕರು, ಮೂಲ ಸೌಕರ್ಯಗಳನ್ನು ಕಲ್ಪಿಸದ ಹೊರತು ತಾವು ಬಾಡಿಗೆ ಪಾವತಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಕಳೆದ ವರ್ಷ ತಾಲೂಕು ಪಂಚಾಯ್ತಿ ನಿಧಿಯಲ್ಲಿ ಸುಮಾರು 90 ಲಕ್ಷ ರೂ. ವೆಚ್ಚ ಮಾಡಿ ಶೌಚಾಲಯ, ಮಳೆ ನೀರು, ಚರಂಡಿ ಹೀಗೆ ಹಲವಾರು ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದೆವು ಎಂದು ತಿಳಿಸಿದರು.

ನೋಟಿಸ್‌ ಜಾರಿ ಮಾಡಿದರು ಸ್ಪಂದಿಸಿಲ್ಲ: ಸೌಲಭ್ಯ ಕಲ್ಪಿಸಿದರು ಸಹ ಅಂಗಡಿ ಮಾಲೀಕರು ಬಾಡಿಗೆ ಪಾವತಿ ಮಾಡುತ್ತಿರಲಿಲ್ಲ. ಬಾಡಿಗೆ ಪಾವತಿಸುವಂತೆ ಮತ್ತು ಕರಾರು ಮಾಡಿಕೊಳ್ಳುವಂತೆ ಪದೇ ಪದೆ ಮಾಡಿಕೊಂಡ ಮನವಿ ಮತ್ತು ನೋಟಿಸ್‌ ಜಾರಿ ಮಾಡಿದರು ಸ್ಪಂದಿಸಿರಲಿಲ್ಲ. ಹೀಗಾಗಿ ಒಂದು ವಾರದ ಮುಂಚೆ ಮತ್ತೆ ನೋಟಿಸ್‌ ಜಾರಿ ಮಾಡಿದ್ದಾಗಿ, ಅದಕ್ಕೂ ಯಾರು ಜಗ್ಗದ ಕಾರಣ ಸ್ಥಳಕ್ಕೆ ಭೇಟಿ ಕೊಟ್ಟಿರುವುದಾಗಿ ತಿಳಿಸಿದರು.

ವಾಣಿಜ್ಯ ಸಂಕೀರ್ಣದ ಮಳಿಗೆಗಳಿಂದ ಪಂಚಾಯ್ತಿಗೆ ಸುಮಾರು 18 ಲಕ್ಷ ರೂ. ಮುಂಗಡ ಹಣ ಬಾಕಿ ಬರಬೇಕಾಗಿದೆ. ಬಾಡಿಗೆ ಒಪ್ಪಂದ ಮಾಡಿಕೊಂಡವರು ಸಹ ಬಾಡಿಗೆ ಬಾಕಿ ಉಳಿಸಿಕೊಂಡ್ದಿದಾರೆ. ಇಂತಹ ಮಳಿಗೆಗಳಿಂದ ಸುಮಾರು 8 ಲಕ್ಷ ರೂ. ಬರಬೇಕಾಗಿದೆ. ಅಂತಹವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಒಪ್ಪಂದವನ್ನೇ ಮಾಡಿಕೊಳ್ಳದ ಮಳಿಗೆಗಳಿಗೆ ಬೀಗ ಜಡಿಯಲಾಗಿದೆ ಎಂದು ತಿಳಿಸಿದರು.

Advertisement

ಸಬ್‌ ಲೀಸ್‌ ಕೊಟ್ಟು ಸಂಪಾದನೆ!: ಕೆಲವು ಮಾಲೀಕರು ತಮ್ಮ ಅಂಗಡಿಗಳನ್ನು ಬೇರೊಬ್ಬರಿಗೆ ಬಾಡಿಗೆಗೆ (ಸಬ್‌ ಲೀಸ್‌) ಕೊಟ್ಟಿರುವ ಬಗ್ಗೆ ದೂರುಗಳಿವೆ. ತಾಲೂಕು ಪಂಚಾಯ್ತಿಗೆ ಮಾಸಿಕವಾಗಿ ಪಾವತಿಸಬೇಕಾದ 1800 ರೂ. ಮಾಸಿಕ ಬಾಡಿಗೆಗಿಂತ ಹಲವಾರು ಪಟ್ಟು ಹೆಚ್ಚಿನ ಮೊತ್ತಕ್ಕೆ ಬಾಡಿಗೆಗೆ ಕೊಟ್ಟಿದ್ದಾರೆ. ಆದರೂ ಬಾಡಿಗೆ ಕೊಟ್ಟಿಲ್ಲ. ಇಂತಹ ಪ್ರಕರಣಗಳ ಬಗ್ಗೆ ಸದ್ಯದಲ್ಲೇ ನಡೆಯುವ ಪಂಚಾಯ್ತಿಯ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದರು.

ಸ್ವಚ್ಛತೆ ಮರೀಚಿಕೆ: ಬಾಡಿಗೆ, ಮುಂಗಡ ಕೇಳಿದ ಅಧಿಕಾರಿಗಳು ಮತ್ತು ತಾಪಂ ಸದಸ್ಯರ ವಿರುದ್ಧ ಕೆಲವು ಮಾಲೀಕರು ವಾಗ್ವಾದಕ್ಕಿಳಿದರು. ಕೆಲವರು ಮಾಲೀಕರು ತಾವು ಬಾಡಿಗೆ ಕರಾರಿಗೆ ಸಹಿ ಮಾಡಿಕೊಟ್ಟಿರುವುದಾಗಿ, ಆದರೆ ತಾಪಂ ಅಧಿಕಾರಿಗಳೇ ನಿರ್ಲಕ್ಷ್ಯವಸಿದ್ದರಿಂದ ಬಾಡಿಗೆ ಪಾವತಿಸಿಲ್ಲ ಎಂದು ಆರೋಪಿಸಿದರು. ಈ ವಿಚಾರ ತಿಳಿದ ಅಧ್ಯಕ್ಷರು ಅಧಿಕಾರಿಗಳನ್ನು ಸಹ ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು.

ವಾಣಿಜ್ಯ ಸಂಕೀರ್ಣದಲ್ಲಿ ಸ್ವಚ್ಛತೆ ಇಲ್ಲ. ಸಂಕಿರ್ಣದ ಹಿಂಭಾಗದಲ್ಲಿರುವ ಮಳಿಗೆಗಳ ಬಳಿ ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿದೆ. ಸಂಕೀರ್ಣದಲ್ಲಿ ನಿರ್ವಹಣೆಯೇ ಇಲ್ಲ ಎಂದು ಮಾಲೀಕರು ಏರು ದನಿಯಲ್ಲೇ ದೂರಿದರು. ಸಂಕೀರ್ಣ ನಿರ್ಮಿಸುವ ವೇಳೆ ತಾವು 4ರಿಂದ 5 ಲಕ್ಷ ರೂ. ಮುಂಗಡ ಪಾವತಿಸಿರುವುದಾಗಿ ಆ ಹಣದ ಬಗ್ಗೆ ಕೆಲವು ಮಾಲೀಕರು ಪ್ರಶ್ನಿಸಿದರು.

ಈ ವೇಳೆ ಇಒ ಬಾಬು, ಸಾಯಿ ಸಮಿತಿ ಅಧ್ಯಕ್ಷ ಪ್ರಕಾಶ್‌, ತಾಪಂ ಮಾಜಿ ಅಧ್ಯಕ್ಷ ಡಿ.ಎಂ.ಮಹದೇವಯ್ಯ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next