Advertisement

ಅಂಗವಿಕಲರಿಗಾಗಿ ನಿರ್ಮಿಸಿದ ಶೌಚಾಲಯಕ್ಕೆ ಬೀಗ

01:34 AM Feb 11, 2020 | Sriram |

ಉಡುಪಿ: ನಗರಸಭೆ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ನಾರ್ತ್‌ ಶಾಲೆ ಬಳಿ ವಿಶೇಷವಾಗಿ ಅಂಗವಿಕಲರಿಗಾಗಿ ನಿರ್ಮಿಸಲಾದ ಶೌಚಾಲಯ ಬಳಕೆಗೆ ಅವಕಾಶ ನೀಡದೆ ಬೀಗ ಹಾಕಲಾಗಿದೆ.

Advertisement

4.30 ಲಕ್ಷ ರೂ. ವೆಚ್ಚದ ಶೌಚಾಲಯ
2013-14ನೇ ಸಾಲಿನ ಎಸ್‌ಎಫ್ಸಿ ಶೇ. 3ರಷ್ಟು ನಿಧಿ ಬಳಸಿಕೊಂಡು ಸುಮಾರು 4.30 ಲ.ರೂ ವೆಚ್ಚದಲ್ಲಿ ಒಂದೇ ಕಟ್ಟಡದಲ್ಲಿ ಪುರುಷರಿಗೆ, ಮಹಿಳೆಯರಿಗೆ ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿತ್ತು. ಅದರೆ ಈ ಶೌಚಾಲಯ ಯಾರಿಗಾಗಿ ನಿರ್ಮಿಸಲಾಗಿತ್ತೋ ಅವರಿಗೆ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅಂಗವಿಕಲರು ಬೀಗ ಕಂಡು ಹಿಂದಿರುಗುತ್ತಿದ್ದಾರೆ.

ರಸ್ತೆಯಲ್ಲಿ ಮೂತ್ರ ವಿಸರ್ಜನೆ
ಶ್ರೀಕೃಷ್ಣ ಮಠ ಹಾಗೂ ಉಡುಪಿ ನಗರ ಸಂಪರ್ಕಿಸುವ ಮಧ್ಯ ಭಾಗದಲ್ಲಿ ಅಂಗವಿಕಲರಿಗೆ 2018ರಲ್ಲಿ ಶೌಚಾಲಯ ನಿರ್ಮಿಸಲಾಗಿತ್ತು. ಆದರೆ ಕಟ್ಟಡ ಉದ್ಘಾಟನೆಯಾದ ತಿಂಗಳಲ್ಲಿ ಬೀಗ ಹಾಕಿದ್ದು, ಶೌಚಾಲಯದ ಪಹರೆ ಕಾಯುವ ಸಿಬಂದಿ ನಿತ್ಯ ಬಳಕೆಯ ವಸ್ತುಗಳನ್ನು ಕೊಠಡಿಯಲ್ಲಿ ಇಟ್ಟಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಬೀಗ ಹಾಕಿದ್ದರಿಂದ ಹಲವರು ರಸ್ತೆಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

ಮದ್ಯ ವ್ಯಸನಿ ಸಿಬಂದಿ
ಶೌಚಾಲಯ ಉಸ್ತುವಾರಿಗೆ ಗುತ್ತಿಗೆದಾರಿಂದ ನೇಮಕಗೊಂಡ ವ್ಯಕ್ತಿ ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ದೂರುಗಳಿವೆ. ಅಂಗವಿಕಲರು ಏನಾದರೂ ಬಂದರೆ ಅವರನ್ನು 5ರಿಂದ 10 ನಿಮಿಷ ಕಾಯಿಸುತ್ತಿರುವ ಬಗ್ಗೆಯೂ ದೂರುಗಳಿವೆ. ಸಿಬಂದಿ ಮದ್ಯ ಸೇವನೆ ಮಾಡುವುದರಿಂದ ರಾತ್ರಿ ವೇಳೆ ಶೌಚಾಲಯಕ್ಕೆ ಹೋಗಲು ಜನರು ಭಯಪಡುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.

ನೀರಿನ ಸಮಸ್ಯೆ- ದುರ್ನಾತ
ಕಟ್ಟಡಕ್ಕೆ ಅಗತ್ಯವಿರುವ ನೀರು ಸರಬರಾಜು ಸರಿಯಾಗಿ ಆಗದೆ ಇರುವುದರಿಂದ ದುರ್ನಾತ ದಿಂದ ಶೌಚಾಲಯ ಕಟ್ಟಡ ಸಮೀಪ ತೆರಳಲು ಸಾಧ್ಯವಾಗುತ್ತಿಲ್ಲ. ಈ ಮಾರ್ಗವಾಗಿ ಶ್ರೀಕೃಷ್ಣ ಮಠಕ್ಕೆ ತೆರಳುವ ಪ್ರವಾಸಿಗರು ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ. ಪರಿಸರ ಸುತ್ತಮುತ್ತಲಿನಲ್ಲಿ ಸ್ವತ್ಛತೆಯ ಕೊರತೆಯಿಂದ ಸೊಳ್ಳೆ ಉತ್ಪಾದನ ಕೇಂದ್ರವಾಗಿ ಪರಿವರ್ತನೆಯಾಗಿದೆ.

Advertisement

ಅಧಿಕಾರಿಗಳು ಕ್ರಮ ಕೈಗೊಳ್ಳಿ
ಅಂಗವಿಕಲರಿಗಾಗಿ ನಿರ್ಮಾಣವಾದ ಶೌಚಾಲಯ ಇದೀಗ ಅವರ ಬಳಕೆಗೆ ಅವಕಾಶ ನೀಡದೆ ಬೀಗ ಹಾಕಿರುವುದು ಸರಿಯಲ್ಲ. ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳಬೇಕು.
-ಮೀನಾಕ್ಷಿ ಮಾಧವ ಬನ್ನಂಜೆ, ಮಾಜಿ ನಗರಸಭೆ ಅಧ್ಯಕ್ಷೆ.

Advertisement

Udayavani is now on Telegram. Click here to join our channel and stay updated with the latest news.

Next