ನಾಲತವಾಡ: ಕಳೆದ ಒಂದು ತಿಂಗಳಿಂದ ಕುಡಿಯುವ ಹನಿ ನೀರಿಗಾಗಿ ಪರದಾಡುತ್ತೀದ್ದೇವೆ. ಪಟ್ಟಣ ಪಂಚಾಯತ್ ಆಡಳಿತ ವರ್ಗ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಪಟ್ಟಣದ 13ನೇ ವಾರ್ಡಿನ ರಡ್ಡೇರ ಪೇಟೆ ನಿವಾಸಿಗಳು ಖಾಲಿ ಕೊಡಗಳನ್ನು ಪ್ರದರ್ಶಿಸಿ ಪಪಂ ಕಚೇರಿ ಸಿಬ್ಬಂದಿಯನ್ನು ಹೊರ ತಳ್ಳಿ ಬೀಗ ಜಡಿದು ಪ್ರತಿಭಟಿಸಿದ ಘಟನೆ ಸೋಮವಾರ ನಡೆಯಿತು.
ರಡ್ಡೇರಪೇಟೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ರೈತಾಪಿ ಕುಟುಂಬಗಳಿವೆ. ಕಳೆದ ಒಂದು ತಿಂಗಳಿದಲೂ ಪಪಂ ವಾಟರ್‌ವೆುನ್ ಈ ವಿಷಯ ಗಮನಕ್ಕೆ ತಂದರೂ ಮಾತಿಗೆ ಬೆಲೆ ನೀಡುತ್ತಿಲ್ಲ, ಉದ್ದೇಶ ಪೂರ್ವಕವಾಗಿ ಟ್ಯಾಂಕ್ ನಲ್ಲಿ ನೀರಿಲ್ಲ, ವಿದ್ಯುತ್ ಇಲ್ಲ, ಮೋಟಾರ್ ಸುಟ್ಟಿದೆ ಎಂದು ಹೇಳುತ್ತಲೇ ಇತರೇ ವಾರ್ಡುಗಳಲ್ಲಿ ನೀರು ಬಿಡುತ್ತಾರೆ.
ನಮ್ಮ ಓಣಿಗೆ ಮಲತಾಯಿ ಧೋರಣೆ ಏಕೆ ಎಂದು ಪಪಂ ಆಡಳಿತ ವಿರುದ್ಧ ಪ್ರತಿಭಟನಾಕಾರರು ಹರಿಹಾಯ್ದರು. ಪಾಳಿ ಮೂಲಕ ನೀರು ಒದಗಿಸಿ ಎಂದು ಅಂಗಲಾಚಿದರೂ ಸಿಬ್ಬಂದಿಗಳು ಕ್ಯಾರೆ ಎನ್ನುತ್ತಿಲ್ಲ. ಈ ವಿಷಯ ಸಿಒ ಅವರ ಗಮನಕ್ಕೆ ಇದ್ದರೂ ಇದುವರೆಗೂ ಸ್ಥಳಕ್ಕೆ ಬಂದು ಯಾರೂ ವಾಸ್ತವ ಅರಿಯುತ್ತಿಲ್ಲ, ಗ್ರಾಪಂ ಇದ್ದ ವೇಳೆ ಸಮರ್ಪಕ ನೀರು ಒದಗಿಸಲಾಗುತ್ತಿದ್ದು ಪಪಂ ಆದ ಮೇಲೆ ನೀರು ಸಿಗದಂತಾಗಿದೆ ಎಂದು ದೂರಿದರು.
ಅಧ್ಯಕ್ಷರ ಭೇಟಿ: ಪ್ರತಿಭಟನಾಕಾರರ ಮನವೊಲಿಸಿ ಜಡಿದ ಬೀಗ ತೆರವುಗೊಳಿಸಿದ ಪಪಂ ಅಧ್ಯಕ್ಷ ಪೃಥ್ವಿರಾಜ್ ನಾಡಗೌಡ ಮಾತನಾಡಿ, ನಿಮ್ಮ ವಾರ್ಡಿನಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಅದಕ್ಕೆ ನೀರು ಹರಿಸಿ ಎಂದು ಸಿಬ್ಬಂದಿಗಳಿಗೆ ಸಾಕಷ್ಟು ಬಾರಿ ತಿಳಿಸಿದ್ದೇನೆ. ಸಿಬ್ಬಂದಿಗಳು ನನಗೆ ತಪ್ಪು ಮಾಹಿತಿ ಕೊಟ್ಟು ಅದಕ್ಕೆ ನೀರು ಹರಿಸುತ್ತಿಲ್ಲ.
ನಿಮ್ಮ ವಾರ್ಡಿಗೆ ನಾನೇ ಖುದ್ದು ಭೇಟಿ ನೀಡಿ ನೀರಿನ ಸಮಸ್ಯೆ ಬಗೆಹರಿಸುತ್ತೇನೆ ಸಹಕರಿಸಿ ಎಂದರು.
ವಾಟರ್‌ವೆುನ್ ಸಮ್ಮುಖದಲ್ಲಿ ನೀರಿನ ಸಮಸ್ಯೆಯನ್ನು ಆಲಿಸಿದ ನಾಡಗೌಡ ವಾಸ್ತವ ಮಾಹಿತಿಯನ್ನು ಪಡೆದುಕೊಂಡು ಮುಂದೆ ಈಗಾಗದಂತೆ ನೋಡಿಕೊಳ್ಳಲು ಸಿಬ್ಬಂದಿಗಳಿಗೆ ತಾಕೀತು ಮಾಡಿದರು. ರಾಯಪ್ಪ ಮೆದಿಕನಾಳ, ಮಹಾಂತೇಶ ಹಮಾತಿಗೌಡ್ರ, ಶಾಂತಪ್ಪ ಬೊಮ್ಮರೆಡ್ಡಿ, ಹನುಮಂತ ತೋಟದ, ಬಸಪ್ಪ ಬರಮರೆಡ್ಡಿ, ರಮೇಶ ಸುಳಿಬಾವಿ ಇದ್ದರು.