ಕದ್ರಿ: ಕಳೆದ ಕೆಲವು ತಿಂಗಳಿನಿಂದ ನಿರ್ವಹಣೆಯಿಲ್ಲದೆ ಗಬ್ಬು ನಾರುತ್ತಿದ್ದ ಕದ್ರಿ ಶೌಚಾಲಯಕ್ಕೆ ಮತ್ತೆ ಬೀಗ ಜಡಿಯಲಾಗಿದ್ದು, ಸದ್ಯ ಸಾರ್ವಜನಿಕರಿಗೆ ಶೌಚಾಲಯ ಪ್ರವೇಶ ನಿರ್ಬಂಧಿಸಲಾಗಿದೆ.
ಕಳೆದ ವರ್ಷ ಉದ್ಘಾಟನೆ ಗೊಂಡಿದ್ದ ಕದ್ರಿ ಶೌಚಾಲಯದ ಟೆಂಡರ್ ವಹಿಸಿಕೊಂಡ ಸಂಸ್ಥೆ ಅದನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿರಲಿಲ್ಲ. ಇದೇ ಕಾರಣಕ್ಕೆ ಈ ಹಿಂದೆ ಬೀಗ ಜಡಿಯಲಾಗಿತ್ತು. ಆದರೆ, ಕೆಲವರು ಬೀಗ ಮುರಿದು ಶೌಚಾಲಯ ಪ್ರವೇಶಿಸುತ್ತಿದ್ದರು, ಇದರ ಪರಿಣಾಮ ಶೌಚಾಲಯ ಮಲಿನವಾಗುತ್ತಿತ್ತು. ಶೌಚಾಲಯದಲ್ಲಿ ನಿಗದಿತ ಶುಲ್ಕ ಪಾವತಿಸಿ ಶೌಚಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಶುಲ್ಕ ಸಂಗ್ರಹ ಕಡಿಮೆ ಆದ ಕಾರಣ ಸಮರ್ಪಕ ನಿರ್ವಹಣೆ ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ಟೆಂಡರ್ ವಹಿಸಿದವರೂ ಆಸಕ್ತಿ ತೋರುತ್ತಿರಲಿಲ್ಲ.
ಕದ್ರಿ ಬಳಿಯ ಶೌಚಾಲಯ ನಿರ್ವಹಣೆ ಇಲ್ಲದ ಕುರಿತಂತೆ ‘ಉದಯವಾಣಿ ಸುದಿನ’ ಮೇ 24 ರಂದು ವಿಶೇಷ ವರದಿ ಪ್ರಕಟಿಸಿತ್ತು.
ಈ ಭಾಗದಲ್ಲಿ ಹಲವು ತಿಂಗಳುಗಳಿಂದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ನೌಕರರು, ರಿಕ್ಷಾ ಚಾಲಕರು ಸೇರಿದಂತೆ ಹಲವು ಮಂದಿ ಈ ಶೌಚಾಲಯವನ್ನು ಬಳಕೆ ಮಾಡುತ್ತಿದ್ದರು.
ಕದ್ರಿ, ಮಲ್ಲಿಕಟ್ಟೆ, ಕದ್ರಿ ಕಂಬಳ ಸೇರಿದಂತೆ ಸುತ್ತಮುತ್ತಲು ಯಾವುದೇ ಶೌಚಾಲಯ ಇಲ್ಲದ ಕಾರಣ ಇದು ಉಪಯೋಗ ಆಗುತ್ತಿತ್ತು. ಸದ್ಯದಲ್ಲೇ ಶೌಚಾಲಯ ನಿರ್ವಹಣೆಗೆ ಆದ್ಯತೆ ನೀಡಿ, ಶೌಚಾಲಯ ಸಾರ್ವಜನಿಕರ ಉಪಯೋಗಕ್ಕೆ ತೆರೆಯಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.