Advertisement
ಮೊನ್ನೆಮೊನ್ನೆಯವರೆಗೆ ಗಡಿಯಾರದ ಮುಳ್ಳುಗಳ ಜೊತೆಗೇ ಸ್ಪರ್ಧೆಗೆ ಬಿದ್ದಿದ್ದ ಜಗತ್ತು, ಕಳೆದೆರಡು ವಾರಗಳಿಂದ ಓಡುವುದನ್ನು ಮರೆತು ಮನೆಯೊಳಗೆ ಕುಳಿತಿದೆ. ಕಣ್ಣಿಗೆ ಕಾಣದ ಜೀವಿಯೊಂದು, ನಮ್ಮ “ಅತಿ ಮುಖ್ಯ’ ಕೆಲಸಗಳನ್ನೂ, ಮುಗಿಸಲೇಬೇಕಾದ ಡೆಡ್ ಲೈನ್‌ಗಳನ್ನೂ ಮೂಲೆಗುಂಪು ಮಾಡಿಬಿಟ್ಟಿದೆ. ಜೀವನದಲ್ಲಿ ನಾವು ಯಾವುದಕ್ಕೆ ಅತಿಹೆಚ್ಚು ಮಹತ್ವ ಕೊಡುತ್ತಿದ್ದೆವೋ, ಅವೆಲ್ಲ ಇಲ್ಲದೆಯೂ ಬದುಕು ಸಾಗುತ್ತದೆ ಅಂತ ಕಲಿಸಿದೆ. ನಿತ್ಯದ ಜಂಜಾಟದಲ್ಲಿ ಸಣ್ಣಪುಟ್ಟ ಖುಷಿಗಳನ್ನು ಅನುಭವಿಸದೇ ಇದ್ದವರಿಗೆ ಮತ್ತೂಂದು ಅವಕಾಶ ನೀಡಿದೆ. ಮಾಡದೇ ಬಿಟ್ಟಿದ್ದ ಕೆಲಸಗಳನ್ನು ಮುಗಿಸಲು ಸಾಕಷ್ಟು ಸಮಯ ನೀಡಿದೆ. ಆದರೆ, ಸಿಕ್ಕಿರುವ ಆ ಸಮಯವನ್ನು ನಾವು ಹೇಗೆ ಉಪಯೋಗಿಸುತ್ತೇವೆ ಎಂಬುದು ನಮಗೆ ಬಿಟ್ಟಿದ್ದು. ಲಾಕ್ ಡೌನ್ ಅಲ್ಲಿ ಏನೇನೆಲ್ಲಾ ಮಾಡಬಹುದು ಗೊತ್ತಾ?
Related Articles
Advertisement
ಅಡುಗೆ ಕಲಿಯಿರಿ: ಅಡುಗೆ ಗೊತ್ತಿಲ್ಲದವರು, ಹಿರಿಯರ ಮಾರ್ಗದರ್ಶನದಲ್ಲಿ ಅಡುಗೆ ಕಲಿಯಿರಿ. ಗೊತ್ತಿದ್ದವರು, ಹೊಸ ರುಚಿಗಳನ್ನು ಟ್ರೈ ಮಾಡಬಹುದು. ಆದರೆ, ಅಡುಗೆಮನೆಯಲ್ಲಿ ಏನೇನು ಸಾಮಗ್ರಿಗಳು ಲಭ್ಯವೋ ಅಷ್ಟನ್ನೇ ಬಳಸಿ, ಹೊಸ ಪದಾರ್ಥ ತಯಾರಿಸಿ. ಅಡುಗೆಮನೆಗೆ ಕಾಲೇ ಇಡದ ಗಂಡಸರು ಮನೆಯಲ್ಲಿದ್ದರೆ, ಅವರಿಗೂ ಅಡುಗೆ ಕಲಿಸಿ.
ಪುಸ್ತಕ ಓದಿ: ಓದುವ ಆಸಕ್ತಿಯಿದ್ದು, ಸಮಯ ಸಿಗುತ್ತಿಲ್ಲ ಅಂತ ಕೊರಗುವವರಿಗೆ ಇದು ಸುಸಮಯ. ಬಹುತೇಕ ಪುಸ್ತಕಗಳು ಆನ್‌ಲೈನ್‌ನಲ್ಲಿ ಪಿಡಿಎಫ್ ರೂಪದಲ್ಲಿ ಲಭ್ಯ ಇರುವುದರಿಂದ, ಡೌನ್‌ಲೋಡ್ ಮಾಡಿದರೆ ಆಯಿತು. ದಿನಕ್ಕೆ ಇಂತಿಷ್ಟು ಪುಟ ಓದಬೇಕು ಅಂತ ನಿಮಗೆ ನೀವೇ ಗುರಿ ಇಟ್ಟುಕೊಳ್ಳಿ. ಓದಿದ ಪುಸ್ತಕದ ಕುರಿತು ಗೆಳೆಯರೊಂದಿಗೆ ಹಂಚಿಕೊಳ್ಳಿ. ಇದು, ಅವರನ್ನೂ ಪುಸ್ತಕ ಓದಲು ಪ್ರೇರೇಪಿಸುತ್ತದೆ.
ಸಿನಿಮಾ ನೋಡಿ: ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಬೇಕಂತಿಲ್ಲ. ಇಂಟರ್ನೆಟ್‌ನಲ್ಲಿಯೇ ಅನೇಕ ಒಳ್ಳೆಯ ಸಿನಿಮಾಗಳು ನೋಡಲು ಲಭ್ಯ. ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು, ಇಷ್ಟದ ಸಿನಿಮಾ ನೋಡಿ. ಹಳೆಯ ಸಿನಿಮಾಗಳನ್ನು ನೋಡಿರದ ಮಕ್ಕಳಿಗೆ ಅಂದಿನ ಪ್ರಸಿದ್ಧ ಸಿನಿಮಾ ತೋರಿಸಿ.
ಮಕ್ಕಳೊಂದಿಗೆ ಬೆರೆಯಿರಿ: ಆರಾಮಾಗಿ ಆಟವಾಡಿಕೊಂಡಿದ್ದ ಮಕ್ಕಳಿಗೆ, “ಮನೆಯಿಂದ ಹೊರಗೆ ಹೋಗುವಂತಿಲ್ಲ’ ಅಂತ ಹೇಳಿ, ನಿರ್ಬಂಧ ಹೇರುವುದು ಕಷ್ಟವೇ. ಹಾಗಾಗಿ, ಮಕ್ಕಳನ್ನು ಸದಾ ಆ್ಯಕ್ಟಿವ್ ಆಗಿಡುವಂಥ ಚಟುವಟಿಕೆಗಳಲ್ಲಿ ತೊಡಗಿಸಿ. ಪುಸ್ತಕ ಓದುವಾಗ ಅವರನ್ನು ಕೂರಿಸಿಕೊಂಡು ಕಥೆ ಹೇಳಿ, ಅವರಿಗಿಷ್ಟದ ಕಾರ್ಟೂನ್ ಸಿನಿಮಾವನ್ನು ಒಟ್ಟಿಗೆ ಕುಳಿತು ನೋಡಿ, ಮನೆಯ ಸಣ್ಣ ಪುಟ್ಟ ಕೆಲಸ ಕಲಿಸಿ. ಅವರನ್ನು ಸುಮ್ಮನೆ ಬಿಟ್ಟರೆ ಮೊಬೈಲ್ ಒಳಗೆ ಮುಳುಗಿ ಹೋಗಿಬಿಡಬಹುದು.
ಕಸೂತಿ, ರಂಗೋಲಿ, ಹೊಲಿಗೆ : ಅಡುಗೆ, ಆಫೀಸ್, ಮಕ್ಕಳ ಕೆಲಸ ಅಂತ ಬ್ಯುಸಿಯಾಗಿದ್ದ ಬಹುತೇಕ ಮಹಿಳೆಯರು, ಒಂದು ಕಾಲದಲ್ಲಿ ಇಷ್ಟಪಟ್ಟು ಕಲಿತಿದ್ದ ಕಸೂತಿ, ರಂಗೋಲಿ, ಸೀರೆಗೆ ಫಾಲ್ಸ್ ಹಾಕುವುದು ಮುಂತಾದ ಕಲೆಗಳನ್ನು ಮರೆತೇ ಬಿಟ್ಟಿರುತ್ತಾರೆ. ಅವೆಲ್ಲವಕ್ಕೂ ಈಗ ಸ್ವಲ್ಪ ಸಮಯ ಕೊಡಲು ಸಾಧ್ಯವಿದೆ. ಮನೆಯಲ್ಲಿ ಹೊಲಿಗೆ ಮಷೀನ್ ಇದ್ದರೆ, ಹಳೆಯ ಸೀರೆಗಳಿಂದ ಮಕ್ಕಳಿಗೆ ಲಂಗ ಮುಂತಾದವನ್ನು ಹೊಲಿಯಬಹುದು.
ಕಸದಿಂದ ರಸ : ಮನೆಯಲ್ಲಿ ಶೇಖರವಾಗಿರುವ ಅನಗತ್ಯ ವಸ್ತುಗಳಿಂದ (ಪ್ಲಾಸ್ಟಿಕ್ ಬಾಟಲಿ, ಹಳೆಯ ಪೇಪರ್, ರಟ್ಟು, ಹಳೆಯ ಬಟ್ಟೆ) ಅಲಂಕಾರಿಕ ವಸ್ತುಗಳನ್ನು ತಯಾರಿಸಬಹುದು. ಅದಕ್ಕೆ ಸಂಬಂಧಿಸಿದ ವಿಡಿಯೋಗಳು, ಯು ಟ್ಯೂಬ್‌ನಲ್ಲಿ ಲಭ್ಯ. ಇದರಿಂದ ಕಸ ವಿಲೇವಾರಿ ಆಗುವುದಷ್ಟೇ ಅಲ್ಲ, ಶೋ ಕೇಸ್‌ನ ಅಂದವನ್ನು ಹೆಚ್ಚಿಸುವ ಅಲಂಕಾರಿಕ ವಸ್ತುಗಳನ್ನು ತಯಾರಿಸಿದ ಖುಷಿಯೂ ನಿಮ್ಮದಾಗುತ್ತದೆ.
ಬರವಣಿಗೆಯಲ್ಲಿ ತೊಡಗಿ: ಅನೇಕರಿಗೆ ಬರವಣಿಗೆಯಲ್ಲಿ ಆಸಕ್ತಿ ಇರುತ್ತದೆ. ಆದರೆ, ಸಮಯದ ಅಭಾವದಿಂದ ಯೋಚನೆಗಳನ್ನು ಅಕ್ಷರಕ್ಕೆ ಇಳಿಸಲು ಸಾಧ್ಯವಾಗಿರುವುದಿಲ್ಲ. ಈ ಬಿಡುವಿನ ವೇಳೆಯನ್ನು ಬರವಣಿಗೆಗಾಗಿ ಬಳಸಿಕೊಳ್ಳಿ. ನಿಮ್ಮ ಬರಹವನ್ನು ಪತ್ರಿಕೆ, ಬ್ಲಾಗ್, ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಬಹುದು.
ಟೆಕ್ ಜ್ಞಾನ ಹೆಚ್ಚಿಸಿಕೊಳ್ಳಿ: ಮೊಬೈಲ್, ಕಂಪ್ಯೂಟರ್ ಬಳಕೆಯಲ್ಲಿ, ಹೊಸ ಅಪ್ಲಿಕೇಶನ್ (ಆ್ಯಪ್) ವಿಷಯದಲ್ಲಿ ಸ್ಲೋ ಇದ್ದವರು ಈ ಸಮಯವನ್ನು ತಂತ್ರಜ್ಞಾನದ ಕಲಿಕೆಗಾಗಿ ತೊಡಗಿಸಿಕೊಳ್ಳಬಹುದು. ಆ ಮೂಲಕ ತಮ್ಮನ್ನು ತಾವು ಅಪ್‌ಡೇಟ್ ಮಾಡಿಕೊಳ್ಳಲು ಇದೊಂದು ಒಳ್ಳೆ ಅವಕಾಶ.