ಹೇಗಿದ್ದೀರಿ ಎಲ್ಲರೂ? ಅಷ್ಟೇನೂ ಚೆನ್ನಾಗಿಲ್ಲ ಅಂತ ಗೊತ್ತಿದೆ ಬಿಡಿ..! ಸದ್ಯಕ್ಕಿದು ಮನೆ ಮನೆ ಕತೆ ಅಲ್ಲವೇ..? ಹೇಗೆ ದಿನ ದೂಡೋದು ಅಂತ ನನಗೂ ಚಿಂತೆಯಾಗಿತ್ತು. ಹೇಗೂ ಒಂದು ಗಂಡಾಳು, ಒಂದು ಹೆಣ್ಣಾಳು (ಅಂದರೆ ಗಂಡ ಮತ್ತು ಮಗಳು) ಜೊತೆಗಿವೆಯಲ್ಲ ಅಂದುಕೊಂಡೆ. ಸಾಮಾನ್ಯವಾಗಿ, ಏಪ್ರಿಲ್ ಮೊದಲ ವಾರದ ತನಕ, ಆಫೀಸ್ ಕೆಲಸದಲ್ಲಿ ಬ್ಯುಸಿಯಾಗಿ ಇರುತ್ತಿದ್ದೆ. ಆಮೇಲೆಯೇ ಮನೆ ಕಡೆ ಗಮನ ಕೊಡಲು ಆಗುತ್ತಿದ್ದುದು. ಆದರೆ, ಈಗ ಒಂದೆರಡು ವಾರ ಮೊದಲೇ ಬಿಡುವು ಸಿಕ್ಕಿದೆ.
“ಒಂದೊಂದಾಗಿ ಮನೆ ಒಪ್ಪ- ಓರಣ ಮಾಡೋಣವೇ?’ ಅಂತ ಅರ್ಜಿ ಇಟ್ಟೆ. ಅಪ್ಪ, ಮಗಳು ಇಬ್ಬರೂ ಒಳ್ಳೆ ಕಯಿಂಡ್ಲೆ ಕಾಯಿ (ಸವತೆಕಾಯಿಯ ಜಾತಿಯದ್ದೇ ಆದರೆ ಬಲು ಕಹಿ) ರುಚಿ ನೋಡಿದವರ ಹಾಗೆ ಮುಖ ತಿರುಗಿಸಿಬಿಟ್ಟರು.
ಮಗಳು “ಕಾಲೇಜಿಗೇನೋ ರಜೆ. ಆದ್ರೆ ಒಂದೆರಡು ಥೀಸಿಸ್ ಬರೆದು ಸಬ್ಮಿಟ್ ಮಾಡೋದಿದೆ. ಪ್ರಾಜೆಕ್ಟ್ ವರ್ಕ್ ಅದು.. ನಿಂಗೊತ್ತಾಗಲ್ಲ..’ ಅಂತ ನುಣುಚಿಕೊಂಡಳು. ಇನ್ನು ರಾಯರು. ಅವರಿಗೂ ಆಫೀಸಿಲ್ಲ. ಆದರೆ, ಅವರು ವಿಪರೀತ ಬ್ಯುಸಿ. ಅವ್ರಿಗೆ ಟಿವಿಲಿ ನ್ಯೂಸ್ ನೋಡೋದಿರುತ್ತೆ. ಇರುವ ನಾಲ್ಕು ಸಾಲು ಸುದ್ದಿಯನ್ನೇ ತಿರುಚೀ ಮುರುಚೀ ಅರ್ಧ ಗಂಟೆ ಹೇಳುವ ಚಾನೆಲ್ ಗಳೆಂದರೆ ನನಗೆ ಇರಿಸುಮುರಿಸು. ಆದರೆ ರಾಯರು ಮಾತ್ರ, ಪ್ರತಿ ಬಾರಿಯೂ ಅದೇನೋ ಹೊಸ ಹೊಸ ವಿಷಯ ಹೇಳ್ತಿದ್ದಾರೆ ಅನ್ನುವ ಭಂಗಿಯಲ್ಲಿ ಕೂತು ಜವಾಬ್ದಾರಿಯಿಂದ ಕೇಳಿಸಿಕೊಳ್ಳುತ್ತಾರೆ!
“ಅದೇನೂಂತ ನೋಡ್ತೀರೋ ಟಿವಿಯವರ ವ್ಯರ್ಥ ಪ್ರಲಾಪವನ್ನ..’ ಅಂದುಬಿಟ್ಟೆ. ಇವರನ್ನ ಅಂದಿದ್ರೆ ಅಷ್ಟಾಗಿ ಬೇಜಾರು ಆಗುತ್ತಿರಲಿಲ್ಲವೇನೋ.. ಹೇಗೂ ಅಭ್ಯಾಸವಿದೆಯಲ್ಲ..! ಆ ಟಿವಿಯವರ ಬಗ್ಗೆ ಒಂದು ಮಾತು ಅಂದಿದ್ದೇ ತಪ್ಪಾಗೋಯ್ತು. ಆಯಕ್ಕಿಲ್ಲ ಅಂದ್ರೆ ಆಯಕ್ಕಿಲ್ಲ ಅಂತ ಪಟ್ಟು ಹಿಡಿದು ಕೂತವರ ಹಾಗೆ ಮುಖ ಗಂಟಿಕ್ಕಿಬಿಟ್ಟರು. ಆಗ ಜ್ಞಾನೋದಯವಾಯಿತು ನನಗೆ. ಇದು ಸಿಟ್ಟಿಗೆ, ಜಗಳಕ್ಕೆ ಹೊತ್ತಲ್ಲ. ಉಪಾಯವಾಗಿ ಬುದ್ಧಿ ಬಳಸಿ ಕೆಲಸ ಮಾಡಬೇಕು ಅಂತ. ಅವತ್ತು ಸುಮ್ಮನಿದ್ದು, ಮರುದಿನ ಬೆಳಗ್ಗೆ ಒಂದು ‘ಮಧ್ಯಂತರ ಟೀ’ ಸಪ್ಲೆç ಮಾಡಿ ಮೆಲ್ಲಗೆ ಅಹವಾಲಿಟ್ಟೆ.
“ರೀ, ನಾವು ಹೀಗೆ ಏನೂ ಕೆಲಸ ಮಾಡದೆ, ಮನೆಯೊಳಗೆ ಉಂಡು- ತಿಂದು ಮಾಡಿಕೊಂಡಿದ್ದರೆ ಖಂಡಿತ ತೂಕ ಹೆಚ್ಚಿಸಿಕೊಳ್ತೀವಿ. ಮನೆಯ ಎಲ್ಲ ಕಂಬಗಳ ಮೇಲೆ ಹೆಚ್ಚು ಭಾರ ಆಗುತ್ತೆ ಅಲ್ವೇ… ಒಂದು ಕೆಲಸ ಮಾಡೋಣ. ಬೇಡದೆ ಇರೋ ವಸ್ತುಗಳನ್ನೆಲ್ಲ ಮುಲಾಜಿಲ್ಲದೆ ಹೊರಕ್ಕೆ ಹಾಕೋಣ. ಮುಂದೆ ಬೇಕಾಗಬಹುದು ಅಂತ ಇಟ್ಟುಕೊಂಡು ಮನೆ ಎಲ್ಲ ತುಂಬಿ ಹೋಗಿದೆ. ಸೋಚಿ ಹಗುರ ಮಾಡಿಬಿಡೋಣವೇ…’ ಅಂದೆ. ಮನೆಗೆ ಅಪಾಯ ಅಂದಿದ್ದೇ, ವರ್ಕ್ ಔಟ್ ಆಯಿತು!
ಹೌದೌದು ಅಂತ ಒಪ್ಪಿಗೆಯ ಠಸ್ಸೆ ಒತ್ತಿಯೇಬಿಟ್ಟರು. ಹೂವಿನ ಸರ ಎತ್ತಿದಷ್ಟು ಸುಸೂತ್ರವಾಯಿತು ಅನ್ನುತ್ತಾರಲ್ಲ… ಹಾಗಾಯಿತು. ವಾರ್ಡ್ ರೂಮ್, ಬಾಲ್ಕನಿ ಗಾರ್ಡನ್ ಕೆಲಸ, ಕಿಟಕಿ- ಬಾಗಿಲು ಧೂಳು ಹೊಡೆಯುವುದು… ಇತ್ಯಾದಿ ಎಲ್ಲವೂ ಒಂದೊಂದಾಗಿ ಮುಗಿದೇ ಬಿಟ್ಟಿತು.
ಈ ಕೋವಿಡ್ 19 ಮಾರಿ ಬಂದಿದ್ದೇ ಬಂದಿದ್ದು, ಅದೆಷ್ಟು ಪಾಠಗಳನ್ನು ಕಲಿಸಿಬಿಟ್ಟಿತು..!
-ಸುಮನಾ ಮಂಜುನಾಥ್