ಚಾಮರಾಜನಗರ: ಮಾರ್ಚ್ ತಿಂಗಳಲ್ಲಿ ಬಂದ ಲಾಕ್ ಡೌನ್ ಕಲಾ ವಿಭಾಗದ ವಿದ್ಯಾರ್ಥಿಗಳ ಫಲಿತಾಂಶಕ್ಕೆ ತೊಡಕಾಯಿತೇ? ಜಿಲ್ಲೆಯಲ್ಲಿ ಕಲಾ ವಿಭಾಗದಲ್ಲಿ ಅನುತ್ತೀಣರಾಗಿರುವ ವಿದ್ಯಾರ್ಥಿಗಳ ಶೇಕಡಾವಾರು ನೋಡಿದರೆ ಹೀಗನಿಸದೇ ಇರದು.
ಜಿಲ್ಲೆಯಲ್ಲಿ ಕಳೆದ ವರ್ಷ ಜಿಲ್ಲೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ. 83.18ರಷ್ಟು, ಕಲಾ ವಿಭಾಗದಲ್ಲಿ ಶೇ. 69.18 ಹಾಗೂ ವಿಜ್ಞಾನ ವಿಭಾಗದಲ್ಲಿ 59.50 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ವಿಜ್ಞಾನ ವಿಭಾಗ ನಿರೀಕ್ಷೆಗೂ ಮೀರಿ ಉತ್ತಮ ಫಲಿತಾಂಶ ದಾಖಲಿಸಿದೆ. ಕಲಾ ವಿಭಾಗ ತೀವ್ರ ಕುಸಿತ ಕಂಡಿದ್ದು, ಕಳೆದ ವರ್ಷ ಶೇ. 69.18 ರಿಂದ 53.71ಕ್ಕೆ ಕುಸಿದಿದೆ. ಇದಕ್ಕೆ ಇಂಗ್ಲಿಷ್ ವಿಷಯದಲ್ಲಿ ಅನುತ್ತೀರ್ಣರಾಗಿರುವವರ ಸಂಖ್ಯೆ ಹೆಚ್ಚಿರುವುದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಮುಂದೂಡಲಾದ ಇಂಗ್ಲಿಷ್ ಪರೀಕ್ಷೆಯನ್ನು ಮೂರು ತಿಂಗಳ ನಂತರ ನಡೆಸಲಾಗಿತ್ತು. ಕಲಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮೊದಲೇ ಕಬ್ಬಿಣದ ಕಡಲೆಯಾಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಸರಿಯಾಗಿ ಓದಿಕೊಳ್ಳಲಾಗದೇ, ಅನುತ್ತೀರ್ಣರಾಗಿರಬಹುಂಬ ವಾದವೊಂದು ಇದೀಗ ಕೇಳಿಬರಲಾರಂಭಿಸಿದೆ.
ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಮಾಧ್ಯಮ ಇಂಗ್ಲಿಷ್ ಆಗಿರುವುದರಿಂದ ಅವರು ಇಂಗ್ಲಿಷ್ ಭಾಷಾ ವಿಷಯದಲ್ಲಿ ಉತ್ತೀರ್ಣರಾಗುತ್ತಾರೆ. ಕನ್ನಡ ಮಾಧ್ಯಮದ ಕಲಾ ವಿಭಾಗದಲ್ಲಿನ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯ ಕಠಿಣ. ಲಾಕ್ ಡೌನ್, ಮೂರು ತಿಂಗಳ ಅಂತರ ಎಲ್ಲ ಸೇರಿ ಸೇರಿ ಇಂಗ್ಲಿಷ್ ಅನ್ನು ಸರಿಯಾಗಿ ಬರೆಯಲಾಗದೇ ಅಂಕ ಗಳಿಕೆಯಲ್ಲಿ ಹಿಂದುಳಿದಿದ್ದಾರೆ.
ತಾಲೂಕಿನ ಗ್ರಾಮೀಣ ಪ್ರದೇಶದ ಕಾಲೇಜೊಂದರಲ್ಲಿ 15 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಇವರಲ್ಲಿ 13 ವಿದ್ಯಾರ್ಥಿಗಳು ಇಂಗ್ಲಿಷ್ ಒಂದರಲ್ಲಿ ಫೇಲಾಗಿ, ಇನ್ನೆಲ್ಲ ವಿಷಯಗಳಲ್ಲಿ ತೇರ್ಗಡೆ ಹೊಂದಿದ್ದಾರೆ. ಇಂಥ ಹಲವು ನಿದರ್ಶನಗಳಿವೆ.