ನವದೆಹಲಿ: ಕೋವಿಡ್ 19 ವೈರಸ್ ತಂದೊಡ್ಡಿರುವ ಸವಾಲನ್ನು ಎದುರಿಸುವ ನಿಟ್ಟಿನಲ್ಲಿ ದೇಶಾದ್ಯಂತ ಒಟ್ಟು 586 ಆಸ್ಪತ್ರೆಗಳನ್ನು ಕೋವಿಡ್ ಪ್ರಕರಣಗಳಿಗೆಂದೇ ನಿಗದಿಪಡಿಸಲಾಗಿದೆ. ಅವುಗಳಲ್ಲಿ ಒಟ್ಟಾರೆ ಒಂದು ಲಕ್ಷ ಐಸೋಲೇಷನ್ ಬೆಡ್ ಗಳು ಹಾಗೂ 11,500 ಐಸಿಯು ಬೆಡ್‌ಗಳನ್ನು ಸಿದ್ಧಪಡಿಸಿಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಕೋವಿಡ್ ಹಾಟ್ ಸ್ಪಾಟ್‌ಗಳನ್ನು ಗುರುತಿಸಲು ಸರಕಾರವು ಆರಂಭದಲ್ಲೇ ಸೂಕ್ತ ಕ್ರಮ ಕೈಗೊಂಡಿದೆ. ಒಂದು ವೇಳೆ, ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸದೇ ಇರುತ್ತಿದ್ದರೆ ಹಾಗೂ ವೈರಸ್ ನಿರ್ಮೂಲನೆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದೇ ಇರುತ್ತಿದ್ದರೆ, ಏಪ್ರಿಲ್ 15ರ ವೇಳೆಗೆ ದೇಶದಲ್ಲಿ ಸುಮಾರು 8.1 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆಯಾಗಿರುತ್ತಿದ್ದವು. ಅಂದರೆ, ಸೋಂಕಿತರ ಪ್ರಮಾಣ ಶೇ.41ರಷ್ಟು ಹೆಚ್ಚಳವಾಗುತ್ತಿತ್ತು ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ.
ಜತೆಗೆ, ಸಾಮಾಜಿಕ ಅಂತರ, ಲಾಕ್ ಡೌನ್ ಮತ್ತು ಇತರೆ ಕ್ರಮಗಳು ಕೋವಿಡ್ ವಿರುದ್ಧದ ಸಮರದಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದೂ ಅವರು ಹೇಳಿದ್ದಾರೆ. ಸರಕಾರ ಮುನ್ನೆಚ್ಚರಿಕೆಯ ಹಾಗೂ ಸಕ್ರಿಯ ನಿರ್ಧಾರ ಕೈಗೊಂಡಿದ್ದರಿಂದ ವೈರಸ್ ವ್ಯಾಪಿಸುವಿಕೆಗೆ ಕಡಿವಾಣ ಬಿದ್ದಿದೆ.
ಆಯುಷ್ ಸಚಿವಾಲಯವು, ಉಸಿರಾಟಕ್ಕೆ ಸಂಬಂಧಿಸಿದ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಕುರಿತಾದ ಮಾರ್ಗಸೂಚಿಗಳನ್ನು ಪ್ರಕಟಿಸಿತು. ಜಿಲ್ಲಾಮಟ್ಟದ ತುರ್ತು ಯೋಜನೆಗಳಲ್ಲಿ ಇವುಗಳನ್ನೂ ಸೇರಿಸಿಕೊಳ್ಳುವಂತೆ ಜಿಲ್ಲೆಗಳಿಗೂ ಸೂಚಿಸಲಾಯಿತು. ಒಟ್ಟಾರೆ, ಸರಕಾರ ಕೈಗೊಂಡ ಕ್ರಮಗಳಿಂದಾಗಿ ವೈರಸ್‌ನ ದೊಡ್ಡ ಮಟ್ಟದ ವ್ಯಾಪಿಸುವಿಕೆಗೆ ಬ್ರೇಕ್ ಹಾಕಿದಂತಾಯಿತು ಎಂದೂ ಅಗರ್ವಾಲ್ ತಿಳಿಸಿದ್ದಾರೆ.
ಕೊರತೆ ಇಲ್ಲ: ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ಕೊರತೆ ಎದುರಾಗಿಲ್ಲ ಎಂದೂ ಅಗರ್ವಾಲ್ ಸ್ಪಷ್ಟಪಡಿಸಿದ್ದಾರೆ. ಖಾಸಗಿ ಕ್ಷೇತ್ರಕ್ಕೆ ಸುಮಾರು 2.65 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಟ್ಯಾಬ್ಲೆಟ್ ಗಳು ಲಭ್ಯ ಇವೆ. ಇನ್ನೂ 2ರಿಂದ 3 ಕೋಟಿ ಮಾತ್ರೆಗಳನ್ನು ತಯಾರಿಸುವಂತೆ ಫಾರ್ಮಾ ಕಂಪನಿಗಳಿಗೆ ಮನವಿ ಮಾಡಿಕೊಂಡಿದ್ದೇವೆ ಎಂದೂ ಹೇಳಿದ್ದಾರೆ.
ಕಿಟ್‌ಗಳು ಇನ್ನೂ ಬಂದಿಲ್ಲ: ಇದೇ ವೇಳೆ, ಈಗಾಗಲೇ ಐಸಿಎಂಆರ್ 5 ಲಕ್ಷ ಆಂಟಿಬಾಡಿ ಪರೀಕ್ಷಾ ಕಿಟ್‌ಗಳಿಗೆ ಆರ್ಡರ್ ಸಲ್ಲಿಸಿತ್ತು. ಆದರೆ, ಇನ್ನೂ ಅವುಗಳು ನಮ್ಮ ಕೈಸೇರಿಲ್ಲ ಎಂದು ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ದೇಶಾದ್ಯಂತ 1.7 ಲಕ್ಷ ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 16,564 ಪ್ರಕರಣಗಳು ಪಾಸಿಟಿವ್ ಆಗಿವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.