ಕಲಬುರಗಿ: ಕೋವಿಡ್ 19 ಸೋಂಕು ಹತೋಟಿಗೆ ತರುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಿ ಡಿಸಿ ಶರತ್ ಬಿ. ರವಿವಾರ ರಾತ್ರಿ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಜು.14ರಿಂದ 20ರವರೆಗೆ ಒಂದು ವಾರ ಕಾಲ ಗ್ರಾಮೀಣ ಭಾಗ ಹೊರತುಪಡಿಸಿ ಕಲಬುರಗಿ ಮಹಾನಗರ ಮತ್ತು ತಾಲೂಕು ಕೇಂದ್ರಗಳು, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಲಾಕ್‍ಡೌನ್ ಆದೇಶ ಜಾರಿಯಲ್ಲಿದೆ. ಇದನ್ನು ಜು.27ರವರೆಗೆ ವಿಸ್ತರಣೆ ಮಾಡಿಸಿ ಡಿಸಿ ಮರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸರಣಿ ಮುಂದುವರೆದಿದೆ. ಶನಿವಾರ ಮೂವರು ಮೃತಪಟ್ಟಿರುವುದು ದೃಢವಾದ ಬೆನ್ನಲ್ಲೆ ರವಿವಾರ ಮತ್ತೆ ಮೂವರು ಸೋಂಕಿಗೆ ಬಲಿಯಾಗಿರುವುದು ಖಚಿತವಾಗಿದೆ.
ಉಸಿರಾಟದ ಸಮಸ್ಯೆ, ಜ್ವರ, ಕಫ ತೊಂದರೆಯಿಂದ ಬಳಲುತ್ತಿದ್ದ ಓರ್ವ ಮಹಿಳೆ ಮತ್ತು ಇಬ್ಬರು ಪುರುಷರು ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ಮಹಾಮಾರಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ.
ಇದೇ ವೇಳೆ 69 ಜನರಿಗೆ ವೈರಾಣು ಸೋಂಕಿರುವುದು ಖಚಿತವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,743ಕ್ಕೆ ಏರಿಕೆಯಾಗಿದೆ. 80 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಮೂಲಕ 1,771 ಜನರು ಗುಣಮುಖರಾಗಿ ಮನೆಗೆ ಬಂದಿದ್ದಾರೆ. ಇನ್ನೂ, 926 ಜನರು ಕೋವಿಡ್ ಪೀಡಿತರು ಐಸೋಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.