ಹುನಗುಂದ: ರೈತನ ಜೇಬು ತುಂಬಿಸಬೇಕಿದ್ದ ಈರುಳ್ಳಿ ಮಹಾಮಾರಿ ಕೋವಿಡ್ ಹೊಡೆತಕ್ಕೆ ಸಿಲುಕಿ ಕಣ್ಣೀರು ಕೋಡಿ ಹರಿಸುವಂತಾಗಿದೆ. ಕಳೆದ 46 ದಿನಗಳಿಂದ ಕೋವಿಡ್ ಹಾವಳಿಯಿಂದ ರೈತ ಕಂಗಾಲಾಗಿದ್ದಾನೆ. ತಾಲೂಕಿನಲ್ಲಿ ಈರುಳ್ಳಿ ಬೆಳೆಗಾರರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ತಾಲೂಕಿನಲ್ಲಿ 350 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಬೆಳೆದ ಈರುಳ್ಳಿ ಮಾರುಕಟ್ಟೆಗೆ ತರುವ ಸಮರ್ಪಕ ವ್ಯವಸ್ಥೆಯಿಲ್ಲ. ಮಾರುಕಟ್ಟೆಗೆ ತಂದರೂ ಸೂಕ್ತ ಬೆಲೆ ಸಿಗುತ್ತಿಲ್ಲ ಎಂಬುದು ರೈತನ ಅಳಲು.
ಕ್ವಿಂಟಲ್‌ಗೆ 600 ರೂ.: ಕಳೆದ ಡಿಸೆಂಬರ್‌ನಲ್ಲಿ ಕ್ವಿಂಟಲ್ ಈರುಳ್ಳಿಗೆ 7 ರಿಂದ 8 ಸಾವಿರ ರೂ. ದರವಿತ್ತು. ಲಾಕ್‌ಡೌನ್‌ಗಿಂತ ಮುಂಚೆ ಸ್ವಲ್ಪ ಪ್ರಮಾಣದಲ್ಲಿ ಈರುಳ್ಳಿಗೆ ಬೆಲೆಯಿತ್ತು. ಇದೀಗ ಕುಸಿದಿದ್ದು, ಕ್ವಿಂಟಲ್‌ಗೆ 600 ರೂ. ದರವಿದೆ. ಅಕಾಲಿಕ ಮಳೆಯಿಂದ ಅರ್ಧದಷ್ಟು ಈರುಳ್ಳಿ ಕೊಳೆತ ಕಳೆದ 15 ದಿನಗಳಿಂದ ಆಗಾಗ ಸುರಿಯುತ್ತಿರುವ ಮಳೆಯಿಂದ ಕಟಾವು ಹಂತದಲ್ಲಿದ್ದ ಈರುಳ್ಳಿ ಕೊಳೆಯುತ್ತಿದೆ. ಕಟಾವು ಮಾಡುವ ಹಂತದಲ್ಲಿಯೇ ಲಾಕ್‌ಡೌನ್ ಜಾರಿಗೊಂಡಿದ್ದು, ಬೆಳೆಗಾರರು ಮನೆಬಿಟ್ಟು ಹೊರಗೆ ಬರದಂತೆ ಮಾಡಲಾಯಿತು. ಇದರಿಂದ ಈರುಳ್ಳಿ ಕಟಾವು ಮಾಡಲು ಪರದಾಡುವಂತಾಯಿತು. ಈರುಳ್ಳಿ ನೆಲದಲ್ಲಿ ಉಳಿದು ಕೊಳೆಯುವ ಸ್ಥಿತಿ ಎದುರಾಗಿತ್ತು. ಲಾಕ್‌ಡೌನ್ ಸಡಿಲಿಕೆಯಿಂದ ಬೆಳೆಗಾರರು ಈರುಳ್ಳಿ ಕಟಾವು ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಸೂಕ್ತ ಬೆಲೆ ಸಿಗದೇ ಆತಂಕಗೊಂಡಿದ್ದಾನೆ.
ತಂತಿ ಬೇಲಿ ನಿರ್ಮಾಣ: ಸದ್ಯ ಈರುಳ್ಳಿ ಕೆಡದಂತೆ ರೈತ ತನ್ನ ಮನೆಯ ಮುಂದಿನ ಖಾಲಿ ಜಾಗದಲ್ಲಿ ಕಟ್ಟಿಗೆ ಮತ್ತು ತಂತಿಯಿಂದ ಬೇಲಿ ನಿರ್ಮಾಣ ಮಾಡಿ ಅದರಲ್ಲಿ ಈರುಳ್ಳಿಯನ್ನು ಕೆಡದಂತೆ ಸಂಸ್ಕರಿಸುತ್ತಿದ್ದಾರೆ.
4 ಎಕರೆ ಜಮೀನಲ್ಲಿ ಈರುಳ್ಳಿ ಬೆಳೆಯಲು 2 ಲಕ್ಷ ಖರ್ಚು: ಬೇಸಿಗೆಯಲ್ಲಿ ಒಳ್ಳೆಯ ದರ ಬರುತ್ತದೆ ಎಂದು ನಂಬಿ 4 ಎಕರೆ ಹೊಲದಲ್ಲಿ ಈರುಳ್ಳಿ ಬಿತ್ತನೆ ಮಾಡಿ ಅದಕ್ಕೆ ಗೊಬ್ಬರ, ಕೀಟನಾಶಕ, ಕಳೆ ತೆಗೆಯಲು ಸುಮಾರು 2 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾನೆ. ಬೆಳೆ ಮಾತ್ರ ಸಮೃದ್ದಿಯಾಗಿ ಬಂದಿದ್ದರೂ ಬೆಳೆಗೆ ತಕ್ಕ ಬೆಲೆಯಿಲ್ಲದೇ ಖರ್ಚು ಮಾಡಿದ ಹಣ ಈ ಬೆಳೆಯಿಂದ ದೊರೆಯುತ್ತದೆ ಎಂಬುದು ಕನಸಿನ ಮಾತಾಗಿದೆ. ರಾಶಿ ರಾಶಿ ಈರುಳ್ಳಿ ಬೆಳೆಯ ಮುಂದೆ ನಿಂತರೇ ಕಣ್ಣೀರು ಕಪಾಳಕ್ಕೆ ಬರುತ್ತವೆ. ಖರ್ಚು ಮಾಡಿದ ಹಣ ಬಂದರೇ ಸಾಕು. ಹೊಲದೊಳಗೆ ಹಾಕಿದ ಈರುಳ್ಳಿ ಕೇಳ್ಳೋರಿಲ್ಲದಂತಾಗಿದೆ ಎಂದು ರೈತ ಗೋಳಾಡುತ್ತಿದ್ದಾನೆ.
ಕೋವಿಡ್ ಸುಳಿಗೆ ಸಿಲುಕಿ 4 ಎಕರೆ ಜಮೀನನಲ್ಲಿ ಸಮೃದ್ದಿಯಾಗಿ ಈರುಳ್ಳಿ ಬೆಳೆದರೂ ಸೂಕ್ತ ಬೆಲೆ ಸಿಗದೇ ಇದ್ದ ಬೆಲೆಗೆ ಮಾರಾಟ ಮಾಡಲು ಕೂಡಾ ಸಾಧ್ಯವಾಗುತ್ತಿಲ್ಲ. ಲಾಕ್‌ಡೌನ್‌ನಿಂದ ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮ 1800 ಕ್ವಿಂಟಲ್ ಈರುಳ್ಳಿ ನೆಲದ ಪಾಲಾಗುತ್ತಿದೆ.
-ಭರಮಪ್ಪ ಹೊಸೂರ, ಹುನಗುಂದ ರೈತ
ಈರುಳ್ಳಿ ಬೆಂಬಲ ಕುರಿತು ಸರ್ಕಾರ ನಿರ್ಧರಿಸಿಲ್ಲ. ರೈತರ ಹಿತಕ್ಕಾಗಿ ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದೇವೆ.
-ಬಸವರಾಜ ನಾಗರಾಳ, ತಹಶೀಲ್ದಾರ್ ಹುನಗುಂದ
-ಮಲ್ಲಿಕಾರ್ಜುನ ಬಂಡರಗಲ್ಲ