ರಾಯಚೂರು: ಜನತಾ ಕರ್ಫ್ಯೂ ಅವಧಿ ವಿಸ್ತರಿಸುತ್ತಲೇ ಸಾಗಿದಂತೆ ವ್ಯಾಪಾರ ವಲಯ ಸಂಪೂರ್ಣ ಜರ್ಜರಿತಗೊಂಡಿದೆ. ಕಳೆದ 22 ದಿನಗಳಿಂದ ವ್ಯಾಪಾರಕ್ಕೆ ಬ್ರೇಕ್ ಬಿದ್ದಿದ್ದು, ಈಗಾಗಲೇ ವ್ಯಾಪಾರಸ್ಥರು ಕೋಟ್ಯಂತರ ರೂ. ನಷ್ಟ ಅನುಭವಿಸಿದ್ದಾರೆ.
ಎಲ್ಲೆಡೆ ಕೊರೊನಾ ಸೋಂಕು ಮಿತಿಮೀರಿ ಹರಡುತ್ತಿದೆ. ಇದರಿಂದ ಸರ್ಕಾರ ಕಟ್ಟುನಿಟ್ಟಿನ ಜನತಾ ಕರ್ಫ್ಯೂ ಜಾರಿ ಮಾಡಿದೆ. ಕಳೆದ ಏ.20ರಿಂದಲೇ ಅಗತ್ಯ ವಸ್ತುಗಳು ಬಿಟ್ಟರೆ ಉಳಿದ ಯಾವುದೇ ವಹಿವಾಟು ನಡೆಸುವಂತಿಲ್ಲ ಎಂಬ ಸರ್ಕಾರದ ಆದೇಶದಿಂದ ವ್ಯಾಪಾರ ವಲಯ ತಲ್ಲಣಗೊಂಡಿದೆ. ನಿತ್ಯ ಕೋಟ್ಯಂತರ ವಹಿವಾಟು ನಡೆಯುತ್ತಿದ್ದು, ಸರ್ಕಾರಕ್ಕೆ ಲಕ್ಷಾಂತರ ರೂ. ತೆರಿಗೆ ಪಾವತಿಯಾಗುತ್ತಿತ್ತು.
ಈಗ ವ್ಯಾಪಾರಿಗಳಿಗೂ ಆದಾಯವಿಲ್ಲ; ಅತ್ತ ಸರ್ಕಾರಕ್ಕೂ ತೆರಿಗೆ ಇಲ್ಲ ಎನ್ನುವಂತಾಗಿದೆ. ಇದು ಮದುವೆ ಕಾಲವಾದ್ದರಿಂದ ಬಟ್ಟೆ, ಚಿನ್ನಾಭರಣ ಸೇರಿದಂತೆ ಇನ್ನಿತರ ವಸ್ತುಗಳ ಖರೀದಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತಿತ್ತು. ಕರ್ಫ್ಯೂ ಕಾರಣಕ್ಕೆ ಅದೆಲ್ಲದಕ್ಕೂ ಬ್ರೇಕ್ ಬಿದ್ದಿದೆ. ನಗರದಲ್ಲಿ 250ಕ್ಕೂ ಅ ಧಿಕ ಚಿನ್ನಾಭರಣ ಅಂಗಡಿಗಳಿದ್ದು, ಮದುವೆ ಕಾಲದಲ್ಲಿ ಏನಿಲ್ಲವೆಂದರೂ 20-25 ಕೋಟಿ ವಹಿವಾಟು ನಡೆಯುತ್ತಿತ್ತು. ಚಿನ್ನಕ್ಕೆ ಶೇ.3ರಷ್ಟು ತೆರಿಗೆ ಇರುವ ಕಾರಣ ಸರ್ಕಾರ ಲಕ್ಷಾಂತರ ರೂ. ಆದಾಯಕ್ಕೆ ಕೊಕ್ಕೆ ಬಿದ್ದಿದೆ. ಸರಾಫ್ ಬಜಾರ್ ವೆಲೆಧೀರ್ ಅಸೊಸಿಯೇಶನ್‌ನಿಂದ ಮದುವೆ ಕಾಲ ಮುಗಿಯುವವರೆಗೆ ಕೆಲ ಕಾಲ ವ್ಯಾಪಾರ ವಹಿವಾಟು ನಡೆಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು.
ಆದರೆ, ಅದಕ್ಕೆ ಜಿಲ್ಲಾಡಳಿತದಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಅಲ್ಲದೇ, ಈಗ ಅಕ್ಷಯ ತೃತೀಯ ಇರುವ ಕಾರಣ ಅದಕ್ಕೂ ಕರ್ಫ್ಯೂ ಕಾರ್ಮೋಡ ಕವಿದಂತಾಗಿದೆ. ಅಕ್ಷಯ ತೃತೀಯ ದಿನದಂದೇ ಏನಿಲ್ಲವೆಂದರೂ ಒಂದರಿಂದ ಒಂದೂವರೆ ಕೋಟಿ ರೂ. ವಹಿವಾಟು ನಡೆಯುತ್ತಿತ್ತು. ಇನ್ನೂ ಅಟೋ ಮೊಬೈಲ್ ಕ್ಷೇತ್ರವಂತೂ ಸಂಪೂರ್ಣ ಸ್ಥಗಿತಗೊಂಡಿದೆ. ನಗರದಲ್ಲಿ 70 ಕ್ಕೂ ಅಧಿಕ ಅಂಗಡಿಗಳಿದ್ದರೆ, ಜಿಲ್ಲೆಯಲ್ಲಿ 500ಕ್ಕೂ ಅಧಿಕ ಇವೆ. ನಿತ್ಯ ಕೋಟ್ಯಂತರ ವಹಿವಾಟು ನಡೆಸುತ್ತಿದ್ದ ಅಟೋ ಮೊಬೈಲ್ ಅಂಗಡಿಗಳು, ಈಗ ಬಾಗಿಲು ಹಾಕಿಕೊಂಡು ಬಿಟ್ಟಿವೆ. ಇದರಿಂದಲೇ ಸರ್ಕಾರಕ್ಕೆ ಸಾಕಷ್ಟು ನಷ್ಟ ಎಂದರೆ ತಪ್ಪಾಗಲಿಕ್ಕಿಲ್ಲ. ಅಟೋ ಮೊಬೈಲ್ ವಲಯದ ಮೇಲೆ ಸರ್ಕಾರ ಶೇ.28 ತೆರಿಗೆ ವಿಧಿ ಸುತ್ತಿದೆ.
ಆದರೆ, ಈಗ ಬಹುತೇಕ ಅಂಗಡಿಗಳ ವಹಿವಾಟು ನಿಂತಿರುವ ಕಾರಣ ನಿತ್ಯ ಸಾವಿರಾರು ನಷ್ಟ ಎದುರಿಸುವಂತಾಗಿದೆ. ಸರ್ಕಾರಿ ಇಲಾಖೆಗಳ ವಾಹನಗಳು ಮಾತ್ರ ದುರಸ್ತಿ ಮಾಡಿ ಕೊಡಲಾಗುತ್ತಿದೆ. ಮುಂಗಾರು ಶುರುವಾಗುವ ಕಾರಣ ರೈತಾಪಿ ವರ್ಗ ವಾಹನಗಳ ದುರಸ್ತಿಗೆ ಈಗಾಗಲೇ ಬರುತ್ತಿತ್ತು. ಆದರೆ, ಈ ವರ್ಷ ಲಾಕ್‌ಡೌನ್ ಕಾರಣ ಯಾರು ಬರುತ್ತಿಲ್ಲ. ಆದರೆ, ಕೆಲ ಮೆಕ್ಯಾನಿಕ್‌ಗಳು ವಾಹನಗಳು ಇದ್ದಲ್ಲಿಗೆ ಹೋಗಿ ದುರಸ್ತಿ ಮಾಡಿ ಬರುತ್ತಿದ್ದಾರೆ.