ವರದಿ: ಶಿವಶಂಕರ ಕಂಠಿ
ಹುಬ್ಬಳ್ಳಿ: ಕೋವಿಡ್-19 ಮೊದಲನೇ ಅಲೆಯಿಂದ ತತ್ತರಿಸಿದ್ದ ಶಾಮಿಯಾನ ವೃತ್ತಿದಾರರು ಹಾಗೂ ಕಾರ್ಮಿಕರು ಎರಡನೇ ಅಲೆಯಿಂದ ಇನ್ನಷ್ಟು ಸಂಕಷ್ಟಕ್ಕೀಡಾಗಿದ್ದಾರೆ.
ಕಳೆದ ವರ್ಷ ಮದುವೆ, ಗೃಹ ಪ್ರವೇಶ, ಮುಂಜಿ, ಹಬ್ಬಗಳು ಹಾಗೂ ಸಮಾರಂಭಗಳ ಸೀಸನ್‌ದಲ್ಲಿಯೇ ಕೊರೊನಾ ವಕ್ಕರಿಸಿ ಲಾಕ್‌ಡೌನ್ ಆಗಿದ್ದರಿಂದ ಶಾಮಿಯಾನ ವಹಿವಾಟು ಮೇಲೆ ಕರಿನೆರಳು ಆವರಿಸಿತ್ತು. ಈಗ ಮತ್ತೆ ಈ ವರ್ಷದ ಆರಂಭದಲ್ಲೆ ಕೋವಿಡ್ -19ರ 2ನೇ ಅಲೆಯು ವ್ಯಾಪಿಸಿ ಲಾಕ್‌ಡೌನ್ ಹೇರಲ್ಪಟ್ಟಿದೆ. ಇದು ಶಾಮಿಯಾನವನ್ನೇ ನಂಬಿ ಜೀವನ ಸಾಗಿಸುತ್ತಿರುವವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಶಾಮಿಯಾನ ವೃತ್ತಿದಾರರು ತಮಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಹಾಗೂ ನಮ್ಮ ವೃತ್ತಿಯನ್ನು ಯಾವುದಾದರು ಇಲಾಖೆಯಡಿ ಗುರುತಿಸಬೇಕೆಂದು ಕೇಳುತ್ತಿದ್ದಾರೆ.
30 ಮಾಲೀಕರ ಸಾವು: ಅವಳಿನಗರ ಹೊರತುಪಡಿಸಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಅಂದಾಜು 100-150 ಶಾಮಿಯಾನ ಮಾಲೀಕರು ಇದ್ದಾರೆ. ಹುಬ್ಬಳ್ಳಿಯಲ್ಲಿ ಅಂದಾಜು 500 ಹಾಗೂ ಧಾರವಾಡದಲ್ಲಿ 200-300 ಮಾಲೀಕರಿದ್ದಾರೆ. ಕೊರೊನಾ ಲಾಕ್‌ಡೌನ್‌ದಿಂದಾಗಿ ಶಾಮಿಯಾನ ದಂಧೆ ಸಂಪೂರ್ಣ ಹಾಳಾಗಿ ಹೋಗಿದೆ. ಇವುಗಳ ಮಾಲೀಕರು ಜೀವನ ನಿರ್ವಹಣೆಗೆ ಇದ್ದ ಅಲ್ಪಸ್ವಲ್ಪ ಆಸ್ತಿಯನ್ನು ಮಾರಿ ಬರಿಗೈಯಲ್ಲಿ ಕುಳಿತಿದ್ದಾರೆ. ಹೀಗಾಗಿ ಸರಕಾರ ಇವರಿಗೆ 2ರಿಂದ 20 ಸಾವಿರ ರೂ. ಪರಿಹಾರ ಕೊಟ್ಟರೂ ಬದುಕುವ ಹಾಗಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಂಧೆಯಲ್ಲಿ ನಷ್ಟವುಂಟಾಗಿದ್ದರಿಂದ ಮನನೊಂದು ಜಿಲ್ಲೆಯಲ್ಲಿ ಸುಮಾರು 30 ಮಾಲೀಕರು ಮೃತಪಟ್ಟಿದ್ದಾರೆ ಎಂದು ಶಾಮಿಯಾನ ಸಂಘದವರು ಹೇಳುತ್ತಿದ್ದಾರೆ.
ಕೈಕೊಟ್ಟ ದುಡಿಮೆ: ಪೆಂಡಾಲ್‌ಗಳ ಮಾಲೀಕರಿಗೆ ಸೀಸನ್ ಇರುವುದೇ ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ. ಜುಲೈ, ಆಗಸ್ಟ್ ತಿಂಗಳಿನ ಗಣೇಶ ಹಬ್ಬದ ಸಮಯದಲ್ಲಿ ಆದಾಯ ಇರಲ್ಲ. ಈ ವೇಳೆ ಹೊಸ ಸಾಮಗ್ರಿ ಖರೀದಿಸಲು ಲಕ್ಷಾಂತರ ರೂ. ಸಾಲ ಮಾಡಿ ಹೂಡಿಕೆ ಮಾಡುತ್ತಾರೆ. ನಂತರ ದಸರಾ ಸಂದರ್ಭದಲ್ಲಿ ಅಷ್ಟಕಷ್ಟೇ ವ್ಯವಹಾರ. ದೀಪಾವಳಿಯಲ್ಲಿ ಉತ್ತಮ ವ್ಯವಹಾರ ಆಗುತ್ತದೆ. ಆದರೆ ಮಾರುಕಟ್ಟೆಗೆ ಚೀನಾ ಉತ್ಪನ್ನಗಳು ಬಂದಿದ್ದರಿಂದ ಲೈಟಿಂಗ್ ದಂಧೆ ಸಂಪೂರ್ಣ ನೆಲಕಚ್ಚಿದೆ. ಶಾಮಿಯಾನದವರು ಲೈಟಿಂಗ್ ಸರ ತಯಾರಿಸಲು ಕನಿಷ್ಟ 700ರೂ. ಖರ್ಚಾಗುತ್ತದೆ. ಆದರೆ ಮಾರುಕಟ್ಟೆ ಯಲ್ಲಿ ಚೀನಾದ ಉತ್ಪನ್ನ 30ರೂ.ದಲ್ಲಿ ಸಿಗುತ್ತದೆ. ಹೀಗಾಗಿ ಬಹಳಷ್ಟು ಜನರು ಮಾರುಕಟ್ಟೆಯಲ್ಲೇ ಲೈಟಿಂಗ್ ಸರ ಖರೀದಿಸುತ್ತಿದ್ದಾರೆ.
ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಮದುವೆ, ಮುಂಜಿ ಹಾಗೂ ಇನ್ನಿತರೆ ಶುಭ ಕಾರ್ಯಗಳು ಹೆಚ್ಚು ಹಾಗೂ ದೀಪಾವಳಿ ಹಬ್ಬ ಬೇರೆ. ಹೀಗಾಗಿ ಇವುಗಳ ಸಿದ್ಧತೆಗಾಗಿ ಶಾಮಿಯಾನ ಸಪ್ಲಾಯರ್ ಮಾಲೀಕರು ಮೊದಲೇ ಯೋಚಿಸಿ ಪೆಂಡಾಲ್‌ಗೆ ಅವಶ್ಯವಾದ ಸೌಂಡ್ ಸಿಸ್ಟಮ್, ಮೈಕ್ ಸಿಸ್ಟಮ್, ವಿದ್ಯುತ್ ಅಲಂಕಾರಿಕ ಮಂಟಪ, ಅಲಂಕಾರಿಕ ಸೆಟ್‌ಗಳು, ಹೂವು, ಟೇಬಲ್, ಕುರ್ಚಿ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಸಾಲ-ಸೋಲ ಮಾಡಿ ಆಗಸ್ಟ್‌ನಲ್ಲಿಯೇ ಖರೀದಿಸಿ ಇಡುತ್ತಾರೆ. ಅದಕ್ಕಾಗಿ ಗೋದಾಮು ಬಾಡಿಗೆ ಹಿಡಿದಿರುತ್ತಾರೆ. ಈ ಸಲ ಕೊರೊನಾದಿಂದಾಗಿ ಇವರಿಗೆ ಅಂಗಡಿ ಮತ್ತು ಗೋದಾಮು ಬಾಡಿಗೆ, ವಿದ್ಯುತ್ ಬಿಲ್ ತುಂಬಲು ಸಮಸ್ಯೆ ಆಗಿದೆ. ಸಂಗ್ರಹಿಸಿಟ್ಟಿದ್ದ ಸಾಮಗ್ರಿಗಳೆಲ್ಲ ಹಾಳಾಗಿ ಹೋಗಿವೆ. ಪೆಂಡಾಲ್‌ನ ಕಬ್ಬಿಣದ ಸಾಮಗ್ರಿಗಳು ತುಕ್ಕು ಹಿಡಿದಿವೆ. ಅಲಂಕಾರಿಕ ಬಟ್ಟೆಗಳು ಕಪ್ಪುಬಣ್ಣಕ್ಕೆ ತಿರುಗಿ ನಶಿಸುತ್ತಿವೆ.
ತವರಿಗೆ ತೆರಳಿದ ಕಾರ್ಮಿಕರು: ಲಾಕ್‌ಡೌನ್ ದಿಂದಾಗಿ ಶಾಮಿಯಾನದಲ್ಲಿ ಕೆಲಸ ಮಾಡುತ್ತಿದ್ದ ಡೇಕೊರೇಟರ್, ವೇದಿಕೆ ಸಜ್ಜುಗೊಳಿಸುವವರು, ಪೆಂಡಾಲ್ ಹಾಕುತ್ತಿದ್ದವರು, ಅಲಂಕಾರಿಕ ಮಂಟಪ ಸಿದ್ಧಪಡಿಸುತ್ತಿದ್ದವರು ಸೇರಿದಂತೆ ಎಲ್ಲ ಕಾರ್ಮಿಕರು ಊರಿಗಳಿಗೆ ತೆರಳಿದ್ದಾರೆ. ಶಾಮಿಯಾನ ವೃತ್ತಿಯಲ್ಲಿ ಬಹುತೇಕ ಕಾರ್ಮಿಕರು ಉತ್ತರ ಪ್ರದೇಶ, ಮಧ್ಯಪ್ರದೇಶ, ಕೊಲ್ಕತ್ತಾ, ಬಿಹಾರ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯದವರಾಗಿದ್ದಾರೆ.