ಸಿದ್ದಾಪುರ: ಕೆರೆಬೇಟೆ ದಿನದಂದು ನಡೆದ ಅಹಿತಕರ ಘಟನೆ ಸಂದರ್ಭದಲ್ಲಿ ಕಾನಗೋಡಿನ ಜನತೆ ಸಮಾಧಾನದಿಂದ, ಸಂಯಮದಿಂದ ವರ್ತಿಸಿದ್ದೀರಿ. ಬೇಟೆಗಾಗಿ ಪಡೆದ ಹಣವನ್ನು ಮರಳಿಸಿದ್ದೀರಿ. ಆರಕ್ಷಕ ಇಲಾಖೆಯವರೂ ಸಹ ಪರಿಸ್ಥಿತಿ ನಿಯಂತ್ರಿಸುವಲ್ಲಿ ಸಹನೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಇಷ್ಟು ದೊಡ್ಡ ಅಹಿತಕರ ಘಟನೆ ಸಂಭವಿಸಿದರೂ ಯಾವುದೇ ಜೀವಹಾನಿಯಾಗಿಲ್ಲ ಎಂಬುದು ಸಮಾಧಾನದ ವಿಚಾರ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಕಳೆದ ರವಿವಾರ ತಾಲೂಕಿನ ಕಾನಗೋಡಿನಲ್ಲಿ ಕೆರೆಬೇಟೆ ಸಂದರ್ಭದಲ್ಲಿ ಹಾನಿಗೊಳಗಾದ ಜನರನ್ನು ಭೇಟಿಯಾಗಿ ಅವರನ್ನು ಸಂತೈಸಿ ಮಾತನಾಡಿ ಕೆರೆ ಹತ್ತಿರದ ಮನೆಗಳಿಗೆ, ಅಂಗಡಿಗಳಿಗೆ ಹೊರಗಡೆ ಜನರು ಬಂದು ನುಗ್ಗಿದ್ದು, ಭಯದ ವಾತಾವರಣ ಸೃಷ್ಟಿಸಿದ್ದು ಗಮನಿಸಿದರೆ ಯಾವುದೋ ದುರುದ್ದೇಶ ಇರುವ ಸಂಶಯವೂ ಮೂಡುವಂತಿದೆ. ಪೊಲೀಸರ ಮೇಲೆ ಕೈಹಾಕಿದ್ದನ್ನು ಯಾರೂ ಸಹಿಸುವಂತಿಲ್ಲ. ಈ ಘಟನೆಗೆ ಸಂಬಂಧಿಸಿ ಪೊಲೀಸರು ದರೋಡೆ ಮಾಡಿದ ಕೆಲವು ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಿ ಕೆಲವರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸುತ್ತಿದ್ದಾರೆ. ಊರಿನ ಜನತೆ ಸಮಾಧಾನದಿಂದಿರಿ. ಯಾವುದೇ ಬೇಕು ಬೇಡಗಳಿಗೆ ನಮ್ಮ ಅಧಿಕಾರಿಗಳನ್ನು ಸಂಪರ್ಕಿಸಿ. ಊರಿನ ಅಭಿವೃದ್ಧಿ, ದೇವಾಲಯ ಅಭಿವೃದ್ಧಿಗೆ ಸಹಕರಿಸಿದ್ದೇನೆ. ಮುಂದೆಯೂ ನಿಮ್ಮ ಜೊತೆ ಇರುತ್ತೇನೆ ಎಂದು ಭರವಸೆ ನೀಡಿದರು.
ಕಾನಗೋಡ ಈಶ್ವರ ದೇವಾಲಯ ಸಮಿತಿಯ ಮಾರುತಿ ಫಕೀರ ನಾಯ್ಕ ಮಾತನಾಡಿ, ಈಶ್ವರ ದೇವಾಲಯ ಕಟ್ಟಡ ಅರ್ಧಕ್ಕೆ ನಿಂತಿರುವ ಹಿನ್ನೆಲೆಯಲ್ಲಿ ಗ್ರಾಪಂಗೆ ನಿಗದಿತ ಹಣ ತುಂಬಿ ಕೆರೆಬೇಟೆ ಆಯೋಜಿಸಲಾಗಿತ್ತು. 2 ರಿಂದ 3 ಸಾವಿರ ಜನ ಬರುವ ನಿರೀಕ್ಷೆ ಇತ್ತಾದರೂ ಐದಾರು ಸಾವಿರ ಜನರು ಸೇರಿದ್ದರು. 1 ಗಂಟೆಗೆ ಕೆರೆಬೇಟೆ ನಿಗದಿಯಾಗಿದ್ದರೂ 12:10ಕ್ಕೆ ಸ್ವಯಂ ಸೇವಕರನ್ನು ನೂಕಿ ಕೆಲವರು ಕೆರೆಗೆ ಇಳಿದರು. ಮೀನು ಸಿಗಲಿಲ್ಲವೆಂದು ಗಲಾಟೆ ಮಾಡಿದ್ದಲ್ಲದೇ ಹತ್ತಾರು ಮನೆಗಳ, 4 ಅಂಗಡಿಗಳು, ಒಂದು ಹಾಲು ಡೇರಿಯ ಲೂಟಿ ಮಾಡಿದರು. ಹಾಕಿದ್ದ ಪೆಂಡಾಲ್ ಸುಟ್ಟರು. ನೀರಿನ ಟ್ಯಾಂಕ್‌ಗೆ ಹಾನಿ ಮಾಡಿದರು.
ಒಮ್ಮೆಲೇ ಜನರು ಕೆರೆಯ ನೀರಿನೊಳಗೆ ಇಳಿದಿದ್ದರಿಂದ ಸೊಂಟ ಮಟ್ಟಕ್ಕಿದ್ದ ಕೆರೆ ನೀರು ಎತ್ತರವಾಗಿ ಕತ್ತಿನ ತನಕ ಬರುವಂತಾಯಿತು. ಕೆರೆಯ ಒಳಗಿದ್ದ ರಾಡಿ ಎದ್ದು ಮೀನುಗಳು ಸಿಗಲಿಲ್ಲ. ಈಗ ರಾಡಿ ನೀರಿನಿಂದಾಗಿ ಕ್ವಿಂಟಲ್‌ಗಟ್ಟಲೆ ಮೀನುಗಳು ಸತ್ತು ಕೊಳೆಯುತ್ತಿವೆ ಎಂದು ವಿವರಿಸಿದರು.
ಗ್ರಾಪಂ ಅಧ್ಯಕ್ಷೆ ದೇವರಾಜ ತೆವಳಕಾನ, ಗ್ರಾಪಂ ಸದಸ್ಯರು, ಪಿಡಿಒ ರಾಜಾರಾಮ ಭಟ್ಟ, ಈಶ್ವರ ನಾಯ್ಕ ಮನಮನೆ, ಮಾರುತಿ ನಾಯ್ಕ ಹೊಸೂರ, ಗುರುರಾಜ ಶಾನಭಾಗ, ತಿಮ್ಮಪ್ಪ ಕಂವಚೂರ, ಅಣ್ಣಪ್ಪ ನಾಯ್ಕ, ತೋಟಪ್ಪ, ಪ್ರಸನ್ನ ಹೆಗಡೆ ಇತರರಿದ್ದರು.
ಹಾನಿಗೊಳಗಾದ ಅಂಗಡಿ, ಮನೆಗಳಿಗೆ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಭೇಟಿ ನೀಡಿ ಸಮಾಧಾನ ಹೇಳಿದರು. ತಹಶೀಲ್ದಾರ ಸಂತೋಷ ಭಂಡಾರಿ, ಇಒ ಪ್ರಶಾಂತರಾವ್, ಸಿಪಿಐ ಕುಮಾರ ಕೆ. ಇದ್ದರು.