ಪುತ್ತೂರು : ಮೈಸೂರು-ಮಾಣಿ ರಸ್ತೆಯಲ್ಲಿ ಪುತ್ತೂರು ಪೇಟೆಗೆ ಸಂಪರ್ಕ ಕಲ್ಪಿಸುವ ನಗರದ ಬೈಪಾಸ್ ಬಳಿಯ ಪತ್ರಾವೋ ವೃತ್ತ ಅಭಿವೃದ್ಧಿಗೆ ಪುಡಾ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ನೇತೃತ್ವದಲ್ಲಿ ಗುರುವಾರ ಸ್ಥಳ ಪರಿಶೀಲನೆ ನಡೆಯಿತು.
ಅಪಘಾತ ವಲಯವಾಗಿ ಗುರುತಿಸಿಕೊಂಡಿರುವ ಈ ಸರ್ಕಲ್ ಅವೈಜ್ಞಾನಿಕವಾಗಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕ ದೂರುಗಳು ಬಂದಿತ್ತು. ಹೀಗಾಗಿ ಶಾಸಕಿ ಅವರ ಸೂಚನೆ ಮೇರೆಗೆ ಪುಡಾ ಅಭಿವೃದ್ಧಿಗೆ ಒಲವು ತೋರಿತ್ತು.
ಲೋಕೋಪಯೋಗಿ ಇಲಾಖೆ, ನಗರಸಭೆ, ಸಹಾಯಕ ಆಯುಕ್ತರು, ಟ್ರಾಫಿಕ್ ಪೊಲೀಸ್ ಇಲಾಖೆ ಜಂಟಿಯಾಗಿ ಸ್ಥಳ ಪರಿಶೀಲಿಸಿತ್ತು. ದರ್ಬೆ ಸರ್ಕಲ್ ಬಳಿಯು ಸಂಚಾರ ವ್ಯವಸ್ಥೆ ಗೊಂದಲ ಇರುವುದರಿಂದ ಅಲ್ಲಿಯು ಸ್ಥಳ ಪರಿಶೀಲನೆ ನಡೆಯಿತು.
ಬೈಪಾಸ್ ಸರ್ಕಲ್ ಅಭಿವೃದ್ಧಿಗೆ ಸಂಬಂಧಿಸಿ ಪಿಡಬ್ಲ್ಯುಡಿ ಇಲಾಖೆ ಡಿಸೈನ್ ಮಾಡಲಿದೆ. ವೈಜ್ಞಾನಿಕ ನೆಲೆಯಲ್ಲಿ ವೃತ್ತ ಹೇಗೆ ರಚಿಸಬಹುದು ಎಂಬ ಬಗ್ಗೆ ಆ ಇಲಾಖೆಯ ಅಧಿಕಾರಿಗಳು ಸಲಹೆ ನೀಡಲಿದ್ದಾರೆ. ಅದರಂತೆ ಪುಡಾ ತನ್ನ ಅನುದಾನದಲ್ಲಿ ಸರ್ಕಲ್ ನಿರ್ಮಿಸಲಿದೆ ಎಂದು ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ತಿಳಿಸಿದ್ದಾರೆ.
ಸ್ಥಳ ಪರಿಶೀಲನೆ ಸಂದರ್ಭ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಸಹಾಯಕ ಆಯುಕ್ತ ರಘುನಂದನ್ ಮೂರ್ತಿ, ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಪೌರಾಯುಕ್ತೆ ರೂಪಾ ಶೆಟ್ಟಿ, ಸಂಚಾರ ಠಾಣಾ ಎಸ್‌ಐ ವಿಟuಲ ಶೆಟ್ಟಿ, ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಶ್ರೀರಾಮ ಪಕ್ಕಳ ಉಪಸ್ಥಿತರಿದ್ದರು.