ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿರುವ ವಿಧಾನಸೌಧದ “ಬೃಹತ್ ಮೆಟ್ಟಿಲು’ ಮುಂಭಾಗದಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಪರಿಶೀಲಿಸಿದರು.
ಮಂಗಳವಾರ ಸಂಜೆ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯ ಕಾರ್ಯದರ್ಶಿ ಮುಖ್ಯ ವೇದಿಕೆ, ಅತಿಗಣ್ಯರು, ಗಣ್ಯರು, ವಿವಿಧ ಗಣ್ಯರು, ರಾಜಕೀಯ ಪಕ್ಷಗಳು ಮುಖಂಡರು, ಮುಖ್ಯಮಂತ್ರಿಯವರ ಕುಟುಂಬ ವರ್ಗ, ಚುನಾಯಿತ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಮೀಸಲಿಟ್ಟ ಆಸನ ವ್ಯವಸ್ಥೆಗಳ ಬಗ್ಗೆ ಖುದ್ದು ಆಯಾ ಜಾಗಕ್ಕೆ ಹೋಗಿ ಪರಿಶೀಲಿಸಿ ಮಾಹಿತಿ ಪಡೆದರು.
ಕಾರ್ಯಕ್ರಮ ಅಚ್ಚುಕಟ್ಟಾಗಿ ಆಗಬೇಕು. ಎಲ್ಲ ವ್ಯವಸ್ಥೆಗಳನ್ನು ಸಕಾಲಕ್ಕೆ ಮಾಡಿಕೊಳ್ಳಿ. ಕೊನೆ ಹಂತದಲ್ಲಿ ಗೊಂದಲಗಳಿಗೆ ಅವಕಾಶ ಕೊಡಬೇಡಿ ಎಂದು ಇದೇ ವೇಳೆ ಮುಖ್ಯ ಕಾರ್ಯದರ್ಶಿಯವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಲೋಕೋಪಯೋಗಿ, ವಾರ್ತಾ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇತರ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯ ಕಾರ್ಯದರ್ಶಿ ಯಾವುದೇ ರೀತಿಯ ಭದ್ರತಾಲೋಪಗಳು ಆಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು. ಸಮಾರಂಭದಲ್ಲಿ ಎನ್‌ಎಸ್‌ಜಿ ಭದ್ರತೆ ಇರುವ ಅತೀಗಣ್ಯರು ಸಹ ಪಾಲ್ಗೊಳ್ಳುತ್ತಿರುವುದರಿಂದ ಈ ಬಗ್ಗೆಯೂ ಗಮನಹರಿಸಿ ಎನ್‌ಎಸ್‌ಜಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಅವರಿಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನ ನೀಡಿ ಎಂದು ಹೇಳಿದರು.
ಈ ವೇಳೆ ಸಿಬ್ಬಂದಿ ಮತ್ತು ಆಡಳಿತ ಇಲಾಖೆಯ ಜಾವೇದ್ ಅಖ್ತರ್, ಲೋಕೋಪಯೋಗಿ ಇಲಾಖೆಯ ಎಂ. ಲಕ್ಷೀನಾರಾಯಣ, ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.