Advertisement

Mangaluru: ಮಹಾಕಾಳಿಪಡ್ಪು ರೈಲ್ವೇ ಕೆಳಸೇತುವೆ ಕಾಮಗಾರಿಗೆ ಗ್ರಹಣ!

02:43 PM Oct 16, 2024 | Team Udayavani |

ಮಹಾನಗರ: ನಗರದ ಮಹಾ ಕಾಳಿಪಡ್ಪುವಿನಲ್ಲಿ ನಿರ್ಮಾಣ ಹಂತದಲ್ಲಿ ರುವ ಬಹುನಿರೀಕ್ಷಿತ ಹಾಗೂ ಅತ್ಯಂತ ಸವಾಲಿನ ಕಾಮಗಾರಿಯಾಗಿರುವ ರೈಲ್ವೇ ಕೆಳ ಸೇತುವೆ (ಆರ್‌ಯುಬಿ) ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಸಾಗದೆ ಬಹುತೇಕ ನಿಧಾನಗತಿಯಲ್ಲಿ ಸಾಗುತ್ತಿದೆ. ಜಪ್ಪಿನಮೊಗರಿನಿಂದ ಮಹಾಕಾಳಿಪಡ್ಪುವಾಗಿ ಮಾರ್ಗನ್ಸ್‌ಗೇಟ್‌ ವರೆಗಿನ ಚತುಷ್ಪಥ ರಸ್ತೆ ಅಭಿವೃದ್ಧಿಯ ಭಾಗವಾಗಿ ಈ ಕಾಮಗಾರಿ ನಡೆಯುತ್ತಿದೆ. 2022ರ ಡಿಸೆಂಬರ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಸೇತುವೆಯ ಎರಡೂ ಭಾಗದಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ಮಂಗಳೂರು ಸ್ಮಾರ್ಟ್‌ ಸಿಟಿಯಿಂದ ಈಗಾಗಲೇ ಬಹುತೇಕ ಪೂರ್ಣಗೊಂಡಿದೆ. ಆರ್‌ಯುಬಿ ನಿರ್ಮಾಣ ಕೆಲಸ ದಕ್ಷಿಣ ರೈಲ್ವೇಯ ಪಾಲಕ್ಕಾಡ್‌ ವಿಭಾಗದಿಂದ ಕೈಗೊಳ್ಳಲಾಗುತ್ತಿದೆ. ಹಳಿಯಲ್ಲಿ ರೈಲು ಸಾಗುತ್ತಿದ್ದರೆ ಕೆಳಭಾಗದಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತಿದೆ. ರೈಲು ಸಂಚಾರಕ್ಕೆ ಅಡ್ಡಿಯಾಗದಂತೆ ಕೆಲಸ ನಿರ್ವಹಿಸುವುದು ಕೂಡ ಸವಾಲಿನ ಕೆಲಸವಾಗಿದೆ.

Advertisement

ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಮಂಗಳೂರು ಸೆಂಟ್ರಲ್‌ – ಶೂರ್ನೂರು ಮತ್ತು ಮಂಗಳೂರು ಜಂಕ್ಷನ್‌ – ಶೂರ್ನೂರು ಈ ಎರಡು ರೈಲ್ವೇ ಲೈನ್‌ಗಳು ಇಲ್ಲಿ ಹಾದು ಹೋಗುತ್ತಿದೆ. ಜಂಕ್ಷನ್‌ ಮಾರ್ಗಕ್ಕೆ ಸಂಬಂಧಿಸಿದ ಕಾಮಗಾರಿ ಪ್ರಗತಿಯಲ್ಲಿದ್ದು, ಜಪ್ಪಿನಮೊಗರು ಭಾಗದಲ್ಲಿ ಎರಡು ಸಮಾನಾಂತರ ಕಾಂಕ್ರೀಟ್‌ ಬಾಕ್ಸ್‌ಗ ಳನ್ನು ಅಳವಡಿಸಿ ಕಾಮಗಾರಿ ನಡೆಸಲಾಗುತ್ತಿದೆ. ಮಳೆಯಿಂದಾಗಿ ಸ್ಥಳದಲ್ಲಿ ನೀರು ಸಂಗ್ರಹಗೊಂಡಿದ್ದು, ಕೆಸರು ಕೂಡ ಇರುವುದರಿಂದ ಕಾಮಗಾರಿಗೆ ಅಡ್ಡಿಯಾಗಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ಕಾಮಗಾರಿಗೆ ಮತ್ತೆ ವೇಗ ಸಿಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಸಂಚಾರ ಸಂಕಷ್ಟ
ಅಂಡರ್‌ಪಾಸ್‌ ಕಾಮಗಾರಿ ಪೂರ್ಣ ಗೊಂಡಲ್ಲಿ ತೊಕ್ಕೊಟ್ಟು ಭಾಗದಿಂದ ನಗರ ಪ್ರವೇಶಿಸುವ ವಾಹನಗಳು ರಾ.ಹೆ. 66ರಲ್ಲಿ ಜಪ್ಪಿನಮೊಗರಿನಿಂದ ಎಡಕ್ಕೆ ತಿರುಗಿ ಈ ರಸ್ತೆಯ ಮೂಲಕ ಮಹಾ ಕಾಳಿಪಡ್ಪು, ಮಾರ್ಗನ್ಸ್‌ಗೇಟ್‌ ಮೂಲಕಕ್ಕೆ ಬರಬಹುದಾಗಿದೆ. ಪ್ರಸ್ತುತ ದ್ವಿಚಕ್ರ ವಾಹನಗಳಿಗೆ ಮಾತ್ರ ಈ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಕಾಮಗಾರಿ ನಡೆಯುತ್ತಿರುವ ಸ್ಥಳದ ಪಕ್ಕದಲ್ಲಿರುವ ಒಳಗಿನ ಓಣಿಗಳಲ್ಲಿ ಸಂಚರಿಸಿ ಮಹಾಕಾಳಿಪಡ್ಪು ರೈಲ್ವೇಗೇಟ್‌ ಇರುವ ಸ್ಥಳಕ್ಕೆ ತಲುಪಬಹುದಾಗಿದೆ. ಇಕ್ಕಟ್ಟಿನ ಓಣಿ ರಸ್ತೆಯಾಗಿರುವುದರಿಂದ ಬೆಳಗ್ಗೆ ಸಂಜೆ ಹೊತ್ತು ಅತೀ ಹೆಚ್ಚು ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳು ಸಾಗುವುದರಿಂದ ದಟ್ಟನೆ ಉಂಟಾಗುತ್ತಿದೆ. ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ಬಾಕ್ಸ್‌ ಪುಶ್ಶಿಂಗ್‌ ತಂತ್ರಜ್ಞಾನ
ಜಂಕ್ಷನ್‌ ಲೈನ್‌ನ ಅಡಿಭಾಗದಲ್ಲಿ ಬಾಕ್ಸ್‌ ಪುಶ್ಶಿಂಗ್‌ ತಂತ್ರಜ್ಞಾನ ಅಳವಡಿ ಕೊಳ್ಳಲಾಗುತ್ತಿದ್ದು, ಈಗಾಗಲೇ ಕಾಂಕ್ರೀಟ್‌ನ ಎರಡು ಬೃಹತ್‌ ಬಾಕ್ಸ್‌ಗಳನ್ನು ಸಿದ್ಧಪಡಿಸಿ ಇಡಲಾಗಿದೆ. ಇದನ್ನು ಹೈಡ್ರಾಲಿಕ್‌ ತಂತ್ರಜ್ಞಾನದ ಮೂಲಕ ರೈಲ್ವೇ ಲೈನ್‌ನ ಕೆಳಭಾಗದಲ್ಲಿ ಅಳವಡಿಸಲಾಗುತ್ತದೆ. ರೈಲು ಗಳು ಸಂಚರಿಸುವಾಗ ಆದರೆ ವೇಗದ ಮಿತಿಯನ್ನು ಕಡಿಮೆ ಗೊಳಿಸಲಾಗುತ್ತದೆ.

20 ಕೋ.ರೂ. ವೆಚ್ಚದಲ್ಲಿ ಕೆಳಸೇತುವೆ
ರೈಲ್ವೇ ಕೆಳ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಮಾರ್ಟ್‌ಸಿಟಿ ವತಿಯಿಂದ 30.7 ಕೋಟಿ ರೂ. ಮೊತ್ತವನ್ನು ರೈಲ್ವೇ ಇಲಾಖೆಗೆ ಪಾವತಿ ಮಾಡಲಾಗಿದೆ. ರೈಲ್ವೆ ಇಲಾಖೆಯಿಂದಲೇ ಟೆಂಡರ್‌ ಕರೆದು ಕಾಮಗಾರಿ ನಡೆಸಲಾಗುತ್ತಿದೆ. ಮುಂಬೈ ಮೂಲದ ಎಂ/ಎಸ್‌ ವಿಜಯ್‌ ಇನ್‌ಫ್ರಾ ಪ್ರಾಜೆಕ್ಟ್ಸ್ ಸಂಸ್ಥೆ ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿದ್ದು. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next