Advertisement
ಖ್ಯಾತ ನಟ ಸಾಹಸಸಿಂಹ ಡಾ.ವಿಷ್ಣು ವರ್ಧನ್, ಹಿರಿಯ ನಟ ರಮೇಶ್ ಭಟ್, ಬೆಂಗಳೂರಿನ ಪ್ರಸಿದ್ಧ ವಕೀಲರು, ವಿಜ್ಞಾನಿಗಳು, ಶಿಕ್ಷಣ ತಜ್ಞರು ಓದಿರುವ ಚಾಮರಾಜಪೇಟೆ 4ನೇ ಮುಖ್ಯರಸ್ತೆಯ ಮಾಡೆಲ್ ಸ್ಕೂಲ್ ಎಜುಕೇಷನ್ ಸೊಸೈಟಿಯ ಪ್ರೌಢಶಾಲೆಯನ್ನು ಎರಡು ತಿಂಗಳ ಹಿಂದೆಯೇ ಇಲಾಖೆ ಮುಚ್ಚಿದೆ. ಈಗ ಪ್ರಾಥಮಿಕ ಶಾಲೆಯನ್ನು ಮುಚ್ಚಲು ಬೇಕಾದ ವ್ಯವಸ್ಥೆ ಮಾಡಿಕೊಂಡಿದೆ.
Related Articles
Advertisement
2016ರಲ್ಲಿ ಶಾಲೆಯ ಶಿಕ್ಷಕರೊಬ್ಬರು ನಿವೃತ್ತಿ ಹೊಂದಿದ್ದರು. ನಂತರವೂ ನೇಮಕಾತಿ ನಡೆದಿಲ್ಲ. ಇಲಾಖೆಯಿಂದ ಶಿಕ್ಷಕರ ನೇಮಕಕ್ಕೆ ಆದೇಶ ಆಗಿದ್ದರೂ, ಬಿಇಒ ಮತ್ತು ಡಿಡಿಪಿಐಗಳು ಇದಕ್ಕೆ ಅವಕಾಶ ನೀಡಿಲ್ಲ. ಮುಖ್ಯಶಿಕ್ಷಕರ ಜವಾಬ್ದಾರಿಯನ್ನು ಬಿಇಒ ನಿಭಾಯಿಸುತ್ತಿದ್ದರು ಎಂದು ಶಾಲೆಯ ಮೂಲಗಳು ಮಾಹಿತಿ ನೀಡಿದರು.
1870ರಲ್ಲಿ ನರ್ಸರಿಯೊಂದಿಗೆ ಆರಂಭಗೊಂಡ ಮಾಡೆಲ್ ಸ್ಕೂಲ್ ಎಜುಕೇಷನ್ ಸೊಸೈಟಿ, 1957ರಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆ ತೆರೆದಿತ್ತು. ಹಲವು ಗಣ್ಯರು ಓದಿದ ಮತ್ತು ಭೇಟಿ ನೀಡಿದ ಶಾಲೆ ಇದಾಗಿದೆ. ಬಾಸ್ಕೊ ಮನೆಯ ನೂರಾರು ಅನಾಥ ಮಕ್ಕಳಿಗೆ ಶಿಕ್ಷಣ ನೀಡಿದ ಸಂಸ್ಥೆಯೂ ಹೌದು. ಒಂದು ಕಾಲದಲ್ಲಿ ಈ ಶಾಲೆಯಲ್ಲಿ ಸೀಟು ಪಡೆಯಲು ತೀವ್ರ ಪೈಪೋಟಿ ಇತ್ತು. 8 ಸುಸಜ್ಜಿತ ಕೊಠಡಿ ಇಂದಿಗೂ ಇದೆ ಎಂದು ಶಿಕ್ಷಕರೊಬ್ಬರು ಮಾಹಿತಿ ನೀಡಿದರು.
ಶಾಲೆ ಮುಚ್ಚುವಂತೆ ಇಲಾಖೆಯಿಂದ ಪತ್ರ ಬಂದಿದೆ. ಮಕ್ಕಳಲ್ಲಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಬಂದು ಸಮೀಕ್ಷೆ ಮಾಡಿ ವರದಿ ನೀಡಿದ್ದಾರೆ. ಬೆಂಗಳೂರಿನ ಪ್ರಪ್ರಥಮ ಕನ್ನಡ ಮಾಧ್ಯಮ ಶಾಲೆ ಇದು. ಅದನ್ನು ಉಳಿಸಿಕೊಳ್ಳಲು ಇಲಾಖೆಯೇ ಪ್ರಯತ್ನ ಮಾಡುತ್ತಿಲ್ಲ. -ಯದುಕುಮಾರ್, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ