Advertisement

ಟ್ರಕ್‌ ಟರ್ಮಿನಲ್ ಸ್ಥಾಪನೆಗೆ ಸ್ಥಳ ಗುರುತಿಸಿ

11:50 AM Aug 03, 2019 | Suhan S |

ಹಾವೇರಿ: ಸಾರ್ವಜನಿಕ ಸಹಭಾಗಿತ್ವದಲ್ಲಿ ಟ್ರಕ್‌ ಟರ್ಮಿನಲ್ ಸ್ಥಾಪನೆಗೆ ರಾಣಿಬೆನ್ನೂರ ಅಥವಾ ಹಾವೇರಿ ಬಳಿ ಜಮೀನನ್ನು ಗುರುತಿಸಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ನಗರ ಯೋಜನಾ ಪ್ರಾಧಿಕಾರಕ್ಕೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ನಡೆಸಿದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ರೈತರು ಹೆದ್ದಾರಿಗೆ ಹೊಂದಿಕೊಂಡಂತೆ ಕೃಷಿ ಜಮೀನಿದ್ದು, ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಟ್ರಕ್‌ ಟರ್ಮಿನಲ್ ಸ್ಥಾಪಿಸಲು ಮುಂದಾದರೆ ಅವರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ನಗರಾಭಿವೃದ್ಧಿ ಪ್ರಾಧಿಕಾರ, ನಗರ ಯೋಜನಾ ನಿರ್ದೇಶಕರು, ಸ್ಥಳೀಯ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಹೆದ್ದಾರಿ ಸೇರಿದಂತೆ ಮುಖ್ಯ ರಸ್ತೆಗಳ ಸಂಚಾರಿ ನಿಯಮಗಳ ಮೇಲೆ ನಿಗಾವಹಿಸಲು ಪೊಲೀಸ್‌ ಗಸ್ತು ವಾಹನಗಳ ಸಂಖ್ಯೆ ಹೆಚ್ಚು ಮಾಡಬೇಕು. ಈ ನಿಟ್ಟಿನಲ್ಲಿ ಹಾಲಿ ನಾಲ್ಕು ವಾಹನಗಳಿದ್ದು ಕನಿಷ್ಠ ಮೂರು ವಾಹನಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಪೊಲೀಸ್‌ ಇಲಾಖೆಗೆ ಸೂಚಿಸಿದರು.

ಅಪಘಾತ ನಂತರ ಗಾಯಾಳುಗಳನ್ನು ತುರ್ತಾಗಿ ಸೂಕ್ತ ಅವಧಿಯೊಳಗೆ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಬಲಪಡಿಸಬೇಕು. ಅಪಘಾತ ಸಂಭವಿಸಿದ ತಕ್ಷಣ ಆಸ್ಪತ್ರೆಗೆ ದಾಖಲಿಸುವ ವ್ಯಕ್ತಿಗಳ ಮೇಲೆ ಯಾವುದೇ ಕಾನೂನಾತ್ಮಕ ವಿಚಾರಣೆ ಹಾಗೂ ನಿರ್ಬಂಧಗಳನ್ನು ತೆಗೆದು ಹಾಕಿರುವುದರಿಂದ ಸಾರ್ವಜನಿಕರಿಗೆ ಈ ಕುರಿತಂತೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಜಂಟಿ ಸಮೀಕ್ಷೆ: ಅಗತ್ಯ ರಸ್ತೆ ಮಾರ್ಗಸೂಚಿಗಳು ಇಲ್ಲದೇ ರಸ್ತೆ ಗುಂಡಿಗಳು, ಅವೈಜ್ಞಾನಿಕ ರಸ್ತೆ ತಿರುವುಗಳ ಕಾರಣ ಪದೇ ಪದೇ ಅಪಘಾತಗಳು ಸಂಭವಿಸುವ ಸ್ಥಳಗಳನ್ನು ಗುರುತಿಸಬೇಕು. ಇಂಥ ಅಪಾಯಕಾರಿ ಬ್ಲಾಕ್‌ ಸ್ಪಾಟ್‌ಗಳ ನ್ಯೂನತೆಯನ್ನು ಸರಿಪಡಿಸಲು ಬೇಕಾದ ಅನುದಾನ ಕುರಿತಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು , ಪೊಲೀಸ್‌ ಇಲಾಖಾ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ವಾರದೊಳಗಾಗಿ ವರದಿ ಸಲ್ಲಿಸಬೇಕು. ಈ ಕುರಿತಂತೆ ವಿಸ್ತೃತ ಕ್ರಿಯಾಯೋಜನೆ ಸಿದ್ಧಪಡಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಅವೈಜ್ಞಾನಿಕ ಸ್ಪೀಡ್‌ ಬ್ರೇಕರ್‌ಗಳನ್ನು ತೆರವುಗೊಳಿಸಿ ಕೂಡು ರಸ್ತೆಗಳ ಬಳಿ ವೇಗ ನಿಯಂತ್ರಕಗಳನ್ನು ಅಳವಡಿಸಿ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ, ಶಾಲಾ ವಲಯ, ದೇವಾಲಯ, ಮಾರುಕಟ್ಟೆಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಿ. ಐ.ಆರ್‌.ಸಿ.(ಭಾರತೀಯ ರಸ್ತೆ ಕಾಂಗ್ರೆಸ್‌) ಮಾರ್ಗ ಸೂಚಿಯಂತೆ ರಸ್ತೆ ಗುರುತುಗಳನ್ನು ಹಾಕಿ ಹಳೆ ರಸ್ತೆಗಳಿಗೂ ಮಾರ್ಕಿಂಗ್‌ ವ್ಯವಸ್ಥೆ ಅಳವಡಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಹದಿನೈದು ದಿನದೊಳಗಾಗಿ ವರದಿ ನೀಡಬೇಕು ಎಂದರು.

ರಸ್ತೆ ಗುಂಡಿಗಳನ್ನು ಮುಚ್ಚಿ. ಚಾಲಕರ ಗಮನ ಬೇರೆಡೆ ಸೆಳೆಯುವ ಹೋರ್ಡಿಂಗ್‌ ಬ್ಯಾನರ್‌ ತೆರವುಗೊಳಿಸಬೇಕು. ಕುಡಿದು ವಾಹನ ಚಲಾಯಿಸುವುದು, ಅತೀಯಾದ ವೇಗ, ರೆಡ್‌ ಲೈಟ್ ಜಿಗಿತ, ಅಪಾಯಕಾರಿ ಚಾಲನೆ, ಸೀಟ್ ಬೆಲ್r ಹಾಕದೇ ವಾಹನ ಚಲಾಯಿಸುವುದು, ವಿಮೆ ಇಲ್ಲದೆ ವಾಹನ ಚಲಾಯಿಸುವುದು ಕುರಿತು ಪೊಲೀಸ್‌ ಇಲಾಖೆ, ಸಾರಿಗೆ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಗಂಭೀರವಾಗಿ ಪರಿಗಣಿಸಿ ಕ್ರಮ ವಹಿಸುವಂತೆ ಅವರು ಸೂಚಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ದೀಪಕ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪೀರಜಾದೆ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಸಾರಿಗೆ ಅಧಿಕಾರಿ ಮುಲ್ಲಾ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರಕಾಶ, ರಾಣಿಬೆನ್ನೂರಿನ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಿಯಾ ದೇಸಾಯಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next