ಜಮ್ಮು-ಕಾಶ್ಮೀರ: ಶ್ರೀನಗರದಲ್ಲಿನ ಪ್ರಮುಖ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಶೀಘ್ರ ರಕ್ಷಣಾ ಕಾರ್ಯಾಚರಣೆ ನಡೆಸಿದ ಪರಿಣಾಮ ನೂರಾರು ರೋಗಿಗಳ ಜೀವ ಉಳಿಸಿದ ಘಟನೆ ಶನಿವಾರ (ಮಾರ್ಚ್ 05) ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅಲ್ ಖೈದಾ ಸಂಪರ್ಕ: ಅಸ್ಸಾಂನಲ್ಲಿ ಬಾಂಗ್ಲಾ ಪ್ರಜೆ ಸೇರಿ ಐವರ ಬಂಧನ
ಕಾಶ್ಮೀರದ ಪ್ರಮುಖ ಆಸ್ಪತ್ರೆಯಾದ ಬೋನ್ ಆ್ಯಂಡ್ ಜಾಯಿಂಟ್ ಆಸ್ಪತ್ರೆಯ ನಾಲ್ಕು ಅಂತಸ್ತಿನ ಕಟ್ಟಡದ ಮೇಲಿನ ಎರಡು ಅಂತಸ್ತುಗಳಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆಯ ವಾರ್ಡ್ ಗಳಲ್ಲಿ 110 ರೋಗಿಗಳಿದ್ದರು. ಇವರಿಗೆಲ್ಲಾ ಸುಮಾರು ಒಂದು ಗಂಟೆಯ ಹಿಂದೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು ಎಂದು ವರದಿ ವಿವರಿಸಿದೆ.
ಇದರ ಹೊರತಾಗಿಯೂ 22 ರೋಗಿಗಳನ್ನು ತುರ್ತುನಿಗಾ ಘಟಕದಲ್ಲಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ವರದಿ ಹೇಳಿದೆ. ಬೆಂಕಿ ಎಲ್ಲೆಡೆ ಹೊತ್ತಿಕೊಳ್ಳುತ್ತಿದ್ದಂತೆಯೇ ಆಸ್ಪತ್ರೆಯ ಸುತ್ತಮುತ್ತಲಿನ ಯುವಕರು ಕೂಡಲೇ ಸಮಯಪ್ರಜ್ಞೆಯಿಂದ ರಕ್ಷಣೆಯಲ್ಲಿ ತೊಡಗಿ, ರೋಗಿಗಳನ್ನು ಆಸ್ಪತ್ರೆಯ ಸಿಬಂದಿಗಳ ನೆರವಿನಿಂದ ಸುರಕ್ಷಿತವಾಗಿ ಸ್ಥಳಾಂತರಿಸಿರುವುದಾಗಿ ವರದಿ ತಿಳಿಸಿದೆ.
ನಂತರ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಎಸ್ ಡಿಆರ್ ಎಫ್ ತಂಡ ಆಗಮಿಸಿದ್ದರು. ಸ್ಥಳೀಯರು ಹಾಗೂ ಇವರೆಲ್ಲರ ಜಂಟಿ ಶ್ರಮದಿಂದ ನೂರಾರು ರೋಗಿಗಳ ಜೀವ ರಕ್ಷಿಸಿದಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.