ಮಸ್ಕಿ: ತಾಲೂಕಿನ ಭಟ್ರಹಳ್ಳಿ ಹತ್ತಿರ ಇರುವ ಹಳ್ಳಕ್ಕೆ ಸೇತುವೆ ನಿರ್ಮಿಸುವ ಮೂಲಕ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಾರಲದಿನ್ನಿ ತಾಂಡಾ ಹಾಗೂ ಮಟ್ಟೂರು ಮಾರ್ಗ ಮದ್ಯ ಭಟ್ರಹಳ್ಳಿ ಹತ್ತಿರ ಹಳ್ಳ ಹರಿಯುತ್ತಿದ್ದು, 50ಕ್ಕೂ ಹೆಚ್ಚು ಕುಟುಂಬಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದರಿಂದ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಹಳ್ಳದಲ್ಲಿ ನೀರು ಕಡಿಮೆಯಾದ ಬಳಿಕ ತಾಂಡ ಹಾಗೂ ಗೊಲ್ಲರಹಟ್ಟಿ, ಜನರು ಹರಸಾಹಸ ಪಟ್ಟು ಹಳ್ಳ ದಾಟುವ ಪರಿಸ್ಥಿತಿ ಇದ್ದು, ಇದೀಗ ಮಳೆಗಾಲ ಆರಂಭವಾಗಿದ್ದು, 20ಕಿ.ಮೀ ಸುತ್ತಿ ಜಕ್ಕೇರಮಡು ಸೇತುವೆ ಮೂಲಕ ತಾಂಡಾ ತಲುಪುವಂತಾಗಿದೆ. ಕೆಲ ವರ್ಷಗಳ ಹಿಂದೆ ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ದಾಟಿ ಮಹಿಳೆಯೊಬ್ಬಳು ಕೊಚ್ಚಿಕೊಂಡ ಹೋಗಿರುವ ಘಟನೆ ನಡೆದಿವೆ.
ಇಂತಹ ಅವಘಡಗಳು ಮರುಕಳಿಸುವ ಮುನ್ನ ಶಾಸಕ ಆರ್.ಬಸನಗೌಡ ತುರವಿಹಾಳ ಅವರು ಸರ್ಕಾರದ ಮೇಲೆ ಒತ್ತಡ ಹೇರಿ ಹಳ್ಳಕ್ಕೆ ಸೇತುವೆ ನಿರ್ಮಿಸಿ ರೈತರು ಸುಗಮವಾಗಿ ಸಂಚರಿಸಲು ಅನುಕೂಲ ಕಲ್ಪಿಸಬೇಕೆಂಬುದು ಜನರ ಒತ್ತಾಸೆಯಾಗಿದೆ
ಮಳೆಗಾಲ ಅರಂಭವಾದರೆ ಸಾಕು, ಹಳ್ಳದಲ್ಲಿ ನೀರು ಹರಿದು ಬಂದು ಸಂಚಾರ ಸ್ಥಗಿತವಾಗುತ್ತದೆ. ಹಳ್ಳದಲ್ಲಿ ನೀರು ಕಡಿಮೆ ಆಗುವ ತನಕ ದೂರದ ಜಕ್ಕೇರಮಡು ಸೇತುವೆ ಮೂಲಕ ತೆರಳಬೇಕು. ಇದರಿಂದ ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ವಿಪರೀತ ಕಿರಿಕಿರಿ ಉಂಟಾಗಿದ್ದು, ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳ ಪರಿಶೀಲನೆ ಮಾಡಿ ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.