Advertisement

ವೈಜ್ಞಾನಿಕ  ಹಂಪ್ಸ್‌ ನಿರ್ಮಿಸುವಂತೆ ಸ್ಥಳೀಯರ ಮನವಿ 

07:08 PM Sep 05, 2021 | Team Udayavani |

ಅಜೆಕಾರು: ಕಾರ್ಕಳ ಹೆಬ್ರಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಅಜೆಕಾರಿನಲ್ಲಿ ಅವೈಜ್ಞಾನಿಕವಾಗಿ  ಹಂಪ್ಸ್‌ಗಳನ್ನು ಹಾಕಿರುವುದರಿಂದ ಸ್ಥಳೀಯರಿಗೆ ಸಂಕಷ್ಟ ಎದುರಾಗಿದೆ.

Advertisement

ಚಿಕ್ಕ ಚಿಕ್ಕ ಹಂಪ್ಸ್‌ ಹಾಕಿರುವುದರಿಂದ ಬೃಹತ್‌ ವಾಹನಗಳು ಇದರ ಮೇಲೆ ವೇಗ ಕಡಿಮೆ ಮಾಡದೆ ಚಲಾಯಿಸುತ್ತಿದ್ದು ಸ್ಥಳೀಯ ಪ್ರದೇಶ ನಿರಂತರ ಕಂಪನ ಗೊಳ್ಳುತ್ತಿದೆ.

ಪ್ರತೀ ದಿನ ನೂರಾರು ವಾಹನಗಳು ಅಜೆಕಾರಿನ ಮುಖ್ಯ ಜಂಕ್ಷನ್‌ ಮೂಲಕ ಸಂಚಾರ ಮಾಡುವುದರಿಂದ ಸ್ಪೀಡ್‌ ಬ್ರೇಕರ್‌ ಅಗತ್ಯ. ಆದರೆ ಈಗ ಇರುವ ಸ್ಪೀಡ್‌ ಬ್ರೇಕರ್‌ (ಹಂಪ್ಸ್‌)ನಿಂದ ಅನುಕೂಲಕ್ಕಿಂತ ಸಮಸ್ಯೆಯೇ ಹೆಚ್ಚಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಾರ್ಕಳ, ಹೆಬ್ರಿಯ ಎರಡೂ ಬದಿಯಲ್ಲಿಯೂ ರಸ್ತೆಯಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ಹಂಪ್ಸ್‌ ಗಳಿಂದ ಅಪಘಾತಗಳು ಪ್ರತಿನಿತ್ಯ ನಡೆಯುವಂತಾಗಿದೆ.

ರಾತ್ರಿ ವೇಳೆಯಲ್ಲಿ ಬೃಹತ್‌ ಟ್ರಕ್‌ಗಳು, ಕಂಟೇನರ್‌ಗಳು, ಟಿಪ್ಪರ್‌ಗಳು ವೇಗ ಕಡಿಮೆ ಮಾಡದೆ ಈ ಹಂಪ್ಸ್‌ಗಳ ಮೇಲೆ ಸಂಚಾರ ಮಾಡುವುದರಿಂದ ಪೇಟೆಯ ಸುತ್ತಲಿನ ಪರಿಸರದಲ್ಲಿ ಕಂಪನ ಸೃಷ್ಟಿಯಾಗಿ ಹಳೆಯ ಕಟ್ಟಡಗಳು ಬಿರುಕು ಬಿಟ್ಟಿವೆ. ಅಲ್ಲದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ,  ಹಿರಿಯ ನಾಗರಿಕರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಪೇಟೆ ನಿವಾಸಿಗಳಿಗೆ ನಿದ್ರೆ ಮಾಡದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

Advertisement

ಕೆಲವೊಂದು ಕಂಟೈನರ್‌ಗಳು ರಾತ್ರಿ ವೇಳೆ ಸಂಚಾರ ಮಾಡುವಾಗ ಮನೆಯೊಳಗಿನ ಪಾತ್ರೆಗಳು ಕಂಪಿಸಿ ನೆಲಕ್ಕುರುಳುತ್ತವೆ ಎಂದು ಸ್ಥಳೀಯರು ಹೇಳಿದ್ದಾರೆ. ಈಗಾಗಲೇ ಕಾರ್ಕಳ ಲೋಕೋಪಯೋಗಿ ಇಲಾಖೆ ಮನವಿ ಮಾಡಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಬೃಹತ್‌ ಗಾತ್ರದ ಹಂಪ್ಸ್‌ ನಿರ್ಮಾಣ ಮಾಡಿದಾಗ ಮಾತ್ರ ವಾಹನಗಳು ವೇಗ ಕಡಿಮೆ ಮಾಡಿ ಸಂಚಾರ ನಡೆಸುತ್ತವೆ. ಆದರಿಂದ ಈ ಎರಡೂ ಭಾಗದಲ್ಲಿ ಬೃಹತ್‌ ಗಾತ್ರದ ಹಂಪ್ಸ್‌ ನಿರ್ಮಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

ಅವೈಜ್ಞಾನಿಕ ಹಂಪ್ಸ್‌ ನಿರ್ಮಾಣದಿಂದ ಸ್ಥಳೀಯರಿಗೆ ಸಂಕಷ್ಟ ಒಂದೆಡೆಯಾದರೆ, ವಾಹನ ಅಪಘಾತಗಳು ನಿರಂತರ ನಡೆದು ವಾಹನ ಚಾಲಕರಿಗೂ ಸಮಸ್ಯೆ ಉಂಟಾಗುತ್ತಿದೆ. ಈ ಹಂಪ್ಸ್‌ ತೆರವುಗೊಳಿಸಿ ವೈಜ್ಞಾನಿಕ  ಹಂಪ್ಸ್‌ ನಿರ್ಮಾಣ ಕಾರ್ಯ ತ್ವರಿತವಾಗಿ ನಡೆಯಬೇಕಿದೆ ಎಂದು ಸ್ಥಳೀಯರಾದ ಅರವಿಂದ ನಾಯಕ್‌ ಅಜೆಕಾರು ತಿಳಿಸಿದ್ದಾರೆ.

ಮರ್ಣೆ ಗ್ರಾ.ಪಂ. ವ್ಯಾಪ್ತಿಯ ಅಜೆಕಾರು ಪೇಟೆಯಲ್ಲಿರುವ ಹಂಪ್ಸ್‌ನಿಂದ ಸಮಸ್ಯೆಯಾಗುವ ಕುರಿತು ಪಂಚಾಯತ್‌ ಆಡಳಿತ  ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು.ಜ್ಯೋತಿ ಪೂಜಾರಿ,  ಅಧ್ಯಕ್ಷರು, ಮರ್ಣೆ ಗ್ರಾ.ಪಂ.

ಅಜೆಕಾರು ಪೇಟೆಯ ಹಂಪ್ಸ್‌ನಿಂದ ಸಮಸ್ಯೆಯಾಗುವ ಬಗ್ಗೆ ಈಗಾಗಲೇ ಪರಿಶೀಲನೆ ಮಾಡಲಾಗಿದೆ. ಈ ಭಾಗದಲ್ಲಿ ಕಾಮಗಾರಿ ನಡೆಸುವ ಸಂದರ್ಭ  ವೈಜ್ಞಾನಿಕ  ರೀತಿಯ ಹಂಪ್ಸ್‌ ನಿರ್ಮಾಣ ಮಾಡಲಾಗುವುದು.ಲಾಯ್ಡ, ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಕಾರ್ಕಳ

 

-ಜಗದೀಶ್‌ ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next