Advertisement

ಮಲ್ಪೆ ಕೊಳದ ರಸ್ತೆ ಬದಿಯ ಡಂಪಿಂಗ್‌ ಯಾರ್ಡ್‌ಗೆ ಮುಕ್ತಿ

02:20 AM Jul 25, 2018 | Team Udayavani |

ಮಲ್ಪೆ: ಮಲ್ಪೆ ಕೊಳ ಮಾರ್ಗದ ಕೊರೆನೆಟ್‌ ಕ್ಯಾನಿಂಗ್‌ ಕಂಪೆನಿಯ ಸಮೀಪದ ರಸ್ತೆಯ ಬದಿಯಲ್ಲಿ ತ್ಯಾಜ್ಯದ ಗುಡ್ಡೆಗೆ ಕೊನೆಗೂ ಮುಕ್ತಿ ದೊರಕಿದೆ. ಶಾಶ್ವತ ಪರಿಹಾರವನ್ನು ಕಲ್ಪಿಸಲು ಸ್ಥಳೀಯ ಯುವಕರ ತಂಡ ಮುಂದಾಗಿದೆ.

Advertisement

ಸೋಮವಾರ ಉಡುಪಿ ನಗರಸಭೆ ಇಲ್ಲಿನ ಕಸವನ್ನು ತೆರವುಗೊಳಿಸಿ ಹೋದ ಬಳಿಕ ಸ್ಥಳೀಯ ಯುವಕರು ಆ ಜಾಗವನ್ನು ಸ್ವಚ್ಚಗೊಳಿಸಿ ಮುಂದೆ ಅಲ್ಲಿ ಕಸ ಎಸೆಯದಂತೆ ಎಚ್ಚರವಹಿಸಿದ್ದಾರೆ. ಸುಮಾರು 10 ಲಾರಿಗಳಷ್ಟು ಮರಳನ್ನು ತಂದು ಸಮತಟ್ಟುಗೊಳಿಸಿ ಸ್ವಚ್ಚ ಪ್ರದೇಶವನ್ನಾಗಿಸುವ ಸಂಕಲ್ಪದೊಂದಿಗೆ ಜಾಗೃತಿ ಮೂಡಿಸಿದ್ದಾರೆ. ಸೋಮವಾರ ಮಧ್ಯಾಹ್ನ ನಗರಸಭೆ ಇಲ್ಲಿನ ತ್ಯಾಜ್ಯವನ್ನು ಸ್ವಚ್ಚಗೊಳಿಸಿ ಹೋದ ಬಳಿಕ ರಾತ್ರಿ ಇಡೀ ಇಲ್ಲಿ ಯುವಕರು ಕಾವಲು ಕುಳಿತು ಕಸ ತಂದವರು ಇಲ್ಲಿ ಎಸೆಯದಂತೆ ಎಚ್ಚರ ವಹಿಸಿದ್ದಾರೆ. ಒಂದು ವೇಳೆ ಕಸ ಹಾಕಿದರೆ ಸಿಸಿ ಕೆಮರಾದಲ್ಲಿ ಪತ್ತೆ ಹಚ್ಚಿ ಅವರ ಮನೆ ಅಂಗಡಿಯೊಳಗೆ ತಂದು ಬಿಸಾಡಲಾಗುವುದು ಎಂಬ ಎಚ್ಚರಿಕೆಯ ಬೋರ್ಡ್‌ನ್ನು ಅಳವಡಿಸಿದ್ದಾರೆ.

ಹಲವಾರು ವರ್ಷಗಳ ಸಮಸ್ಯೆ ಇದಾಗಿದ್ದು, ಇಲ್ಲಿನ ನಿತ್ಯ ಕೋಳಿತ್ಯಾಜ್ಯ, ತರಕಾರಿ ಮೊಟ್ಟೆಗಳ ತ್ಯಾಜ್ಯ, ಪ್ಲಾಸ್ಟಿಕ್‌ ಸೇರಿದಂತೆ ನಾನಾ ರೀತಿಯ ಕಸಗಳನ್ನು ಪೇಟೆಯಲ್ಲಿರುವ ಅಂಗಡಿ ಹೋಟೆಲಿನವರು ಕಸವನ್ನು ಇಲ್ಲಿ ತಂದು ಸುರಿಯುತ್ತಿದ್ದು, ಸಂಬಂಧಪಟ್ಟ ಆಡಳಿತ ಎರಡು ಮೂರು ದಿನಕ್ಕೆ ಕಸವನ್ನು ತೆರವುಗೊಳಿಸಿದರೂ ತೆರವುಗೊಳಿಸಿದ ಮಾರನೇ ದಿನವೇ ಕಸದ ಗುಡ್ಡೆ ನಿರ್ಮಾಣವಾಗುತ್ತಿತ್ತು. ಕೊಳೆತ ತ್ಯಾಜ್ಯಗಳನ್ನು ತಿನ್ನಲು ಕಾಗೆಗಳು, ನಾಯಿಗಳು ಮುಗಿ ಬೀಳುತ್ತಿದ್ದು ಬೀದಿನಾಯಿಗಳ ಕಾಟದಿಂದ ನಡೆದಾಡಲು ಕಷ್ಟವಾಗುತ್ತಿತ್ತು.

ಈ ಬಗ್ಗೆ ಉದಯವಾಣಿ ಜು. 23ರಂದು ಪ್ರಕಟಿಸಿದ ಡಂಪಿಂಗ್‌ಯಾರ್ಡ್‌ ಆದ ಮಲ್ಪೆ ಕೊಳದ ರಸ್ತೆ  ವರದಿಗೆ ಸಂಬಂದಪಟ್ಟ ಇಲಾಖೆ ಎಚ್ಚೆತ್ತುಕೊಂಡು ತ್ಯಾಜ್ಯರಾಶಿ ಇದ್ದ ಪ್ರದೇಶವನ್ನು ಶುಚಿಗೊಳಿಸುವ ಜತೆಗೆ ಸ್ಥಳೀಯ ಯುವಕರು ಮುಂದೆ ಬಂದು ಇಲ್ಲಿ ಪ್ರದೇಶವನ್ನು ತ್ಯಾಜ್ಯ ಮುಕ್ತವಾಗಿಸಲು ಮುಂದಾಗಿದ್ದಾರೆ. ಮಂಜುಕೊಳ ನೇತೃತ್ವದಲ್ಲಿ ಸಾಯಿಚರಣ್‌, ರಾಜೇಶ್‌ ಕುಂದರ್‌, ಶೀತಲ್‌, ಸಾಗರ್‌, ವಿನೀತ್‌, ಕಿಶೋರ್‌ ಉಪ್ಪೂರು, ಕಿಶೋರ್‌ ಬೈಲಕರೆ, ವಿಕ್ರಮ್‌ ಸಾಲ್ಯಾನ್‌, ಮನೋಹರ ಸುವರ್ಣ, ಯಶವಂತ್‌, ಮಾದವ ಬೀಚ್‌, ಶಾನ್‌ ರಾಜ್‌ ಮೊದಲಾದವರು ಶ್ರಮದಾನ ನಡೆಸಿದ್ದಾರೆ.

ಈ ಪ್ರದೇಶದ ತ್ಯಾಜ್ಯರಾಶಿಗೆ ಶಾಶ್ವತ ಮುಕ್ತಿ ನೀಡುವ ನಿಟ್ಟಿನಲ್ಲಿ ನಾಗರಿಕರಿಗೆ ತ್ಯಾಜ್ಯ ಎಸೆಯಬಾರದೆಂದು ಮನವಿ ಮಾಡುತ್ತಿದ್ದೇವೆ. ಸಿಸಿ ಕೆಮರಾ ಅಳವಡಿಸುವ ಸಿದ್ದತೆ ನಡೆಸಿದ್ದೇವೆ. ಮುಂದೆ ತ್ಯಾಜ್ಯ ಬೀಳುವ ಪ್ರದೇಶದ ರಸ್ತೆಯನ್ನು ವಿಸ್ತರಿಸುವ ಅಥವಾ ಇಲ್ಲಿ ಒಂದು ಸುಂದರ ಗಾರ್ಡ್‌ನ್‌ ಮಾಡುವ ಯೋಜನೆ ಇದೆ.
-ಮಂಜುಕೊಳ, ಸ್ಥಳೀಯರು

Advertisement
Advertisement

Udayavani is now on Telegram. Click here to join our channel and stay updated with the latest news.

Next