ಮುಂಬಯಿ, ಜೂ. 15: ಸುಮಾರು ಎರಡೂವರೆ ತಿಂಗಳ ಬಳಿಕ ಸೋಮವಾರ ಬೆಳಗ್ಗೆಯಿಂದ ಸೀಮಿತ ಸಂಖ್ಯೆಯ ಉಪನಗರ ರೈಲುಗಳು ಮುಂಬಯಿ ಮಹಾನಗರ ಪ್ರದೇಶದಲ್ಲಿ (ಎಂಎಂಆರ್) ಕಾರ್ಯಾಚರಣೆ ನಡೆಸಲು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬಯಿಯ ಜೀವನಾಡಿ ಆಗಿರುವ ಮಧ್ಯ ರೈಲ್ವೇ (ಸಿಆರ್) ಮತ್ತು ಪಶ್ಚಿಮ ರೈಲ್ವೇ (ಡಬ್ಲ್ಯುಆರ್ ಜಾಲದಲ್ಲಿನ ಲೋಕಲ್ ರೈಲು ಸೇವೆಗಳನ್ನು ಸದ್ಯಕ್ಕೆ ಮಹಾರಾಷ್ಟ್ರ ಸರಕಾರಿ ಉದ್ಯೋಗಿಗಳಿಗೆ ಮತ್ತು ಅಗತ್ಯ ಸೇವೆಗಳಲ್ಲಿ ತೊಡಗಿರುವವರಿಗೆ ಮಾತ್ರ ಉಪಲಬ್ಧಗೊಳಿಸಲಾಗಿದೆ. ಕೋವಿಡ್-19 ಲಾಕ್‌ಡೌನ್ ಅನಂತರ ಅನ್‌ಲಾಕ್ ಪ್ರಕ್ರಿಯೆಯ ಭಾಗವಾಗಿ ಲೋಕಲ್ ರೈಲು ಸೇವೆಗಳನ್ನು ಪುನರಾರಂಭಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕೇಂದ್ರಕ್ಕೆ ಪುನರಾವರ್ತಿತ ಮನವಿ ಮಾಡಿದ ಅನಂತರ ರೈಲ್ವೇಯಿಂದ ಈ ನಿರ್ಧಾರ ಬಂದಿದೆ. ಅದರಂತೆ ಮಧ್ಯ ರೈಲ್ವೇ ಮತ್ತು ಪಶ್ಚಿಮ ರೈಲ್ವೇ ಒಟ್ಟಾಗಿ 450 ಸೇವೆಗಳನ್ನು ಪ್ರಾರಂಭಿಸಿದ್ದರಿಂದ ಮುಂಬಯಿಗರು ಮುಂ ಜಾನೆಯಿಂದಲೇ ಉಪನಗರ ರೈಲುಗಳ ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಶ್ಚಿಮ ರೈಲ್ವೇ ತನ್ನ 12 ಬೋಗಿಗಳ ಉಪನಗರ ಸೇವೆಗಳಲ್ಲಿ 60 ಜೋಡಿಗಳನ್ನು (ಎರಡೂ ದಿಕ್ಕಿನಲ್ಲಿ ಒಟ್ಟು 120 ) ಚರ್ಚ್‌ಗೇಟ್ ಮತ್ತು ಡಹಾಣು ರೋಡ್ ನಡುವೆ ನಿರ್ವಹಿಸಲು ನಿರ್ಧರಿಸಿದೆ ಎಂದು ಡಬ್ಲ್ಯುಆರ್ ವಕ್ತಾರ ರವೀಂದರ್ ಭಾಕರ್ ಹೇಳಿದ್ದಾರೆ. ಅದೇ ಮಧ್ಯ ರೈಲ್ವೇ ತನ್ನ ಮುಖ್ಯ ಮಾರ್ಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ ಎಂಟಿ)ನಿಂದ ಥಾಣೆ, ಕಲ್ಯಾಣ್, ಕರ್ಜತ್ ಮತ್ತು ಕಸಾರ ನಡುವೆ ಎರಡೂ ಕಡೆ 100 ಸೇವೆಗಳನ್ನು ಹಾಗೂ ಹಾರ್ಬರ್ ಮಾರ್ಗದಲ್ಲಿ ಸಿಎಸ್‌ಎಂಟಿ ಮತ್ತು ಪನ್ವೇಲ್ ನಡುವೆ ಎರಡೂ ದಿಕ್ಕಿನಲ್ಲಿ 70 ಸೇವೆಗಳನ್ನು ನಿರ್ವಹಿಸಲು ನಿರ್ಣಯಿಸಿದೆ ಎಂದು ಸಿಆರ್ ವಕ್ತಾರ ಶಿವಾಜಿ ಸುತಾರ್ ತಿಳಿಸಿದ್ದಾರೆ.
ಅಗತ್ಯ ಸೇವೆಯಲ್ಲಿರುವವರಿಗೆ ಮಾತ್ರ ಸೀಮಿತ : ಮಧ್ಯ ಮತ್ತು ಪಶ್ಚಿಮ ರೈಲ್ವೇಗಳ ಜಂಟಿ ಹೇಳಿಕೆಯ ಪ್ರಕಾರ, ಈ ರೈಲುಗಳು ಮುಂಜಾನೆ 5.30ರಿಂದ ರಾತ್ರಿ 11.30ರ ನಡುವೆ ಓಡಲಿವೆ. ಈ ಉದ್ದೇಶಕ್ಕೆ ಮಹಾರಾಷ್ಟ್ರ ಸರಕಾರವು ನೋಡಲ್ ಪ್ರಾಧಿಕಾರವಾಗಲಿದೆ. ಈ ವಿಶೇಷ ಸೀಮಿತ ಸೇವೆಗಳಲ್ಲಿ ರಾಜ್ಯ ಸರಕಾರದ ಅಗತ್ಯ ಸೇವೆಗಳ ಸುಮಾರು 1.25 ಲಕ್ಷ ನೌಕರರು ಪ್ರಯಾಣಿಸುವ ನಿರೀಕ್ಷೆಯಿದೆ. ಮುಂಬಯಿ, ಥಾಣೆ, ಪಾಲ^ರ್ ಮತ್ತು ರಾಯಗಢ್‌ನಲ್ಲಿ ವ್ಯಾಪಿಸಿರುವ ಉಪನಗರ ಲೋಕಲ್ ರೈಲು ಜಾಲಗಳಲ್ಲಿ ಸಾಮಾನ್ಯ ಸಮಯದಲ್ಲಿ ದೈನಂದಿನ 85 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಾರೆ. ಈ ವಿಶೇಷ ಉಪನಗರ ಸೇವೆಯು ಸಾಮಾನ್ಯ ಪ್ರಯಾಣಿಕರಿಗೆ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವುದಿಲ್ಲ, ಕೇವಲ ಅಗತ್ಯ ಸೇವೆಗಳಲ್ಲಿ ತೊಡಗಿರುವವರಿಗೆ ಮಾತ್ರ ಲಭ್ಯವಾಗಲಿದೆ ಎಂದು ಮಧ್ಯ ಮತ್ತು ಪಶ್ಚಿಮ ರೈಲ್ವೇ ಸ್ಪಷ್ಟಪಡಿಸಿವೆ.