Advertisement
ಇಂದು ಲತಾ ಅವರ ಸರದಿಯಾಗಿತ್ತು. ಎಳೆವೆಯಿಂದಲೂ ಅವರು ಕಷ್ಟ ದಿನಗಳನ್ನೇ ಕಂಡವರು. ಅವರ ಕಷ್ಟಗಳು ಮುಂಬೈಗೆ ಬಂದ ಮೇಲೂ ಮುಂದುವರಿದಿತ್ತು. ಪತಿಯ ದುಡಿಮೆ ಮನೆಯ ಖರ್ಚಿಗೆ ಮಾತ್ರ ಸಾಕಾಗುತ್ತಿತ್ತು. ಎರಡು ಮಕ್ಕಳಾದ ಮೇಲಂತೂ ಲತಾ ಅವರು ಏನಾದರೊಂದು ಕೆಲಸದ ದಾರಿ ಹುಡುಕಲೇಬೇಕಾಯ್ತು. ಚಪಾತಿ, ಕಾಕ್‌ಡ, ಹಪ್ಪಳ, ಮಸಾಲಾ ಚೂಡ, ಚಿಪ್ಸ್… ಹೀಗೆ ತನಗೆ ಸಾಧ್ಯವಿರುವ ಕೆಲಸಕ್ಕೆಲ್ಲ ಹೋಗಲಾರಂಭಿಸಿದರು. ಕಡಿಮೆ ಸಂಬಳ ಅಥವಾ ಏನಾದರೊಂದು ಕಾರಣಕ್ಕೆ ವರ್ಷಕ್ಕೆ ಎರಡು-ಮೂರು ಬಾರಿಯಾದರೂ ಅವರು ಮಾಡುವ ಕೆಲಸ ಬದಲಾಗುತ್ತಿತ್ತು. ತನ್ನ ಮಕ್ಕಳು ಚೆನ್ನಾಗಿ ಕಲಿಯಬೇಕು ಕೆಲಸಕ್ಕೆ ಸೇರಬೇಕು ಆವರೆಗೆ ದುಡಿಯುತ್ತೇನೆ ಅನ್ನುವ ಛಲ ಅವರದ್ದು. ಅದಕ್ಕಾಗಿ ವೇತನ ಜಾಸ್ತಿ ಸಿಗುವುದಾದರೆ ದಿನಕ್ಕೆ ಎರಡು-ಮೂರು ಸಲ ಹೋಗಿ ಬರುವ ಕೆಲಸವನ್ನು ಕೂಡ ವಹಿಸಿಕೊಳ್ಳಲು ಹಿಂಜರಿಯುತ್ತಿರಲಿಲ್ಲ. ಇಂದು ನೀರಿಗಾಗಿ ಲತಾ ಅವರು ಮನೆಗೆ ಬಂದಾಗ ಮಾತಿನ ನಡುವೆ, “”ಈಗಲೂ ಕಾಕ್‌ಡ ಮಾಡುವ ಕೆಲಸಕ್ಕೆ ಹೋಗ್ತಿದ್ದೀರಾ? ಒಲೆಯ ಉರಿ, ಕುದಿಯುವ ಎಣ್ಣೆಯ ಘಾಟು ಇಡೀ ದಿನ ಸಹಿಸಿಕೊಳ್ಳುವುದು ಕಷ್ಟ ಆಗುತ್ತಿಲ್ಲವೇ?” ಎಂದು ಕೇಳಿದೆ. ಅದಕ್ಕವರು, “”ಮುಂಚಿನ ಕೆಲಸ ಬಿಟ್ಟಿದ್ದೇನೆ. ಮೂರ್ನಾಲ್ಕು ತಿಂಗಳಿನಿಂದ ಬೇರೆ ಕಡೆಗೆ ಕೆಲಸಕ್ಕೆ ಹೋಗುತ್ತಿದ್ದೇನೆ. ಈವಾಗ ತೊಂದರೆ ಇಲ್ಲ” ಅಂದರು. ಏನು ಕೆಲಸ ಎಂದು ಕುತೂಹಲದಿಂದ ಕೇಳಿದಾಗ, “”ಯಾರಲ್ಲೂ ಹೇಳಬೇಡಿ. ಒಬ್ಬರ ಮನೆಯಲ್ಲಿ ಒಂದು ವರ್ಷದ ಮಗುವನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದೇನೆ. ದಿನಾ ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಮಗುವನ್ನು ನೋಡಿಕೊಂಡರೆ ಆಯ್ತು. ತಿಂಗಳಿಗೆ ಏಳು ಸಾವಿರ ರೂಪಾಯಿ ಕೊಡುತ್ತಾರೆ. ಮಗು ಕೂಡ ನನ್ನನ್ನು ತುಂಬ ಹಚ್ಚಿಕೊಂಡಿದೆ. ಸಂಜೆ ಮನೆಗೆ ವಾಪಸ್ಸು ಹೋಗಲು ಬಿಡುವುದಿಲ್ಲ” ಎಂದು ಹೇಳುವಾಗ ಅವರ ಮುಖದಲ್ಲಿ ಒಂದು ರೀತಿಯ ಸಮಾಧಾನ ಇತ್ತು. “”ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದೀರಿ ಆದರೂ ಯಾರಲ್ಲೂ ಹೇಳ್ಬೇಡಿ ಅಂತ ಯಾಕಾಗಿ ಹೇಳಿದಿರೋ ಅರ್ಥವಾಗಲಿಲ್ಲ ಎಂದೆ. ಆವಾಗ ಲತಾ ಅವರು ವಿಷಾದ ಭಾವದಿಂದ, ನನ್ನ ಮಕ್ಕಳು ಈಗ ದೊಡ್ಡವರಾಗಿದ್ದಾರೆ. ಅವರಿಗೆ ನಾನು ಇಂಥ ಕೆಲಸ ಮಾಡುತ್ತಿರುವುದು ಮುಜುಗರವಾಗುತ್ತಿದೆಯಂತೆ. ಯಾರಲ್ಲಾದರೂ ಹೇಳಿದ್ದು ಗೊತ್ತಾದರೆ ನನ್ನ ಮೇಲೆ ಸಿಟ್ಟು ಮಾಡಿಕೊಳ್ತಾರೆ. ಕಾಲೇಜಿಗೆ ಹೋಗುವ ಮಕ್ಕಳಲ್ಲವೇ!” ಅಂದರು.
ಕಳೆದ ವಾರ ವಾಟ್ಸಾಪ್‌ನಲ್ಲಿ ಬೀಡಿ ಕಟ್ಟುವ ಸೂಪಿನ ಫೊಟೊ ಹರಿದಾಡುತ್ತಿತ್ತು. ಕೆಲವರು ಇದರಿಂದಲೇ ನಾವು ಬೆಳೆದಿದ್ದು, ವಿದ್ಯೆ ಕಲಿತಿದ್ದು ಎಂದು ಹೆಮ್ಮೆಯಿಂದ ಸ್ಟೇಟಸ್‌ನಲ್ಲಿ ತಮ್ಮ ಅನಿಸಿಕೆಗಳನ್ನು ಬರೆದು ಬೀಡಿಯ ಸೂಪಿನ ಚಿತ್ರದ ಜೊತೆಗೆ ಅಪ್‌ಲೋಡ್ ಮಾಡಿದ್ದರು. ಹಳ್ಳಿಯಲ್ಲಿ ಇಂದಿಗೂ ಗೃಹಿಣಿಯರು ಈ ಕಾಯಕವನ್ನು ಮಾಡುತ್ತಿದ್ದಾರೆ. ಸುಮಾರು ಅರ್ವತ್ತು ವರ್ಷಗಳ ಹಿಂದೆ ಒಂದು ಸಾವಿರ ಬೀಡಿ ಕಟ್ಟಿದರೆ, ಒಂದು ರೂಪಾಯಿ ಅರ್ವತ್ತೆ„ದು ಪೈಸೆ ಮಾತ್ರ ಸಿಗುತ್ತಿತ್ತು. ಇಪ್ಪತ್ತು ವರ್ಷಗಳ ಹಿಂದೆ ಇಪ್ಪತ್ತೆರಡು ರೂಪಾಯಿಯಷ್ಟಾಗಿತ್ತು. ಈವಾಗ ನೂರ ಐವತ್ತೆ„ದು ರೂಪಾಯಿ ಸಿಗುತ್ತದೆ. ಹಿಂದೆ ಊರಿನಲ್ಲಿ ನಾಲ್ಕಾರು ಮಂದಿ ಹೆಂಗಳೆಯರೆಲ್ಲ ಒಂದೇ ಮನೆಯಲ್ಲಿ ಸೇರಿ, ಪಂಥವಿಟ್ಟು ಬೀಡಿ ಕಟ್ಟುವುದಿತ್ತು. ಜೊತೆಗೆ ಪಾಡªನ, ಜಾನಪದ ಗೀತೆ, ಅಂತ್ಯಾಕ್ಷರಿ, ದೆವ್ವ, ಭೂತ, ಅಜ್ಜಿ ಕತೆಗಳನ್ನು ಹೇಳುತ್ತ, ಕೇಳುತ್ತ ಬೀಡಿ ಸೂಪು ತುಂಬಿದ್ದೇ ಗೊತ್ತಾಗುತ್ತಿರಲಿಲ್ಲ. ಈಗ ಟಿ.ವಿಯಲ್ಲಿ ಸಿನೆಮಾ, ಧಾರಾವಾಹಿ ನೋಡುತ್ತ ಬೀಡಿ ಕಟ್ಟುವುದು ಕಂಡು ಬರುತ್ತದೆ. ಹೊಗೆಸೊಪ್ಪಿನ ಘಾಟು ಸಹಿಸಿಕೊಂಡು, ಬೆನ್ನು ಗೂನು ಮಾಡಿಕೊಂಡು ದಿನವಿಡೀ ಕೂತರೂ ಕೆಲವೊಮ್ಮೆ ಒಂದು ಸಾವಿರ ಬೀಡಿ ಕಟ್ಟಲೂ ಆಗುವುದಿಲ್ಲ. ಕಟ್ಟಿದ ಎಲ್ಲ ಬೀಡಿ ಸ್ವೀಕಾರ ಆಗುವುದಿಲ್ಲ. ಚೆಕ್ಕರ್(ಬೀಡಿಯ ಉಸ್ತುವಾರಿ ನೋಡಿಕೊಳ್ಳುವವರು) ಬೀಡಿಯನ್ನು ಒಂದೊಂದಾಗಿ ನೂಲು ತೆಗೆದು ಬಿಡಿಸಿ ನೋಡಿದಾಗ ಹೊಗೆಸೊಪ್ಪು ಬತ್ತಿಯ ಹಾಗಾಗಿದ್ದರೆ, ಉಪಯೋಗಿಸಿದ ಎಲೆ ತುಸು ಮಸುಕಾಗಿದ್ದರೆ ಎಲ್ಲ ಬೀಡಿ ವಾಪಸ್. ಉದ್ದ, ಗಿಡª, ತೋರ, ಸಪೂರ ಅಂತ ಕಟ್ಟಿದ ಸಾವಿರ ಬೀಡಿಯಲ್ಲಿ ಇನ್ನೂರು ಬೀಡಿಯಾದರೂ ಚೆಕ್ಕರ್ ಮುರಿದು ಕೊಡುತ್ತಾರೆ. ವಾರಕ್ಕೊಮ್ಮೆ ಸಿಗುವ ಮಜೂರಿಯಲ್ಲಿ ಇಪ್ಪತ್ತು ಅಥವಾ ಮೂವತ್ತು ರೂಪಾಯಿಗಳು ಎಲೆ ಹೊಗೆಸೊಪ್ಪು ನಷ್ಟವಾದ ಲೆಕ್ಕದಲ್ಲಿ ವಜಾ ಮಾಡಲಾಗುತ್ತದೆ.
Related Articles
Advertisement
ಇಲ್ಲಿ ಮಕ್ಕಳೇ ಕಥೆಯಾಗಿಬಿಡುತ್ತಾರೆ!ರಸ್ತೆ ಬದಿಯಲ್ಲಿ, ರೈಲಿನೊಳಗೆ ಏನಾದರೊಂದು ಮಾರಾಟ ಮಾಡಿಕೊಂಡು ಬರುವ ಪುಟಾಣಿ ಮಕ್ಕಳು ಬೇರೆಯೇ ರೀತಿಯಲ್ಲಿ ನಮ್ಮ ಗಮನ ಸೆಳೆಯುತ್ತಾರೆ. ನಮ್ಮ ಪರಿಸರದ ಪಕ್ಕದ ಬೀದಿಯಲ್ಲಿ ಮೂರರ ಹರೆಯದ ಪುಟ್ಟ ಹುಡುಗಿ ಹೂವು ಮಾರಲು ಕುಳಿತಿದ್ದಳು. ಕುಕ್ಕುರುಗಾಲಿನಲ್ಲಿ ಕೂತು ಹೂವಿನ ಮಾಲೆಯನ್ನು ಹಿಡಿದುಕೊಂಡು ರಸ್ತೆಯಲ್ಲಿ ಅತ್ತಿಂದಿತ್ತ ನಡೆದು ಹೋಗುವವರನ್ನು ಕತ್ತು ತಿರುಗಿಸಿ ನೋಡುತ್ತಿದ್ದಳು. ಅವಳ ಕಣ್ಣುಗಳಲ್ಲಿರುವ ನಿರೀಕ್ಷೆ, ಹೂವು ಕೊಳ್ಳಲು ಬರುವ ಗಿರಾಕಿಗಳಿಗಾಗಿಯಲ್ಲ, ಈಗ ಬರುವೆನೆಂದು ಅಲ್ಲಿಯೇ ಬಿಟ್ಟು ಹೋದ ಅವಳ ಅಮ್ಮನಿಗಾಗಿ ಇರಬಹುದೆಂದು ಮುಖಭಾವದಲ್ಲಿಯೇ ತಿಳಿಯುತ್ತಿತ್ತು. ಹೂವಿನ ಹಾರದ ಬೆಲೆಯೆಷ್ಟು ಕೇಳಿದಾಗ, ತೊದಲು ನುಡಿಗಳಿಂದ ಪಂದ ರೂಪ್ಯಾ (ಹದಿನೈದು ರೂಪಾಯಿ)ಎಂದು ಹೇಳಿ ಮುಖವನ್ನೇ ನೋಡುತ್ತಿದ್ದಳು. ರಸ್ತೆಗಳಲ್ಲಿ ಗ್ರೀನ್ ಸಿಗ್ನಲ್‌ನ ಸೂಚನೆಗಾಗಿ ಕಾಯುವ ವಾಹನಗಳ ನಡುವೆ ಪುಟ್ಟ ಹುಡುಗಿಯರು ಮೈತೂರಿಸಿಕೊಂಡು ಬಂದು ಪೆನ್ನು-ಪೆನ್ಸಿಲ್ ಹೂವು ಮಾರುತ್ತಿರುತ್ತಾರೆ. ಬಿಸಿಲಿಗೆ ಕಪ್ಪೇರಿದ ಮುಖ, ಬೆವರಿಗೆ ಮೈಗಂಟಿಕೊಂಡ ಬಟ್ಟೆ ರಸ್ತೆಯ ಬದಿಯ ಮರಗಳಂತೆ ಇವರ ಮೃದು ಶರೀರಕ್ಕೂ ಗಾಢವಾಗಿ ಮೆತ್ತಿಕೊಂಡ ಧೂಳು! ಆದರೂ ಅವರ ಕಣ್ಣು ಗಳಲ್ಲಿರುವ ನಿರೀಕ್ಷೆ, ಕೈಯಲ್ಲಿರುವ ಬಲ, ಮುಂದೆ ನಡೆಯುವ ಛಲ ದಲ್ಲಿ ಕುಂದು ಕಾಣಿಸುವುದಿಲ್ಲ. ಮಕ್ಕಳಿಗಾಗಿ ತ್ಯಾಗ ಮಾಡುವ ಹೆತ್ತವರ ಕತೆ ಒಂದೆಡೆಯಾದರೆ, ಇಲ್ಲಿ ಮಕ್ಕಳೇ ಕಥೆಯಾಗಿ ಬಿಡುತ್ತಾರೆ. ಅನಿತಾ ಪಿ. ತಾಕೊಡೆ