Advertisement

ಸ್ಥಳೀಯ, ಅರೆ ಸರ್ಕಾರಿ ಸಂಸ್ಥೆ: ಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹ

02:38 PM Jul 31, 2017 | |

ಬಳ್ಳಾರಿ: ರಾಜ್ಯ ಸರ್ಕಾರ ವಿದ್ಯುತ್‌ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ, ಸ್ಥಳೀಯ, ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಗುತ್ತಿಗೆ ಪದ್ಧತಿಯನ್ನು ತೆಗೆದು ಹಾಕಬೇಕು. ಸರ್ವೋಚ್ಛ  ನ್ಯಾಯಾಲಯದ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಕರ್ನಾಟಕ ರಾಜ್ಯ ವಿದ್ಯುತ್‌ ಕಾರ್ಮಿಕರ ಫೆಡರೇಷನ್‌ ರಾಜ್ಯ ಘಟಕದ ಅಧ್ಯಕ್ಷ ಜೆ.ಸತ್ಯಬಾಬು ಆಗ್ರಹಿಸಿದರು.

Advertisement

ನಗರದ ಗಾಂಧಿ  ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ವಿದ್ಯುತ್‌ ಕಾರ್ಮಿಕರ ಫೆಡರೇಷನ್‌ನ ಬಳ್ಳಾರಿ ಜಿಲ್ಲಾ ಸಮಿತಿಯ ಸಮಾವೇಶದಲ್ಲಿ ಅವರು ಮಾತನಾಡಿದರು. ಸಿಐಟಿಯು ಸಂಯೋಜಿತ ಅಖೀಲ ಭಾರತ ವಿದ್ಯುತ್‌ ನೌಕರರ ಒಕ್ಕೂಟದ ನಿರಂತರ ಹೋರಾಟದಿಂದಾಗಿ ಆಂಧ್ರಪ್ರದೇಶ, ತೆಲಂಗಾಣಾ, ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಲಾಗಿದೆ ಎಂದರು.

ರಾಜ್ಯ ಸರ್ಕಾರ ವಿದ್ಯುತ್‌ ಇಲಾಖೆಯ ವಿವಿಧ ಎಸ್ಕಾಂಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಕಾಯಂ ಮಾಡಬೇಕು. ಇದನ್ನು ಪಡೆದುಕೊಳ್ಳಲು ಕರ್ನಾಟಕ  ರಾಜ್ಯದಲ್ಲಿಯೂ ಕೂಡಾ ಎಲ್ಲ ಗುತ್ತಿಗೆ ಕಾರ್ಮಿಕರು ಹಾಗೂ  ಇತರೆ ಕಾರ್ಮಿಕರು, ನೌಕರರು ಸಂಘಟಿತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು. ವಿದ್ಯುತ್‌ ಇಲಾಖೆಯಲ್ಲಿ ನೇರ ನೇಮಕಾತಿ ತಕ್ಷಣ ನಿಲ್ಲಿಸಬೇಕು, ಕನಿಷ್ಠ ಮಾಸಿಕ ವೇತನ 21 ಸಾವಿರ ರೂ. ನೀಡಬೇಕು. ಇಎಸ್‌ಐ, ಪಿಎಫ್‌ ನೀಡಬೇಕು. ಸಂಬಳದ ಚೀಟಿ, ಗುರುತಿನ ಚೀಟಿಗಳನ್ನು ಮೂಲ ಮಾಲೀಕರ ಸಹಿಯೊಂದಿಗೆ (ಗುತ್ತಿಗೆದಾರರ ಸಹಿ) ಗುತ್ತಿಗೆ ಕಾರ್ಮಿಕರಿಗೆ ನೀಡಬೇಕು, ಗುತ್ತಿಗೆ ಕಾರ್ಮಿಕರನ್ನು ಬಳಸಿ, ಬಿಸಾಡುವ ನೀತಿಯನ್ನು ವಿದ್ಯುತ್‌ ಇಲಾಖೆ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯದ ಎಲ್ಲ ಐದು ಎಸ್ಕಾಂಗಳಲ್ಲಿನ ಗುತ್ತಿಗೆ ನೌಕರರನ್ನು ಕಾಯಮಾತಿಗೊಳಿಸಲು ಸಮಾನ ಕೆಲಸಕ್ಕೆ ಸಮಾನ ವೇತನ, ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಹಂತ-ಹಂತಗಳ ಹೋರಾಟ ನಡೆಸಲಾಗುತ್ತದೆ. ಆಗಸ್ಟ್‌ 9ರಂದು ಮುಖ್ಯಮಂತ್ರಿ, ವಿದ್ಯುತ್‌ ಸಚಿವರು, ವಿದ್ಯುತ್‌ ಇಲಾಖೆ ಕಾರ್ಯದರ್ಶಿಗಳಿಗೆ, ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯುವ ಮೂಲಕ ಪತ್ರ ಚಳವಳಿ ನಡೆಸಲಾಗುತ್ತದೆ. ಎಲ್ಲ ಗುತ್ತಿಗೆ ಕಾರ್ಮಿಕರು ಪತ್ರಗಳನ್ನು ಬರೆದು ಬೇಡಿಕೆಗಳ ಬಗ್ಗೆ ಗಮನ ಸೆಳೆಯಬೇಕು ಎಂದು ತಿಳಿಸಿದರು.

ಆ. 25ರಂದು ಆರೂ ಕ್ಷೇತ್ರಗಳಲ್ಲಿ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿ ವಿದ್ಯುತ್‌ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಲಾಗುತ್ತದೆ. ಆ. 31ರಂದು ಹಾಗೂ ಸೆ. 4ರಂದು ವಿವಿಧ “ಎಸ್ಕಾಂ’ಗಳ ಮುಖ್ಯ ಕಚೇರಿ ಮುಂದೆ ಪ್ರತಿಭಟನೆ, ಧರಣಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. 

Advertisement

ಸಮಾವೇಶದಲ್ಲಿ ಜಿಲ್ಲಾ ಸಿಐಟಿಯು ಅಧ್ಯಕ್ಷ ಭಾಸ್ಕರ್‌ ರೆಡ್ಡಿ ಮಾತನಾಡಿ, ಸಂಘಟಿತ ಹೋರಾಟದಿಂದ ಮಾತ್ರವೇ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದರು. ಅಂಗನವಾಡಿ ನೌಕರರ ಸಂಘದ ಧುರೀಣೆ ಎರ್ರೆಮ್ಮ, ವಿದ್ಯುತ್‌ ಕಾರ್ಮಿಕರ ಫೆಡರೇಷನ್‌ ನ ಸಣ್ಣಬಾಬು, ವೀರೇಶ್‌, ಸುಮಲತಾ, ರೋಷನ್‌ ಬಾನು, ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ವಿದ್ಯುತ್‌ ನಿಲಾಖೆಯ ಕಾರ್ಮಿಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next