ಮಳವಳ್ಳಿ: ತಾಲೂಕಿನ ಗ್ರಾಮ ಪಂಚಾಯ್ತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗಿದ್ದು, ತಾಲೂಕಿನಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ.
ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕಳೆದ 4-5 ತಿಂಗಳಿಂದ ಮುಂದೂಡಿಕೆಯಾಗಿದ್ದ ಪಂಚಾಯ್ತಿ ಚುನಾವಣೆಗಳನ್ನು ನವೆಂಬರ್ ಮತ್ತು ಡಿಸೆಂಬರ್ ಮುಗಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇತ್ತೀಚಿಗೆ ಕ್ಷೇತ್ರವಾರು ಮೀಸಲಾತಿಯನ್ನು ಪ್ರಕಟಿಸಿದೆ. ಕೋವಿಡ್‌ನಿಂದಾಗಿ ಸ್ಥಗಿತಗೊಂಡಿದ್ದ ರಾಜಕೀಯ ಚಟುವಟಿಕೆಗಳು ಇದೀಗ ಚುರುಕುಗೊಂಡಿವೆ.
ಕಾಂಗ್ರೆಸ್- ಜೆಡಿಎಸ್ ಪೈಪೋಟಿ: ತಾಲೂಕಿನಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಪೈಪೋಟಿ ನಡೆಯುತ್ತಾ ಬಂದಿದೆ. ಇಲ್ಲಿಯವೆರೆಗೆ ಜಿಲ್ಲೆಯಲ್ಲಿ ಶಾಸಕರಿಲ್ಲದಿದ್ದ ಬಿಜೆಪಿ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಕೆ.ಸಿ. ನಾರಾಯಣ ಗೌಡ ಗೆಲ್ಲುವ ಮೂಲಕ ಖಾತೆ ತೆರೆದಿದೆ. ಗೆದ್ದ ನಾರಾಯಣಗೌಡ ಜಿಲ್ಲಾ ಉಸ್ತುವಾರಿ ಆಗಿರುವುದರಿಂದ ಕಮಲ ಪಕ್ಷಕ್ಕೆ ತಾಲೂಕಿನಲ್ಲಿ ಅಲ್ಪ ಬಲ ಬಂದಿದೆ. ತಾಲೂಕಿನಲ್ಲಿನ ಒಟ್ಟು 39 ಗ್ರಾಪಂಗೆ ಮೀಸಲಾತಿ ಅಧಿಸೂಚನೆ ಹೊರಡಿಸಲಾಗಿದೆ. 2015ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 30ಕ್ಕೂ ಹೆಚ್ಚು ಪಂಚಾಯ್ತಿಗಳಲ್ಲಿ ಅಧಿಕಾರದ ನಡೆಸಿತು. ಜೆಡಿಎಸ್ ಒಂದಕಿ ದಾಟಿರಲಿಲ್ಲ. ಆದರೆ, ಆಗ ಕಾಂಗ್ರೆಸ್ ಪಿ. ಎಂ.ನರೇಂದ್ರಸ್ವಾಮಿ ಶಾಸಕರಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್‌ನ ಡಾ.ಕೆ.ಅನ್ನದಾನಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಈಗಲೂ ತಾಲೂಕಿನಲ್ಲಿ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಬಹಳಷ್ಟು ಹಿಡಿತ ಹೊಂದಿದ್ದು, ಈಗಾಗಲೇ ಟಿಎಪಿಎಂಎಸ್ ಮತ್ತು ಡಿಸಿಸಿ ಬ್ಯಾಂಕ್ ಚುನಾವಣೆಗಾಗಿ ಗ್ರಾಮವಾರು ಸಭೆ ನಡೆಸಿ, ಆ ಸಭೆಯಲ್ಲಿಯೇ ಪಂಚಾಯ್ತಿ ಅಖಾಡಕ್ಕೆ ಸಜ್ಜಾಗುವಂತೆ ಸೂಚನೆ ನೀಡಿದ್ದಾರೆ. ಇದರಿಂದ ಬ್ಲಾಕ್ ಅಧ್ಯಕ್ಷರಾದ ಸುಂದರ್ ರಾಜ್ ಮತ್ತು ದೇವರಾಜು ಸ್ಥಳೀಯ ಕಾರ್ಯಕರ್ತರ ಜತೆ ನಿರಂತರ ಸಂಪರ್ಕದಲ್ಲಿದ್ದು, ಮತ್ತೆ ಪ್ರಾಬಲ್ಯ ಸಾಧಿಸಲು ಪಣತೊಟ್ಟಿದ್ದಾರೆ.
ಜೆಡಿಎಸ್‌ನಲ್ಲೂ ಉತ್ಸಾಹ: ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಜೆಡಿಎಸ್ ಸ್ಥಳೀಯ ಚುನಾವಣೆಗೆ ತಯಾರಿ ಆರಂಭಿಸಿದೆ. ತಾಲೂಕು ಘಟಕ ಅಧ್ಯಕ್ಷ ಮಲ್ಲೇಗೌಡ ಅವರು ಇಲ್ಲಿಯವೆರೆಗೆ ಕೆಲವು ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಆದರೆ, ಕಳೆದ ವಿಧಾನ ಸಭೆ ಚುನಾವಣೆಗೆ ಮೊದಲು ಕಚೇರಿ ಹೊಂದಿದ್ದ ಜೆಡಿಎಸ್ ಪಕ್ಷ ಡಾ.ಕೆ.ಅನ್ನದಾನಿ ಶಾಸಕರಾಗಿ ಆಯ್ಕೆಯಾದ ಮೇಲೆ ಕಚೇರಿ ತೆರವುಗೊಳಿಸಿದ್ದು, ಕಾರ್ಯಕರ್ತರಲ್ಲಿ ಅಸಾಮಾಧಾನರಲ್ಲಿ ಮೂಡಿಸಿದೆ..
ಬಿಜೆಪಿಯಲ್ಲಿ ಬಣಗಳ ಸದ್ದು : ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷ ತಾಲೂಕಿನಲ್ಲಿ ಅಷ್ಟೇನು ಶಕ್ತಿ ಹೊಂದಿಲ್ಲ. ಅಲ್ಲದೆ, ತಾಲೂಕು ಬಿಜೆಪಿಯಲ್ಲಿ 4-5 ಬಣಗಳಿವೆ. ಮಾಜಿಸಚಿವ ಬಿ.ಸೋಮಶೇಖರ್, ಯಮಂ ದೂರು ಸಿದ್ದರಾಜು ಸೇರಿದಂತೆ ಹಲವು ಬಣಗಳಿದ್ದು, ನೂತನವಾಗಿ ತಾಲೂಕು ಘಟಕದ ಅಧ್ಯಕ್ಷರಾಗಿ ಎಂ.ಎನ್.ಕೃಷ್ಣ ಕಾರ್ಯಕರ್ತರಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದಾರೆ. ಕಳೆದ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಬೆರಳೆಣಿಕೆ ಸದಸ್ಯರು ಆಯ್ಕೆಯಾಗಿದ್ದರು. ಒಟ್ಟಿನಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ನಡುವೆ ನೇರ ನೇರಾ ಹಣಾಹಣೆ ಇದೆ.
ಕಳೆದ ಬಾರಿ 30ಕ್ಕೂ ಹೆಚ್ಚು ಪಂಚಾಯ್ತಿಗಳಲ್ಲಿ ಅಧಿಕಾರ ಹಿಡಿದಿದ್ದವು. ಈ ಚುನಾವಣೆಯಲ್ಲಿ 35 ಪಂಚಾಯ್ತಿಗಳನ್ನು ಗೆಲ್ಲಲಿದ್ದೇವೆ. ಈಗಾಗಲೇ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರ ಸೂಚನೆಯಂತೆ ಕಾರ್ಯಕರ್ತರ ಜತೆ ಸಭೆ ಮಾಡಲಾಗುತ್ತಿದೆ.
– ದೇವರಾಜು, ಅಧ್ಯಕ್ಷರು. ಬ್ಲಾಕ್ ಕಾಂಗ್ರೆಸ್
ಗ್ರಾಪಂ ಚುನಾವಣೆಗೆ ಈಗಾಗಲೇ ತಯಾರಿ ಆರಂಭಿಸಿದ್ದು, ಪಕ್ಷ ಸಿದ್ಧವಾಗಿದೆ. ಪಟ್ಟಣದಲ್ಲಿ ಜೆಡಿಎಸ್ ಕಚೇರಿಗೆ ಜಾಗ ಗುರುತಿಸಲಾಗಿದ್ದು, ಸದ್ಯದಲ್ಲಿಯೇ ಪ್ರಾರಂಭ ಮಾಡಲಾಗುವುದು.
-ಮಲ್ಲೇಗೌಡ, ಅಧ್ಯಕ್ಷರು, ತಾಲೂಕು ಜೆಡಿಎಸ್ ಘಟಕ
ಕೆ.ಸಿ.ನಾರಾಯಣಗೌಡರು ಗೆದ್ದು ಜಿಲ್ಲಾ ಉಸ್ತವಾರಿ ಸಚಿವರಾದ ಮೇಲೆ ನಮ್ಮ ತಾಲೂಕಿಗೆ 6 ಬಾರಿ ಭೇಟಿ ನೀಡಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದು, ಈ ಬಾರಿ ಹತ್ತಕ್ಕೂ ಹೆಚ್ಚು ಗ್ರಾಪಂ ಅಧಿಕಾರಕ್ಕೆ ಬರಲಿದೆ.
– ಎಂ.ಎನ್.ಕೃಷ್ಣ, ಅಧ್ಯಕ್ಷರು, ತಾಲೂಕು ಬಿಜೆಪಿ ಘಟಕ
-ಎ.ಎಸ್.ಪ್ರಭಾಕರ್