Advertisement
2018ರಲ್ಲಿ ವಿಧಾನಸಭೆ ಚುನಾವಣೆ ನಡೆದು ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಅವಧಿಪೂರ್ಣಗೊಂಡ ರಾಜ್ಯದ 105 ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ 2018ರ ಆಗಸ್ಟ್ 29ರಂದು ಚುನಾವಣೆ ನಡೆಸಿ, ಸೆಪ್ಟೆಂಬರ್ 3ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬಿದ್ದಿತ್ತು.
Related Articles
Advertisement
ಬಲಾಬಲ: 2018ರ ಆಗಸ್ಟ್ 29ರಂದು ಮೊದಲ ಹಂತದಲ್ಲಿ ಮತದಾನ ನಡೆದಿದ್ದ ಜೆಡಿಎಸ್ ಶಾಸಕರಿರುವ ತಿ.ನರಸೀಪುರ ಪುರಸಭೆಯ 23 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 10, ಬಿಜೆಪಿ-4, ಜೆಡಿಎಸ್-3 ಹಾಗೂ ಆರು ಮಂದಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಪಿರಿಯಾಪಟ್ಟಣ ಪುರಸಭೆಯ 23 ವಾರ್ಡ್‌ಗಳ ಪೈಕಿ ಜೆಡಿಎಸ್-14, ಕಾಂಗ್ರೆಸ್-08 ಹಾಗೂ ಓರ್ವ ಪಕ್ಷೇತರ ಗೆಲುವು ಸಾಧಿಸಿದ್ದು, ಇಲ್ಲಿ ಬಿಜೆಪಿ ಖಾತೆ ತೆರೆದಿಲ್ಲ. ಕಾಂಗ್ರೆಸ್ ಶಾಸಕರಿರುವ ಎಚ್.ಡಿ.ಕೋಟೆ ಪುರಸಭೆಯ 23 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 11, ಜೆಡಿಎಸ್ 08, ಬಿಜೆಪಿ 01, ಬಿಎಸ್‌ಪಿ 01, ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
ಎರಡನೇ ಹಂತದಲ್ಲಿ 2019ರ ಮೇ 29ರಂದು ಮತದಾನ ನಡೆದು 31ರಂದು ಫಲಿತಾಂಶ ಹೊರಬಿದ್ದಿರುವ, ಬಿಜೆಪಿ ಶಾಸಕರಿರುವ ನಂಜನಗೂಡು ನಗರಸಭೆಯ 31ವಾರ್ಡ್‌ಗಳ ಪೈಕಿ ಬಿಜೆಪಿ 15, ಕಾಂಗ್ರೆಸ್ 10, ಜೆಡಿಎಸ್ 3, ಹಾಗೂ ಮೂವರು ಪಕ್ಷೇತರರು ಗೆದ್ದು ಬಂದಿದ್ದಾರೆ.ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ಸ್ವಕ್ಷೇತ್ರ ಕೆ.ಆರ್.ನಗರ ಪುರಸಭೆಯ 23 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 14, ಜೆಡಿಎಸ್ 08, ಬಿಜೆಪಿ 01 ಸ್ಥಾನ ಗಳಿಸಿದೆ. ತಿ.ನರಸೀಪುರ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿರುವ ಬನ್ನೂರು ಪುರಸಭೆಯ 23 ವಾರ್ಡ್‌ಗಳ ಪೈಕಿ ಜೆಡಿಎಸ್ 12, ಕಾಂಗ್ರೆಸ್ 07, ಬಿಜೆಪಿ 02 ಹಾಗೂ ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಆಡಳಿತ ನಡೆಸಲಾರದ ಪರಿಸ್ಥಿತಿ: 2018ರ ಸೆಪ್ಟೆಂಬರ್‌ನಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆದ ರಾಜ್ಯದ 105 ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿತಾದರೂ ಚುನಾವಣೆ ದಿನಾಂಕ ಪ್ರಕಟಿಸುವ ವೇಳೆಗೆ ಮೀಸಲಾತಿ ನಿಗದಿಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಪ್ರಕರಣ ಇತ್ಯರ್ಥವಾಗದೆ ಚುನಾಯಿತ ಸದಸ್ಯರು ಆಡಳಿತ ನಡೆಸಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿನಿಧಿಗಳಿಂದ ಅಧಿಕಾರಿಗಳಿಗೆ ಮನವಿ: ಇದರ ಪರಿಣಾಮ ನಗರದ ಮೂಲಭೂತ ಸಮಸ್ಯೆಗಳ ನಿವಾರಣೆ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿ ಕೆಲಸ ಮಾಡಿಸಬೇಕಿದ್ದ ನೂತನ ಚುನಾಯಿತ ಪ್ರತಿನಿಧಿಗಳು, ಜನ ಸಾಮಾನ್ಯರಂತೆಯೇ ಅಧಿಕಾರಿಗಳಿಗೆ ಮನವಿ ಮಾಡಿ ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಚುನಾಯಿತ ಕೌನ್ಸಿಲ್ ಅಸ್ತಿತ್ವಕ್ಕೆ ಬರದೇ ಇರುವುದರಿಂದ ಪುರಸಭೆ ಅಧಿಕಾರಿಗಳು ಇವರ ಮಾತಿಗೆ ಸೊಪ್ಪು ಹಾಕುತ್ತಿಲ್ಲ. ಇತ್ತ ತಮ್ಮನ್ನು ಚುನಾಯಿಸಿದ ವಾರ್ಡ್‌ನ ಜನರ ಸಮಸ್ಯೆಗೆ ಸಮರ್ಪಕವಾಗಿ ಸ್ಪಂದಿಸಲಾಗದೆ ಜನರಿಂದ ಶಾಪ ಹಾಕಿಸಿಕೊಳ್ಳಬೇಕಾಗಿ ಬಂದಿದೆ. ನಮ್ಮ ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಇದನ್ನು ಪ್ರಶ್ನಿಸಿ ಕೋರ್ಟ್‌ಗೆ ಹೋಗಿದ್ದರಿಂದ ಇನ್ನೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ. ಹೀಗಾಗಿ ನಾವು ಚುನಾಯಿತರಾಗಿದ್ದರೂ ಅಧಿಕಾರಿಗಳು ಸರಿಯಾಗಿ ಮಾಹಿತಿ ಕೊಡದಿರುವುದರಿಂದ ಕೆಲಸ ಮಾಡಲಾಗುತ್ತಿಲ್ಲ. ಸರ್ಕಾರ ಆದಷ್ಟು ಬೇಗ ಅಧ್ಯಕ್ಷರ ಚುನಾವಣೆ ನಡೆಸಿ, ಸದಸ್ಯರಿಗೆ ಅಧಿಕಾರ ಕೊಡಬೇಕು.
-ಕಿರಣ್, ಸದಸ್ಯ, ತಿ.ನರಸೀಪುರ ಪುರಸಭೆ * ಗಿರೀಶ್ ಹುಣಸೂರು