ಪುಂಜಾಲಕಟ್ಟೆ: ಸಮಾಜದಲ್ಲಿ ಈ ಹಿಂದೆ ರಾಜಾಶ್ರಯ ಕೊನೆಗೊಂಡ ಬಳಿಕ ಕೇವಲ ಆರ್ಥಿಕ ಸ್ಥಿತಿವಂತರು ಮತ್ತು ಬಲಾಡ್ಯರಿಗೆ ಸೀಮಿತವಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಇದೀಗ ಭೂ ಮಸೂದೆ ಕಾನೂನು ಬಳಿಕ ಸಾಮಾಜಿಕ ಬದಲಾವಣೆಯಿಂದ ಜನಸಾಮಾನ್ಯರೂ ತೊಡಗಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ. ಇಲ್ಲಿನ ಧಾರ್ಮಿಕ ಕ್ಷೇತ್ರಗಳ ಪುನುರುತ್ಥಾನ ಸಾಧ್ಯವಾಗಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಪುನರ್ ನಿರ್ಮಾಣಗೊಳ್ಳುತ್ತಿರುವ ಬಂಟ್ವಾಳ ತಾ| ಮಣಿನಾಲ್ಕೂರು ಗ್ರಾಮದ ಅಜಿಲಮೊಗರು, ಅಗರಗಂಡಿ, ಇಳಿಯೂರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ದೇವಸ್ಥಾನದ ಟ್ರಸ್ಟ್ ವತಿಯಿಂದ ವೇ| ಮೂ| ನೀಲೇಶ್ವರ ಪದ್ಮನಾಭ ಉಚ್ಚಿಲತ್ತಾಯ ತಂತ್ರಿಗಳ ಪೌರೋಹಿತ್ಯದಲ್ಲಿ ರವಿವಾರ ಜರಗಿದ ಶ್ರೀ ಮಹಾವಿಷ್ಣು ದೇವರ ಷಡಾಧಾರ ಮತ್ತು ಗರ್ಭನ್ಯಾಸ ಕಾರ್ಯಕ್ರಮದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ವೇ| ಮೂ| ನೀಲೇಶ್ವರ ಪದ್ಮನಾಭ ಉಚ್ಚಿಲತ್ತಾಯ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ ನಮಗೆ ಸಂಸ್ಕಾರ ಕೊಟ್ಟಾಗ ದೇವರನ್ನು ಕಾಣಲು ಸಾಧ್ಯವಾಗುತ್ತದೆ. ನಮ್ಮನ್ನು ನಾವು ಅರಿತುಕೊಂಡು ದೇವರ ಮೇಲಿನ ವಿಶ್ವಾಸ, ಶ್ರದ್ಧೆ, ಭಕ್ತಿಯಿಂದ ಸತ್ಯ-ಧರ್ಮದ ಮಾರ್ಗದಲ್ಲಿ ಜೀವನ ನಡೆಸಿದಾಗ ದೇವರು ನಮ್ಮನ್ನು ರಕ್ಷಿಸುತ್ತಾರೆ. ಶ್ರದ್ಧಾ ಕೇಂದ್ರಗಳ ಉನ್ನತಿಯಾದಾಗ ಸಮಾಜದ ಉನ್ನತಿಯಾಗುತ್ತದೆ ಎಂದರು. ಮಾಜಿ ಶಾಸಕ ರುಕ್ಮಯ ಪೂಜಾರಿ ಮಾತನಾಡಿ ಹಿಂದೆ ದೇವರ ಮೆಲಿನ ಭಯ- ಭಕ್ತಿಯಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಪರಕೀಯರ ಆಕ್ರಮಣ ಬಳಿಕ ದೇಗುಲಗಳು ನಾಶಗೊಂಡು ಅವನತಿ ಹೊಂದಿದವು. ದೇವಸ್ಥಾನಗಳ ಪುನರುತ್ಥಾನದಿಂದ ಗ್ರಾಮಗಳ ಅಭಿವೃದ್ಧಿಯೂ ಆಗುತ್ತದೆ ಎಂದರು.
ಜಿ.ಪಂ. ಸದಸ್ಯರಾದ ಬಿ. ಪದ್ಮಶೇಖರ ಜೈನ್, ಚಂದ್ರ ಪ್ರಕಾಶ್ ಶೆಟ್ಟಿ, ಬೆಂಗಳೂರು ಉದ್ಯಮಿ ರವಿ ಶಂಕರ್ ಶೆಟ್ಟಿ ಬಡಾಜೆ, ಬಂಟ್ವಾಳ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಮಹೇಶ್ ಕುಮಾರ್ ಕರಿಕಳ, ಉದ್ಯಮಿಗಳಾದ ಕೆ.ಎನ್. ಸಾಯಿ ಗಿರಿಧರ್ ಶೆಟ್ಟಿ, ಸಂಜೀವ ಪೂಜಾರಿ ಗುರುಕೃಪಾ, ಕಕ್ಯಪದವು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ, ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ವಿಜಯ ಕುಮಾರ್ ಅಜಿಲ ಅತಿಥಿಗಳಾಗಿ ಭಾಗವಹಿಸಿದ್ದರು.
ಆಡಳಿತ ಟ್ರಸ್ಟಿಗಳಾದ ಅಮರನಾಥ ಅಜಿಲ, ಲಾವಣ್ಯ ಇಳಿಯೂರು, ಗೋಪಾಲಕೃಷ್ಣ ಭಟ್, ಶ್ರೀನಿವಾಸ ಭಟ್, ಲಿಂಗಪ್ಪ ಪೂಜಾರಿ, ರವೀಂದ್ರ ಟಿ.ಸಿ., ಜಯ ನಾೖಕ, ಶಿವಪ್ಪ ಪೂಜಾರಿ ಹಟದಡ್ಕ ಉಪಸ್ಥಿತರಿದ್ದರು. ಬಂಟ್ವಾಳ ತಾ.ಪಂ. ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ,ಆಡಳಿತ ಟ್ರಸ್ಟಿ ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲುಗುತ್ತು ಸ್ವಾಗತಿಸಿ, ಪ್ರಸ್ತಾವಿಸಿದರು. ಶಿಕ್ಷಕ ಪ್ರದೀಪ್ ಕುಮಾರ್ ವಂದಿಸಿದರು. ಶಿಕ್ಷಕ ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.