ಮುಂಬಯಿ: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚಳವು ಆರ್ಥಿಕ ಚೇತರಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಎಚ್ಚರಿಕೆಯ ಹೆಜ್ಜೆಯಿಟ್ಟಿರುವ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಜತೆಗೆ ಸ್ಥಳೀಯ ಮಟ್ಟದಲ್ಲಿ ಲಾಕ್‌ಡೌನ್ ಘೋಷಣೆಯಾಗುತ್ತಿದ್ದರೂ ಪ್ರಸ್ತುತ ಸಂದರ್ಭದಲ್ಲಿ ಸಾಲದ ಕಂತು ಪಾವತಿ ಅವಧಿ ಮುಂದೂಡಿಕೆಯ ಅಗತ್ಯವಿಲ್ಲ ಎಂದೂ ಆರ್‌ಬಿಐ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ:ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದರೆ ವಸತಿಗೃಹ ಹಂಚಿಕೆ ರದ್ದುಗೊಳಿಸುವುದಾಗಿ ನೋಟಿಸ್!
ಬುಧವಾರ ನಡೆದ 2020-22ನೇ ವಿತ್ತೀಯ ವರ್ಷದ ಮೊದಲ ಹಣಕಾಸು ನೀತಿ ಪರಾಮರ್ಶೆಯ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, “ಪ್ರಸ್ತುತ ಎಲ್ಲ ಉದ್ದಿಮೆಗಳೂ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದ್ದು, ಆರ್ಥಿಕ ಚಟುವಟಿಕೆಗಳನ್ನು
ಮುಂದುವರಿಸಿವೆ. ಹೀಗಿರುವಾಗ ಲೋನ್ ಮೊರಟೋರಿ ಯಂನ ಆವಶ್ಯಕತೆ ಸದ್ಯಕ್ಕಿಲ್ಲ. ಮುಂದೆ ಪರಿಸ್ಥಿತಿ ನೋಡಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಹೇಳಿದ್ದಾರೆ.
ಬಡ್ಡಿ ದರ ಬದಲಿಲ್ಲ: ಬುಧವಾರದ ಸಭೆಯಲ್ಲಿ ರೆಪೋ ದರ ವನ್ನು ಶೇ.4ರಲ್ಲೇ ಹಾಗೂ ರಿವರ್ಸ್ ರೆಪೋ ದರವನ್ನು ಶೇ.3.35ರಲ್ಲೇ ಮುಂದುವರಿಸಲು ಹಣಕಾಸು ಪರಾಮರ್ಶೆ ಸಮಿತಿಯ ಎಲ್ಲ ಸದಸ್ಯರೂ ಒಮ್ಮತದಿಂದ ನಿರ್ಧರಿಸಿದ್ದಾರೆ. ಕಳೆದ ವರ್ಷ ಸೋಂಕಿನ ಸಂಕಷ್ಟ ನಿವಾರಣೆ ಉದ್ದೇಶದಿಂದ ಸಾಲದ ಮೇಲಿನ ಬಡ್ಡಿ ದರವನ್ನು ಒಟ್ಟಾರೆ ಶೇ.1.15ರಷ್ಟು ಕಡಿತ ಮಾಡಲಾಗಿತ್ತು.