ಮಸ್ಕಿ: ವಿಧಾನಸಭೆ ಕ್ಷೇತ್ರದ ಉಪಚುನಾವಣೆ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಕೇವಲ ಪ್ರಚಾರದ ಅಬ್ಬರ, ರಾಜಕೀಯ ಪಕ್ಷ, ಅಭ್ಯರ್ಥಿಗಳ ಪ್ರತಿಷ್ಠೆ
ಮಾತ್ರವಲ್ಲದೇ, ಚುನಾವಣೆ ಖರ್ಚು-ವೆಚ್ಚದ ಸಂಗತಿಯೂ ಗಮನ ಸೆಳೆಯುತ್ತಿದೆ. ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರಕ್ಕೆ ಕೈ ಕೊಟ್ಟು ಬಿಜೆಪಿಗೆ ಸೇರ್ಪಡೆಯಾಗಿರುವ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮತ್ತು ಬಸನಗೌಡ ತುರುವಿಹಾಳ ಕಣದಲ್ಲಿದ್ದಾರೆ.
ಈ ಹಿಂದೆ 2018ರಲ್ಲಿ ನೇರ ಹಣಾ-ಹಣಿಯಲ್ಲಿದ್ದ ಇಬ್ಬರೇ ಮತ್ತೂಮ್ಮೆ ಎದುರು-ಬದುರಾಗಿದ್ದು, ಚಿಹ್ನೆಗಳು ಮಾತ್ರ ಅದಲು ಬದಲಾಗಿವೆ. ಆದರೆ, ಈ ಇಬ್ಬರು ಅಭ್ಯರ್ಥಿಗಳ ಪರವಾಗಿ ನಡೆದ ಚುನಾವಣೆ ಖರ್ಚು-ವೆಚ್ಚ, ಮತದಾರರ ಮೇಲೆ ಪರಿಣಾಮ ಬೀರಲು ಹರಿಸುತ್ತಿರುವ ಹಣದ ವೇಳೆಯೇ ಭಿನ್ನವಾಗಿದ್ದು, ಇದು ಅಖಾಡದಲ್ಲಿ ಹೆಚ್ಚು ಸದ್ದು ಮಾಡಲಾರಂಭಿಸಿದೆ.
ಏನಿದೆ ಸ್ಥಿತಿ?: ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಬೆನ್ನ ಹಿಂದೆ ಇಡೀ ರಾಜ್ಯ ಸರಕಾರವೇ ನಿಂತಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಉಪಚುನಾವಣೆಯಲ್ಲಿ ಬರುವ ಏನೇ ಖರ್ಚು-ವೆಚ್ಚವೆಲ್ಲವೂ ಪಕ್ಷ ಮತ್ತು ಪ್ರತಾಪಗೌಡ ಪಾಟೀಲ್ ವೈಯಕ್ತಿಕ ದುಡ್ಡು ಶೇ.60-40ಯಷ್ಟು ಹಂಚಿಕೆ ಮಾಡಿಕೊಂಡು ಪ್ರಚಾರಕ್ಕೆ ನುಗ್ಗಲಾಗಿದೆ. ಈ ಪ್ರಕಾರ ಎಲ್ಲವೂ ಕ್ಷೇತ್ರದಲ್ಲಿನ ಹೋಬಳಿವಾರು, ಹಳ್ಳಿವಾರು ಕೊಡು-ಕೊಳ್ಳುವಿಕೆ ಸದ್ದಿಲ್ಲದೆ ನಡೆದಿದೆ. ಬಹಿರಂಗವಾಗಿಯೂ ಈಗಿನಿಂದಲೇ ಹಣ ಹಂಚಿಕೆ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.
ವಿಶೇಷವಾಗಿ ಕಳೆದ ಹತ್ತು ದಿನಗಳಿಂದ ಇಲ್ಲಿಯೇ ಬಿಡಾರ ಹೂಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಣದ ಹೊಳೆಯೇ ಹರಿಸುತ್ತಾರೆ ಎನ್ನುವ ಆಪಾದನೆಗಲಿವೆ. ಆದರೆ ಕಾಂಗ್ರೆಸ್‌ನಲ್ಲಿ ಮಾತ್ರ ಈ ಸ್ಥಿತಿ ಭಿನ್ನವಾಗಿದೆ. ಕಾಂಗ್ರೆಸ್ ಪಕ್ಷದ ಪಾರ್ಟಿ ಫಂಡ್ ಜತೆಗೆ ರಾಯಚೂರು ಜಿಲ್ಲೆ, ನೆರೆ ಜಿಲ್ಲೆಯ ಕಾಂಗ್ರೆಸ್ ಮುಖಂಡರೇ ಹೆಚ್ಚು ಆಸಕ್ತಿ ವಹಿಸಿ ಚುನಾವಣೆ ಫಂಡಿಂಗ್ ಮಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಯಾರ್ಯಾರು?: ಆರ್.ಬಸನಗೌಡ ತುರುವಿಹಾಳ ಬಳಿ ದುಡ್ಡಿಲ್ಲ ಕಳೆದ ಚುನಾವಣೆಯಲ್ಲಿ ವಿಪರೀತ ಖರ್ಚು ಮಾಡಿ ಲಾಸ್ ಆಗಿದ್ದಾರೆ. ಹೀಗಾಗಿ ಪಕ್ಷದ ಮುಖಂಡರು, ಕಾರ್ಯಕರ್ತರೇ ಹಣ ನೀಡುವ ಒಪ್ಪಿಗೆ ನೀಡಿದ್ದರು. ಈ ಪ್ರಕಾರ ಹಲವು ಕಡೆಗಳಲ್ಲಿ ದೇಣಿಗೆ ಸಂಗ್ರಹಗಳ ಕೂಡ ನಡೆದಿದ್ದವು. ಆದರೆ ಈಗ ಇದರ ಜತೆಗೆ ಹಾಲಿ-ಮಾಜಿ ಶಾಸಕರು ಸಾಥ್ ನೀಡುತ್ತಿದ್ದಾರೆ. 50 ಲಕ್ಷ ರೂ.ನಿಂದ ಹಿಡಿದು 1 ಕೋಟಿ, 2 ಕೋಟಿವರೆಗೂ ಹಣ ಹಾಕಿ ಚುನಾವಣೆ ಎದುರಿಸಲಾಗುತ್ತಿದೆ. ಕುಷ್ಟಗಿ ಶಾಸಕ ಅಮರೇಗೌಡ ಬಯ್ನಾಪೂರ, ಲಿಂಗಸುಗೂರು ಶಾಸಕ ಡಿ.ಎಸ್. ಹೂಲಗೇರಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಭೋಸರಾಜು, ಮಾಜಿ ಸಂಸದ ಬಿ.ವಿ. ನಾಯಕ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಶಿವರಾಜ ತಂಗಡಗಿ, ಸೂರ್ಯನಾರಾಯಣ ರೆಡ್ಡಿ ಸೇರಿ ಹಲವು ಜನರು ಕಾಂಗ್ರೆಸ್ ಅಭ್ಯರ್ಥಿಗೆ ಆರ್ಥಿಕ ಪುನಶ್ಚೇತ ನೀಡಿದ್ದಾರೆ.
ಒಗ್ಗಟ್ಟಿನ ಅಸ್ತ್ರ: ಕಾಂಗ್ರೆಸ್‌ನ ಅಭ್ಯರ್ಥಿಗೆ ಆರ್ಥಿಕ ಬಲ ಇಲ್ಲದಿರುವುದೇ ಮುಖಂಡರ ಒಗ್ಗಟ್ಟಿನ ಅಸ್ತ್ರವಾಗಿದೆ. ಅಲ್ಲದೇ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್
ದೋಸ್ತಿ ಸರಕಾರಕ್ಕೆ ಸೆಡ್ಡು ಹೊಡೆದು ಬಿಜೆಪಿ ಸೇರ್ಪಡೆಯಾಗಲು ರೆಡಿಯಾಗಿದ್ದ ಮೊದಲ ವ್ಯಕ್ತಿ. ಹೀಗಾಗಿಯೇ ಇದರ ಪ್ರತೀಕಾರ ತೀರಿಸಿಕೊಳ್ಳಲು ಕಾಂಗ್ರೆಸ್ ತುದಿಗಾಲ ಮೇಲೆ ನಿಂತಿದೆ. ಇದಕ್ಕಾಗಿ ಪಾರ್ಟಿ ಫಂಡ್, ಅಭ್ಯರ್ಥಿ ಕೈಯಿಂದ ಹಣ ಹಾಕುವುದಕ್ಕಿಂತ ಹೆಚ್ಚಾಗಿ ರಾಯಚೂರು ಜಿಲ್ಲೆ ಹಿರಿಯ ರಾಜಕಾರಣಿಗಳು, ನೆರೆ-ಹೊರೆ ಜಿಲ್ಲೆಯ ಹಾಲಿ-ಮಾಜಿ ಶಾಸಕರು ಹೆಚ್ಚು ಫಂಡಿಂಗ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮೊದಲ ಉಪಚುನಾವಣೆ ಎದುರಿಸುತ್ತಿರುವ ಮಸ್ಕಿ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ.
*ಮಲ್ಲಿಕಾರ್ಜುನ ಚಿಲ್ಕರಾಗಿ