ಕಾಪು = ಕಾಡು (ಕಾವು, ಕಾನ, ಇವೆಲ್ಲ ಸಮಾನಾರ್ಥಕಗಳು) ಒಂದು ಕಾಲದಲ್ಲಿ ಇಲ್ಲಿ ಕಾಡು ಇದ್ದಿರಬೇಕು. ಕಾಪು = ರಕ್ಷಣೆ, ಕಾವಲು ಎಂಬ ಅರ್ಥಗಳು ಮತ್ತು ಸ್ವೀಕಾರಗಳು ಇತ್ತೀಚಿನವು. ಕ್ರಿ. ಶ. 750ರ ಬೆಳ್ಮಣ್ಣು ತಾಮ್ರ ಪಟ ಶಾಸನದಲ್ಲಿ ಕಾಪು ಹೆಸರಿದೆ. ಪುರಾಣ ಇತಿಹಾಸಗಳ ಹಿನ್ನೆಲೆಯೊಂದಿಗೆ ಕಾಪು ದಟ್ಟವಾದ ಜಾನಪದ ಹಿನ್ನೆಲೆಯನ್ನು ಹೊಂದಿದೆ.
ಕಾಪು ಸ್ಥಳನಾಮಕ್ಕೆ ಕ್ರಿ. ಶ. ಎಂಟನೇ ಶತಮಾನದಷ್ಟು ಪ್ರಾಚೀನತೆ ಇದೆ. ತಿರುಮಲರಸ ಮರª ಹೆಗ್ಗಡೆ ವಂಶಸ್ಥರ ಅಧಿಕಾರದಲ್ಲಿ ಕಾಪು ಗುರುತಿಸಲ್ಪಡುತ್ತದೆ. ಕ್ರಿ. ಶ. 14 ಮತ್ತು 15ನೇ ಶತಮಾನದ ವೇಳೆಯ ಒಪ್ಪಂದ ಶಾಸನಗಳಲ್ಲಿ ಕಾಪು ಮರª ಹೆಗ್ಗಡೆ ಹೆಸರು ನಮೂದಾಗಿದೆ. ಸೋಯಿದೇವ ಅಳುಪೇಂದ್ರನ ಶಾಸನವೊಂದು ಕಾಪುವಿನಲ್ಲಿದ್ದು, ಇದು ದಾನ ಶಾಸನವಾಗಿದೆ. ವೀರಗಲ್ಲುಗಳಿವೆ. ಬೀಡು ಧರ್ಮನಾಥ ಬಸದಿಯು ಬೀಡಿನ ಅಧಿಕಾರಿಗಳಾದ ಮರª ಹೆಗ್ಗಡೆಯವರ ಗತ ಇತಿಹಾಸಕ್ಕೆ ಸಾಕ್ಷಿಯಾಗಿವೆ.
ರಕ್ಷಣಾಪುರ ಎಂಬ ಉಪನಾಮವನ್ನು ಹೊಂದಿರುವ ಕಾಪು ಸ್ವಾತಂತ್ರ್ಯ ಪೂರ್ವದಿಂದಲೂ ವ್ಯಾವಹಾರಿಕ ತಾಣವಾಗಿ ಮತ್ತು ಸರಕು ಸಾಗಾಟ ಕೇಂದ್ರವಾಗಿ ಗುರುತಿಸಲ್ಪಡುತ್ತಿತ್ತು. ಹಡಗುಗಳ ಮೂಲಕ ತಾವು ತಂದ ಸರಕುಗಳನ್ನು ಇಳಿಸಿ ವ್ಯವಹಾರವನ್ನು ಕುದುರಿಸುತ್ತಿದ್ದರಿಂದ ಮತ್ತು ಅದರ ಜೊತೆಗೆ ರಾಜರ ಆಡಳಿತದ ಸ್ಪರ್ಶ, ತುಂಡರಸರ ಪ್ರಭಾವ ಮತ್ತು ಜಲಮಾರ್ಗವಾಗಿ ಬರುತ್ತಿದ್ದ ಹಡಗುಗಳಿಗೆ ತೀರ ಪ್ರದೇಶ ನಿಶಾನೆ ತೋರುವ ಲೈಟ್ ಹೌಸ್ ಕರಾವಳಿ ತೀರದ ಪ್ರದೇಶ ಇದ್ದಿದ್ದರಿಂದ ಕಾಪು ಬೀಚ್ ಮುಖ್ಯ ವ್ಯವಹಾರಿಕ ತಾಣವಾಗಿ ಗುರುತಿಸಲ್ಪಟ್ಟಿತ್ತು.
ಪ್ರವಾಸೋದ್ಯಮ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ, ಜನಪದ, ಸಾಮಾಜಿಕ ಕ್ಷೇತ್ರಗಳಲ್ಲಿನ ಸಾಧನೆ ಮತ್ತು ಬೆಳವಣಿಗೆಯಿಂದಾಗಿ ಕಾಪುವಿನ ಹೆಸರು ದೇಶ ವಿದೇಶಗಳಲ್ಲಿ ಪ್ರಚುರಕ್ಕೆ ಬಂದಿದೆ. ವಿಧಾನಸಭಾ ಕ್ಷೇತ್ರಕ್ಕೆ ಸೀಮಿತಗೊಂಡಿದ್ದ ಕಾಪು ಪ್ರಸ್ತುತ ಪುರಸಭೆ ಮತ್ತು ತಾಲೂಕು ಕೇಂದ್ರವಾಗಿಯೂ ಪರಿವರ್ತನೆಗೊಂಡಿರುವುದರಿಂದ ಕಾಪುವಿನ ಹೆಸರು ಮತ್ತಷ್ಟು ಪ್ರಸಿದ್ಧಿಗೆ ಬರುವಂತಾಗಿದೆ.
- ರಾಕೇಶ್ ಕುಂಜೂರು