Advertisement
ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆ ಕಣ ಇದೀಗ ತೀವ್ರ ರಂಗೇರಿದ್ದು, ಮೊದಲ ಹಂತಕ್ಕೆ ನಾಮಪತ್ರಹಿಂಪಡೆಯುವ ಅವಕಾಶವೂ ಮುಗಿದು ಹೋಗಿದೆ. ಬೆರಳೆಣಿಕೆ ಕ್ಷೇತ್ರಗಳು ಮಾತ್ರ ಅವಿರೋಧವಾಗಿವೆ. ಇನ್ನುಳಿದಂತೆ ತೀವ್ರ ಹಣಾಹಣಿಗೆ ಅಖಾಡ ಸಜ್ಜಾಗುತ್ತಿದೆ.
Related Articles
Advertisement
ಪರಿಸ್ಥಿತಿ ಬದಲಾಗಲು ಕಾರಣವೇನು? : ಧಾರವಾಡದ ಸಿಎಂಡಿಆರ್‌ಸಂಸ್ಥೆಯ ಪಂಚಾಯತ್‌ರಾಜ್ ತಜ್ಞರು ನಡೆಸಿರುವ ಅಧ್ಯಯನದ ಪ್ರಕಾರ, ಜನರಲ್ಲಿ ರಾಜಕೀಯ ಪ್ರಜ್ಞೆ ಬೆಳೆಯುತ್ತಿರುವುದು ಒಂದೆಡೆಯಾದರೆ, ಗ್ರಾಪಂ ಸ್ಥಾನಗಳು ಲಾಭದಾಯಕ ಹುದ್ದೆಯಾಗಿರುವುದರಿಂದ ಎಲ್ಲರಲ್ಲೂ ಚುನಾವಣೆಗೆ ತಾವೇ ನಿಂತು ಗೆಲ್ಲಬೇಕು ಎನ್ನುವ ಮನೋಭಾವ ಹೆಚ್ಚಾಗುತ್ತಿದೆಯಂತೆ. ಪ್ರಜಾಪ್ರಭುತ್ವದ ದೃಷ್ಟಿಯಿಂದ ಚುನಾವಣೆ ನಡೆಯುವುದು ಅತ್ಯಂತ ಮಹತ್ವದ್ದು. ಈಹಿಂದೆ ಹಳ್ಳಿಗಳಲ್ಲಿ ಎಲ್ಲ ಧರ್ಮ, ಜಾತಿಯ ಜನರು ತಮಗೆ ಸೂಕ್ತ ಎನಿಸಿದ ವ್ಯಕ್ತಿಯನ್ನು ಗ್ರಾಪಂಗೆ ಒಮ್ಮತದಿಂದ ಅವಿರೋಧ ಆಯ್ಕೆ ಮಾಡಿ ಸೌಹಾರ್ದತೆ ಮೆರೆಯುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.
ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ ಅವಿರೋಧ ಆಯ್ಕೆ : 2005ರಲ್ಲಿ ಜಿಲ್ಲೆಯ 127 ಗ್ರಾಪಂಗಳ 1746 ಸದಸ್ಯರ ಪೈಕಿ 211 ಜನರು ಅವಿರೋಧ ಆಯ್ಕೆಯಾಗಿದ್ದರು. 2010ರ ಗ್ರಾಪಂ ಚುನಾವಣೆಯಲ್ಲಿ 1746 ಸ್ಥಾನಗಳ ಪೈಕಿ ಅವಿರೋಧವಾಗಿ ಆಯ್ಕೆಯಾದವರ ಸಂಖ್ಯೆ 125ಕ್ಕೆ ಇಳಿಯಿತು. 2015ರ ಚುನಾವಣೆಯಲ್ಲಿದ್ದ ಒಟ್ಟು 1786 ಗ್ರಾಪಂ ಸದಸ್ಯ ಸ್ಥಾನಗಳ ಪೈಕಿ ಕೇವಲ 41 ಜನರು ಮಾತ್ರ ಅವಿರೋಧ ಆಯ್ಕೆಯಾಗಿದ್ದು. ಇದೀಗ 2020ರ ಚುನಾವಣೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಂದರೆ ವರ್ಷದಿಂದ ವರ್ಷಕ್ಕೆ ಅವಿರೋಧ ಆಯ್ಕೆಯ ಸಂಖ್ಯೆ ಗಣನೀಯವಾಗಿ ಕುಸಿತ ಕಾಣುತ್ತಿದೆ.
ಗುಜರಾತ್‌ನ ಗೆದ್ದಿದೆ “ಸಮ್ರಸ್’ ಪದ್ಧತಿ : ಗುಜರಾತ್‌ನಲ್ಲಿ ಸಮ್ರಸ್ ಎಂಬ ಪದ್ಧತಿ ಈಗಲೂ ಜಾರಿಯಲ್ಲಿದ್ದು, 2015ರ ಗ್ರಾಪಂ ಚುನಾವಣೆಯಲ್ಲಿ ಇಲ್ಲಿನ ಹಳ್ಳಿಗಳ ಶೇ.65 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದವು. ಹಳ್ಳಿಯ ಜನರೆಲ್ಲ ಸೇರಿ ಸೂಕ್ತ ವ್ಯಕ್ತಿಯನ್ನು ಗ್ರಾಪಂ ಸದಸ್ಯ ಮತ್ತು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಮಾಡುತ್ತಾರೆ. ಇಲ್ಲಿನ ಸರ್ಕಾರ ಹೀಗೆ ಚುನಾವಣೆಯ ಖರ್ಚುಉಳಿಸಿದ ಗ್ರಾಪಂಗಳಿಗೆ ಹತ್ತು ಲಕ್ಷ ರೂ. ವರೆಗೂ ಬೋನಸ್ ಹಣ ಕೊಡುತ್ತಿದೆ! ಆದರೆ, ಆಂಧ್ರ ಪ್ರದೇಶದಲ್ಲಿ ಸದಸ್ಯ ಸ್ಥಾನಕ್ಕೆ ಲಕ್ಷಾಂತರ ಹಾಗೂ ಅಧ್ಯಕ್ಷ ಸ್ಥಾನಕ್ಕೆ ವ್ಯಕ್ತಿಯೊಬ್ಬ 6 ಕೋಟಿ ರೂ. ಹಣ ಹಾಕಿದ್ದು ದಾಖಲಾಗಿತ್ತು. ರಾಜ್ಯದಲ್ಲಿ ಈ ವರ್ಷ ಬಳ್ಳಾರಿ ಜಿಲ್ಲೆಯಲ್ಲಿ ಪಂಚಾಯಿತಿ ಸ್ಥಾನಗಳು ಹಣಕ್ಕೆ ಹರಾಜಾಗಿದ್ದು ಸಾಮಾಜಿಕ ಜಾಲತಾಣದ ಮೂಲಕ ದೊಡ್ಡ ಸುದ್ದಿಯಾಗಿತ್ತು. ಗ್ರಾಪಂ ಚುನಾವಣೆಗಳಲ್ಲಿ ಹಣ, ಹೆಂಡ ಮತ್ತು ಜಿದ್ದಾಜಿದ್ದಿ ಮನೋಭಾವಗಳೇ ಕೆಲಸ ಮಾಡುತ್ತಿರುವುದು ಹಳ್ಳಿಗಳ ವಾತಾವರಣವನ್ನು ಮತ್ತಷ್ಟು ಕಲುಷಿತಗೊಳಿಸುತ್ತಿದೆ. ಹೀಗಾಗಿ ಸೂಕ್ತ ವ್ಯಕ್ತಿಯೊಬ್ಬನ ಅವಿರೋಧ ಆಯ್ಕೆಯೇ ಉತ್ತಮ ಎನಿಸುತ್ತದೆ.
ರಾಜಕೀಯದಲ್ಲಿ ಸೇವಾ ಮನೋಭಾವಕ್ಕಿಂತ ತಾವು ಮಿಂಚಬೇಕು ಎನ್ನುವ ಮನೋಭಾವ ಹೆಚ್ಚಾಗುತ್ತಿದೆ. ಎನ್‌ಆರ್‌ಇಜಿ ದುಡ್ಡು ಮತ್ತು ಸಾಮಾಜಿಕವಾಗಿ ಗುರುತಿಸಿಕೊಳ್ಳುವ ಮನೋಭಾವ ಅವಿರೋಧ ಆಯ್ಕೆ ಕಡಿಮೆಯಾಗಿರುವುದಕ್ಕೆ ಪ್ರಮುಖ ಕಾರಣ.
–ಡಾ| ನಯನತಾರಾ, ಪಂಚಾಯತ್‌ರಾಜ್ ತಜ್ಞರು, ಸಿಎಂಡಿಆರ್
-ಬಸವರಾಜ ಹೊಂಗಲ್