ನಾರಾಯಣಪುರ: ಗ್ರಾಮದ ಅಭಿವೃದ್ಧಿಗೆ ಸ್ಥಳೀಯ ಆಡಳಿತದ ಶಕ್ತಿ ಕೇಂದ್ರವಾಗಿರುವ ಗ್ರಾಪಂಚುನಾವಣೆಗೆ ವಾರ್ಡ್‌ವಾರು ಹುರಿಯಾಳುಗಳು ಸ್ಪರ್ಧೆಗಿಳಿಯಲು ಸಜ್ಜಾಗಿದ್ದು, ಗೆಲುವಿಗಾಗಿ ಮತದಾರರ ಓಲೈಕೆಯತ್ತ ಚಿತ್ತ ನೆಟ್ಟಿದ್ದಾರೆ.
ಪ್ರತಿ ವಾರ್ಡ್‌ಗಳಲ್ಲಿ ತುರಿಸಿನ ಸ್ಪರ್ಧೆ ಏರ್ಪಟ್ಟಿದೆ. ಪ್ರತಿ ವಾರ್ಡ್‌ಗೆ ನಾಯಕತ್ವ ಗುಣ, ಯೋಗ್ಯ ಮತ್ತು ಗೆಲ್ಲುವ ಹುರಿಯಾಳುಗಳನ್ನು ಚುನಾವಣೆಗೆ ನಿಲ್ಲಿಸುವ ಗುರಿಯೊಂದಿಗೆ ಒಂದೇ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಆಯಾ ಪಂಚಾಯಿತಿ ಸದಸ್ಯ ಬಲಕ್ಕೆ ಬೇಕಾಗುವ ಬಹುಮತದ ಮ್ಯಾಜಿಕ್ ನಂಬರ್ ತಲುಪಲು ತಂತ್ರ ಹೆಣೆಯಲಾಗುತ್ತಿದೆ. ಕೆಲವೆಡೆ ಇಡೀ ಪಂಚಾಯಿತಿ ಎಲ್ಲ ಸದಸ್ಯರನ್ನು ಅವಿರೋಧ ಆಯ್ಕೆ ಮಾಡುವ ಸಾಹಸಕ್ಕೂ ಮುಂದಾಗಿವೆ. ಈ ಫಲಿತಾಂಶ ಬರುವ ಎಲ್ಲ ಚುನಾವಣೆಗಳಿಗೆ ದಿಕ್ಸೂಚಿಯಾಗುವ ಸಾಧ್ಯತೆ ರಾಜಕೀಯ ಪಕ್ಷಗಳು ಅಲ್ಲಗಳಿಯುವಂತಿಲ್ಲ.
24 ಸದಸ್ಯ ಬಲದ ನಾರಾಯಣಪುರ ಗ್ರಾಪಂನಲ್ಲಿ ನಾರಾಯಣಪುರ ಗ್ರಾಮ,ಹನುಮನಗರ, ಮೇಲಿನ ಗಡ್ಡಿ, ಜಂಗಿನಗಡ್ಡಿ ಗ್ರಾಮಗಳ 8 ವಾರ್ಡ್‌ಗಳಲ್ಲಿನ ಪ್ರತಿ ವಾರ್ಡ್ ನಲ್ಲಿ ಮೀಸಲಾತಿ ಆಧಾರದಲ್ಲಿ 3 ಸದಸ್ಯರನ್ನುಆಯ್ಕೆ ಮಾಡಿ ಪಂಚಾಯಿತಿಗೆ ಕಳುಹಿಸಿಕೊಡುವ ಕಸರಸ್ತು ನಡೆದಿದೆ. ಮೊದಲ ಹಂತದ ಚುನಾವಣೆ ಸಮೀಪಿಸುತ್ತಿದ್ದು, ಸ್ಪರ್ಧಿಗಳು ಉಮೇದುವಾರಿಕೆ ಸಲ್ಲಿಸಲು ಮುಂದಾಗಿದ್ದಾರೆ. ಅಗತ್ಯ ದಾಖಲಾತಿ ಸಜ್ಜುಗೊಳಿಸುವಲ್ಲಿ ನಿರತರಾಗಿದ್ದಾರೆ.
ಜಿಲ್ಲೆಯ ಮೊದಲ ಹಂತದ ಚುನಾವಣೆಗೆ ಡಿ.7ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು,ಡಿ.11 ನಾಮಪತ್ರ ಸಲ್ಲಿಸುವ ಕೊನೆ ದಿನವಾದರೆ, ಡಿ.12 ನಾಮಪತ್ರ ಪರಿಶೀಲನೆ, ಡಿ.14 ನಾಮಪತ್ರ ಹಿಂಪಡೆಯುವ ಕೊನೆ ದಿನ. ಕ್ರಮಬದ್ಧವಾಗಿನಾಮಪತ್ರ ಸಲ್ಲಿಸಿದವರು ಚುನಾವಣೆ ಕಣದಲ್ಲಿ ಉಳಿಯಲಿದ್ದಾರೆ. ಡಿ.22ರಂದು ಮತದಾನ, ಡಿ.30ರಂದು ಮತ ಎಣಿಕೆ ಜರುಗಲಿದೆ.
ಪಕ್ಷಾಂತರ: ಪ್ರತಿಷ್ಠೆಯ ಪ್ರಶ್ನೆಯಾಗಲಿರುವ ಗ್ರಾಪಂ ಚುನಾವಣೆಯು ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿರುತ್ತದೆ. ಜೊತೆಗೆ ಪಕ್ಷದ ಬೆಂಬಲ ದೊರೆಯದವರು ಪಕ್ಷಾಂತರಗೊಳ್ಳುವುದಕ್ಕೂ ಸಿದ್ಧರಾಗುವ ಮನಸ್ಥಿತಿಯಿಂದ ಪಕ್ಷಾಂತರಕ್ಕೂ ಸೈ ಎನ್ನುತ್ತಾರೆ.
–ಬಸವರಾಜ ಎಂ. ಶಾರದಳ್ಳಿ