ಕೆಜಿಎಫ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ “ಕೆಜಿಎಫ್-2′ ಚಿತ್ರದ ಚಿತ್ರೀಕರಣಕ್ಕೆ ಸ್ಥಳೀಯ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನಗರದ ಕೆನಡೀಸ್ ಲೈನಿನ ಬಳಿ ಇರುವ ಸೈನೈಡ್ ಗುಡ್ಡದ ಮೇಲೆ ತಿಂಗಳಿಂದ ಕೆಜಿಎಫ್-2 ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ನಟ ಯಶ್ ಮತ್ತು ಸಹನಟರು ಭಾಗವಹಿಸುತ್ತಿದ್ದ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿತ್ತು.
ಈ ಸಂದರ್ಭದಲ್ಲಿ ನಗರದ ನಿವಾಸಿ ಶ್ರೀನಿವಾಸ್, ಪರಿಸರಕ್ಕೆ ಹಾನಿ ಆಗುತ್ತಿದೆ ಎಂಬ ಆರೋಪ ಮಾಡಿ ಚಿತ್ರೀಕರಣಕ್ಕೆ ತಡೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ 2ನೇ ಅಡಿಷನಲ್ ಸಿವಿಲ್ ಜೆಎಂಎಫ್ ನ್ಯಾಯಾಲಯ ಸೆ.23ರವರೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಎರಡನೇ ಹಂತದ ಚಿತ್ರೀಕರಣ: ಕೆಜಿಎಫ್ ಫಸ್ಟ್ ಚಿತ್ರದ ಚಿತ್ರೀಕರಣ ಕೂಡ ನಗರದ ಸೈನೈಡ್ ಗುಡ್ಡದ ಮೇಲೆಯೇ ನಡೆದಿತ್ತು. ಮೂರು ತಿಂಗಳ ಕಾಲ ದುಬಾರಿ ವೆಚ್ಚದಲ್ಲಿ ಬಿಜಿಎಂಎಲ್ ಕಾಲೋನಿಗಳು ಮತ್ತು ಶಾಫ್ಟ್ ಸೆಟ್‌ನ್ನು ಹಾಕಲಾಗಿತ್ತು. ಶೂಟಿಂಗ್ ಮುಗಿದ ಮೇಲೆ ಎಲ್ಲವನ್ನೂ ನಾಶಪಡಿಸಲಾಗಿತ್ತು. ಮೊದಲ ಚಾಪ್ಟರ್ ಯಶಸ್ಸು ಸಾಧಿಸಿದ ನಂತರ ಎರಡನೇ ಚಾಪ್ಟರ್ ತೆಗೆಯುವಾಗ ಪುನಃ ಅದೇ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
ಪುನಃ ಇಡೀ ಕಾಲೋನಿಯ ಮತ್ತು ಶಾಫ್ಟ್ ಸೆಟ್‌ನ್ನು ಹಾಕಲಾಗಿದೆ. ಚಿತ್ರೀಕರಣದ ದೃಶ್ಯ ಮತ್ತು ಮಾಹಿತಿ ಹೊರಗೆ ಹೋಗಬಾರದು ಎಂಬ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಯನ್ನೂ ಹಾಕಲಾಗಿದೆ. ಚಿತ್ರೀಕರಣ ನೋಡಲು ಬರುವವರನ್ನೂ ನಿರ್ಬಂಧಿಸಲಾಗಿದೆ. ಈಚೆಗೆ ಚಿತ್ರೀಕರಣ ನೋಡಲು ಬಂದ ಗೋಣಮಾಕನಹಳ್ಳಿಯ ವ್ಯಕ್ತಿಗೂ ಮತ್ತು ಸಿನಿಮಾ ತಂಡದವರಿಗೆ ಘರ್ಷಣೆಯಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಂಡದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.