ರಾಯಚೂರು: ರಾಯಚೂರು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟಗೊಂಡರೂ ಯಾವುದೇ ಪಕ್ಷಕ್ಕೆ ನಿಚ್ಚಳ ಬಹುಮತ ಇಲ್ಲದ ಕಾರಣ ಸಮಸ್ಯೆ ತಲೆದೋರಿದೆ. ಕಾಂಗ್ರೆಸ್ ಮಾತ್ರ ಹೇಗಾದರೂ ಅ ಧಿಕಾರ ಹಿಡಿಯುವ ನಿಟ್ಟಿನಲ್ಲಿ ಪಕ್ಷೇತರರನ್ನು ಹೈಜಾಕ್ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಾಂಗ್ರೆಸ್ ಬಿ ಫಾರಂ ನೀಡಿಲ್ಲ ಎನ್ನುವ ಕಾರಣಕ್ಕೆ ಪಕ್ಷಕ್ಕೆ ಸಡ್ಡು ಹೊಡೆದು ಗೆಲುವು ಸಾಧಿ ಸಿದ ಪಕ್ಷೇತರರೇ ಈಗ ಕಾಂಗ್ರೆಸ್‌ಗೆ ಆಸರೆಯಾಗಬೇಕಿದೆ. ಇದರಿಂದ ಕಾಂಗ್ರೆಸ್ ತನ್ನ ನಿಷ್ಠಾವಂತ ಸದಸ್ಯರನ್ನು ಹೊರತಾಗಿಸಿ ಉಳಿದ ಸದಸ್ಯರು, ಪಕ್ಷೇತರರನ್ನು ಹಿಡಿದಿಡುವ ಯತ್ನ ನಡೆಸಿದೆ.
ಅಧ್ಯಕ್ಷ ಸ್ಥಾನ ಬಿಸಿಎಗೆ ಮೀಸಲಾಗಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರರಲ್ಲೂ ಆಕಾಂಕ್ಷಿಗಳಿದ್ದಾರೆ. ಬಿಜೆಪಿ 12 ಸ್ಥಾನದಲ್ಲಿ ಗೆಲುವು ಸಾಧಿಸಿದ್ದು, ಸಂಸದ, ಶಾಸಕ ಸೇರಿ 14 ಸ್ಥಾನಗಳಾಗುತ್ತವೆ. ಇನ್ನೂ ನಾಲ್ಕು ಸ್ಥಾನ ಬೇಕಿದ್ದು,ಆಪರೇಶನ್ ಕಮಲ ಅನಿವಾರ್ಯ. ಪಕ್ಷದ ಮುಖಂಡರು ಪಕ್ಷೇತರರನ್ನು ಸೆಳೆಯಲು ಆ ದಿಸೆಯಲ್ಲೂ ಕಸರತ್ತು ನಡೆಸಿದ್ದಾರೆ ಎನ್ನಲಾಗುತ್ತಿದೆ.
ಅಲ್ಪಸಂಖ್ಯಾತರ ಬೇಡಿಕೆ: ಕಾಂಗ್ರೆಸ್ ಮತ್ತುಪಕ್ಷೇತರರಲ್ಲಿ ಐವರು ಮುಸ್ಲಿಂ ಸದಸ್ಯರಿದ್ದು, ಈಬಾರಿ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ನೀಡುವಂತೆ ಒತ್ತಾಯ ಕೇಳಿ ಬಂದಿದೆ. ಕಾಂಗ್ರೆಸ್‌ನಲ್ಲಿ ಒಬ್ಬರು ಅಲ್ಪಸಂಖ್ಯಾತರಿದ್ದರೆ, ಪಕ್ಷೇತರರಲ್ಲಿ ನಾಲ್ವರಿದ್ದಾರೆ. ಅದರಲ್ಲಿ ಸಾಜಿದ್ ಸಮೀರ್ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಅಲ್ಪಸಂಖ್ಯಾತರಿಗೆ ಅಧಿಕಾರ ಸಿಕ್ಕಿಲ್ಲ. ಈಗ ಅವಕಾಶವಿದ್ದು, ನೀಡುವಂತೆ ಒತ್ತಾಯ ಕೇಳಿ ಬಂದಿದೆ ಎನ್ನಲಾಗುತ್ತಿದೆ. ಜೆಡಿಎಸ್ ಸದಸ್ಯರ ಒಲವು: ಮೂರು ಸ್ಥಾನಗಳಲ್ಲಿ ಗೆಲುವು ಸಾಧಿ ಸಿದ್ದ ಜೆಡಿಎಸ್ ಒಬ್ಬ ಸದಸ್ಯನ ಸಾವಿನಿಂದ ಎರಡು ಸ್ಥಾನಕ್ಕೆ ಕುಸಿದಿದೆ. ನಿರ್ಣಾಯಕ ಪಾತ್ರವಲ್ಲದಿದ್ದರೂ ಆಡಳಿತರೂಢ ಪಕ್ಷಕ್ಕೆ ಜೈ ಎನ್ನುವ ಅನಿವಾರ್ಯತೆ ಈ ಪಕ್ಷಕ್ಕಿದೆ. ಹೀಗಾಗಿ ಜೆಡಿಎಸ್‌ನ ಇಬ್ಬರು ಸದಸ್ಯರು ಕೂಡ ಕಾಂಗ್ರೆಸ್ ಪರ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಸಂಖ್ಯಾಬಲ 21ಕ್ಕೇರಿದ್ದು, ಅಧಿಕಾರ ಹಿಡಿಯುವ ವಿಶ್ವಾಸ ಹೆಚ್ಚಿಸಿಕೊಂಡಿದೆ.
ಬಿಜೆಪಿ ತಂತ್ರಗಾರಿಕೆ: ಬಹುಮತ ಇಲ್ಲದ ಕಾರಣ ಬಿಜೆಪಿಗೆ ಪಕ್ಷೇತರರ ನೆರವು ಅನಿವಾರ್ಯವಾಗಿದ್ದು, ಆಪರೇಶನ್ ಕಮಲದ ತಂತ್ರಗಾರಿಕೆ ನಡೆಸಿದೆ ಎನ್ನಲಾಗುತ್ತಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಇರುವ ಸದಸ್ಯರನ್ನು ಸೆಳೆಯುವ ಮೂಲಕ ಅಧಿಕಾರ ಹಂಚಿಕೆ ಆಮಿಷವೊಡ್ಡಿ ಚುಕ್ಕಾಣಿ ಹಿಡಿಯುವ ತಂತ್ರಗಾರಿಕೆ ನಡೆಸಿದೆ.ಬಿಜೆಪಿಯಲ್ಲೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್‌ನಲ್ಲಿ ಅಧಿಕಾರ ಸಿಗದೆ ಅಸಮಾಧಾನಗೊಂಡ ಸದಸ್ಯರನ್ನು ಸೆಳೆದರೂ ಅಚ್ಚರಿ ಇಲ್ಲ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಇಬ್ಬರು ಹಾಗೂ ಪಕ್ಷೇತರರಲ್ಲಿ ಒಬ್ಬರು ಮಾತ್ರ ಅರ್ಹರಿದ್ದು, ಪಕ್ಷೇತರ ಸದಸ್ಯರಿಗೆ ಮಣೆ ಹಾಕುವ ಸಾಧ್ಯತೆ ಇದೆ.
ಪಕ್ಷೇತರರ ಬೇಡಿಕೆ ಸಾಧ್ಯತೆ: ಕಾಂಗ್ರೆಸ್, ಬಿಜೆಪಿಯಷ್ಟೇ ಸಮಬಲವನ್ನು ಪಕ್ಷೇತರರು ಹೊಂದಿದ್ದಾರೆ. ಕಾಂಗ್ರೆಸ್‌ನಿಂದ ಹೊರಬಂದು ಸ್ಪರ್ಧಿಸಿ ಗೆದ್ದರೂ ಅವರು ಪಕ್ಷದ ನಂಟು ತೊರೆದಿಲ್ಲ. ಆದರೆ, ಅಧಿಕಾರಕ್ಕಾಗಿ ಪಕ್ಷೇತರರು ಒಗ್ಗೂಡಿದಲ್ಲಿ ಚಿತ್ರಣ ಬದಲಾಗಲಿದೆ. ಹಿಂದೆ ಕೂಡ ಇಂಥ ನಿದರ್ಶನ ನಡೆದಿದೆ. ಪಕ್ಷೇತರರಾಗಿ ಗೆಲುವು ಸಾಧಿಸಿದ್ದ ಐವರು ಅಧಿಕಾರಕ್ಕಾಗಿ ಬೇಡಿಕೆ ಇಟ್ಟಿದ್ದ ನಿದರ್ಶನವೂ ಇದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳು ಪಕ್ಷೇತರರಲ್ಲಿದ್ದಾರೆ. ಆದರೆ, ಕಾಂಗ್ರೆಸ್ ಸದಸ್ಯ ಈ.ವಿನಯಕುಮಾರ ಮೇಲೆ ಕೈ ಪಡೆ ಒಲವು ಹೆಚ್ಚಾಗಿದೆ. ಕಾಂಗ್ರೆಸ್‌ನ ಬಣ ರಾಜಕೀಯ ಭುಗಿಲೆದ್ದಲ್ಲಿ ಮತ್ತೆ ಪರಿಸ್ಥಿತಿ ಬದಲಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ಪಕ್ಷೇತರರಾಗಿ ಗೆಲುವು ಸಾಧಿಸಿದವರೆಲ್ಲ ಮೂಲ ಕಾಂಗ್ರೆಸ್ಸಿಗರೇ. ಅವರು ಇಂದಿಗೂ ಪಕ್ಷದೊಂದಿಗೆ ಇದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮೂವರು ಆಕಾಂಕ್ಷಿಗಳಿದ್ದು, ಯಾರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಚರ್ಚೆ ನಡೆದಿದೆ. ಅಧ್ಯಕ್ಷ ಸ್ಥಾನಕ್ಕಾಗಿ ಬೇಡಿಕೆಯೂ ಇದೆ. ಕಾಂಗ್ರೆಸ್‌ಗೆ ನಿಚ್ಚಳ ಬಹುಮತವಿದ್ದು, ಅಧಿಕಾರ ಹಿಡಿಯುವುದು ಖಚಿತ
. -ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಮುಖಂಡ
ಬಹುಮತವಿಲ್ಲ. ಬಿಜೆಪಿಗೂ ಅಧಿಕಾರ ಹಿಡಿಯುವ ಅವಕಾಶಗಳಿವೆ. ಮೀಸಲಾತಿ ಪ್ರಕಾರ ಪಕ್ಷದಲ್ಲಿ ಅರ್ಹ ಅಭ್ಯರ್ಥಿಗಳಿದ್ದಾರೆ. ಈ ಕುರಿತು ಪಕ್ಷದ ಮುಖಂಡರು, ಸದಸ್ಯರು ಚರ್ಚೆ ನಡೆಸಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. –
ರಮಾನಂದ ಯಾದವ್, ಬಿಜೆಪಿ ಜಿಲ್ಲಾಧ್ಯಕ್ಷ